Thursday, September 19, 2024

ಪ್ರಾಯೋಗಿಕ ಆವೃತ್ತಿ

ದಿನೇಶ್‌ ಗುಂಡೂರಾವ್ ಪತ್ನಿ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಿಜೆಪಿ ನಾಯಕ ಯತ್ನಾಳ್‌ಗೆ ಹೈಕೋರ್ಟ್ ತೀವ್ರ ತರಾಟೆ

“ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗದುಕೊಂಡಿದೆ ಎಂದು ವರದಿಯಾಗಿದೆ.

ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ (ತಬಸ್ಸುಂ ರಾವ್) ಅವರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ತಡೆಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಯತ್ನಾಳ್ ವಿರುದ್ದ ಕಿಡಿಕಾರಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಯತ್ನಾಳ್ ಅವರಿಗೆ ಪ್ರಶ್ನೆಯೆತ್ತಿದ್ದ ನ್ಯಾಯಮೂರ್ತಿ, “ಯತ್ನಾಳ್ ಅವರೇ ಇದೆಲ್ಲ ನಿಮಗೆ ಏಕೆ ಬೇಕು? ಪಾಕಿಸ್ತಾನ ಇದೆ ಎಂದರೆ ಏನರ್ಥ? ನೀವ್ಯಾಕೆ ಹೇಳಿಕೆ ಕೊಡಬೇಕು? ಅದರಿಂದ ನಿಮಗೇನು ಸಿಗುತ್ತದೆ? ನಾನು ಪ್ರತಿ ಬಾರಿ ಹೇಳುತ್ತಿದ್ದೇನೆ, ಕೆಸರೆರಚಾಟ ನಿಲ್ಲಬೇಕು” ಎಂದಿದ್ದಾರೆ.

“ಯಾರದ್ದೋ ಪತ್ನಿ ಮುಸ್ಲಿಂ ಎಂದ ಮಾತ್ರಕ್ಕೆ ಅರ್ಧ ಪಾಕಿಸ್ತಾನ ಎನ್ನಬಹುದೇ? ಏನದು? ಇದು ಮಾತನಾಡುವ ರೀತಿಯಲ್ಲ. ಇದು ಸರಿಯಲ್ಲ. ನೀವು ವೈಯಕ್ತಿಕ ಹೇಳಿಕೆ ಏಕೆ ನೀಡುತ್ತೀರಿ? ನಾನು ಇದಕ್ಕೆ ತಡೆ ನೀಡುವುದಿಲ್ಲ. ನೀವು ಎಲ್ಲರನ್ನೂ ಹಾಗೆ ವ್ಯಾಖ್ಯಾನಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾಗಿದ್ದ ತಬು ರಾವ್‌ ಪರ ವಕೀಲರಾದ ಎಸ್‌ ಎ ಅಹ್ಮದ್‌ ಮತ್ತು ಸೂರ್ಯ ಮುಕುಂದರಾಜ್‌ ಅವರು “ಅರ್ಜಿದಾರರು ರಾಜಕೀಯದಲ್ಲಿಲ್ಲ. ಆದರೂ, ಈ ರೀತಿಯ ಹೇಳಿಕೆ ನೀಡಲಾಗಿದೆ”ಎಂದಿದ್ದಾರೆ.

ಯತ್ನಾಳ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ದಿನೇಶ್‌ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಲಾಗಿದೆಯಷ್ಟೆ. ಮಾರನೆಯ ದಿನ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ನಾಳೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು” ಎಂದು ಕೋರಿದ್ದಾರೆ.

ತಡೆ ನೀಡಲು ನಿರಾಕರಿಸಿದ ನ್ಯಾಯಾಧೀಶರು, ತಬು ರಾವ್ ಪರ ವಕೀಲ ಎಸ್‌ ಎ ಅಹ್ಮದ್‌ ಅವರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.

ಪ್ರಕರಣದ ಹಿನ್ನೆಲೆ : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ಎನ್‌ಐಎ ತಂಡ ವಿಚಾರಣೆಗೆ ಒಳಪಡಿಸಿದೆ ಎಂದು ಏಪ್ರಿಲ್ 5, 2024ರಂದು ವರದಿಯಾಗಿತ್ತು.

ಈ ಬೆನ್ನಲ್ಲೇ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದ ಸಚಿವ ದಿನೇಶ್ ಗುಂಡೂರಾವ್, “ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇ ಬೇಕು” ಎಂದಿದ್ದರು.

ಈ ಕುರಿತು ಮಾಧ್ಯವರ ಪ್ರಶ್ನೆಗೆ ಉತ್ತರಿಸಿದ್ದ ಯತ್ನಾಳ್ “ಹೆಚ್ಚು ಕಡಿಮೆ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶದ ವಿರುದ್ದ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಆಗಿಬಿಟ್ಟಿದೆ” ಎಂದಿದ್ದರು.

ಯತ್ನಾಳ್ ಹೇಳಿಕೆ ತಿರುಗೇಟು ನೀಡಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ “ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಯತ್ನಾಳ್ ಅವರ ಹೇಳಿಕೆಯು ಅವಹೇಳನಕಾರಿ ಮತ್ತು ಮಾನಹಾನಿಕರವಾಗಿದೆ. ನಾನು ಮುಸಲ್ಮಾನಳಾಗಿ ಹುಟ್ಟಿರಬಹುದು. ಹಾಗಂತ ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳಲಿದೆಯಾ? ಪ್ರಧಾನಿ ಮೋದಿ, ಜೆಪಿ ನಡ್ಡಾ ಅವರು ಈ ವಾಡಿಕೆಯ ತಪ್ಪಿತಸ್ಥನ ವಿರುದ್ದ ಕ್ರಮ ಕೈಗೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎಕ್ಸ್ ಪೋಸ್ಟ್ ಟ್ಯಾಗ್ ಮಾಡಿದ್ದರು.

ತಬುರಾವ್ ಅವರ ದೂರು ಪರಿಗಣಿಸಿದ್ದ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!