ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಪತ್ನಿ ನಾಗಮ್ಮ ಪುಟ್ಟರಾಜುರವರು ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀ ಯೋಗಾನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಶ್ರೀ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನದ ಬಳಿ ಶಾಸಕ ಪುಟ್ಟರಾಜು ಅವರ ನೂರಾರು ಬೆಂಬಲಿಗರು, ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿ ಪುಟ್ಟರಾಜು ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದರು.
ಶಾಸಕ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು, ಪುತ್ರ ಶಿವರಾಜು, ಸೊಸೆ, ಮಗಳು ಸೇರಿದಂತೆ ಕುಟುಂಬ ಸಮೇತ ನೂರಾರು ಅಭಿಮಾನಿಗಳೊಂದಿಗೆ ಮೇಲುಕೋಟೆ ಬೆಟ್ಟದ ಮೇಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು.
ಅಭಿಮಾನಿಗಳ ಹರಕೆಯಂತೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಡಲಾಗಿದ್ದ ಈಡುಗಾಯಿಗಳನ್ನು ಶಾಸಕ ಪುಟ್ಟರಾಜು ಅವರು ಒಡೆಯುವ ಮೂಲಕ ಅಭಿಮಾನಿಗಳ ಹರಕೆ ತೀರಿಸಿದರು. ನಂತರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಭಿಮಾನಿಗಳು ಶಾಸಕರ ಪರ ಜೈಕಾರ ಕೂಗುತ್ತಾ ಮೆಟ್ಟಿಲು ಹತ್ತಿ, ಅಭಿಮಾನ ಮೆರೆದರು. ಪೂಜಾ ಕಾರ್ಯಕ್ರಮ ಮುಗಿದ ನಂತರ ಅಭಿಮಾನಿಗಳಿಗೆ,ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.