Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವ್ಯದ ಅರಿವು ವಿಶ್ವದಲ್ಲಿರುವ ಕನ್ನಡಿಗರಿಗೂ ತಲುಪಲಿ: ಮೀರಾ ಶಿವಲಿಂಗಯ್ಯ

ಕವಿಗೋಷ್ಟಿಯ ಸಾಹಿತ್ಯದ ಗುಣಾತ್ಮಕ ಅಂಶಗಳ ಪರಿಚಯವನ್ನು, ಹೊಸತನದ ಅರಿವನ್ನು ವಿಶ್ವದಾದ್ಯಂತ ದೂರದಲ್ಲಿ ನೆಲೆಸಿರುವ ಕನ್ನಡಿಗರಿಗೂ ತಲುಪಿಸಬೇಕು ಎಂದು ಎಸ್. ಬಿ. ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು. ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಯುವ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಕಲೆಗಳಿಗೆ ಪ್ರಚಾರವೆನ್ನುವುದು ಸಾಣೆ ಇದ್ದಂತೆ. ಇದರಿಂದ ಅವುಗಳ ಹೊಳಪು, ಹಿರಿಮೆ ಹೆಚ್ಚುತ್ತದೆ ಎಂದರು.

ಉತ್ತಮ ಗುಣಮಟ್ಟದ ಸಾಹಿತ್ಯ, ಸಂಗೀತ ಕಾರ್ಯಕ್ರಮಗಳು ಯಥೇಚ್ಛವಾಗಿ ನಡೆಯುತ್ತಿದೆ. ರಸ ಭಾವ ಹಾಗೂ ಉತ್ತಮ ವಾತಾವರಣವಿದೆ. ವ್ಯವಸ್ಥಿತವಾಗಿ ಹೊಸ ಬಗೆಯಲ್ಲಿ ಸಂಭ್ರಮದ ಕಾರ್ಯಕ್ರಮಗಳು ತನ್ನ ಧ್ಯೇಯೋತ್ತಿಗೆ ಅನುಗುಣವಾಗಿ ಬೆರಗನ್ನು ಉಂಟುಮಾಡುತ್ತದೆ ಎಂದರು.

ಸೂಕ್ಷ್ಮ ಮನಸ್ಸಿರಬೇಕು
ಯುವ ಕವಿಗಳು ವಚನ ಸಾಹಿತ್ಯ,ದಾಸ ಸಾಹಿತ್ಯ,ಜನಪದ ಸಾಹಿತ್ಯವನ್ನು ಓದಿಕೊಳ್ಳುವ ಮೂಲಕ ಬರವಣಿಗೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ವಿಭಿನ್ನ ನೆಲೆಗಳಿಂದ ಸಾಹಿತ್ಯದ ಅರಿವನ್ನು ಹೆಚ್ಚಿಸುವ ಪ್ರಯತ್ನ ಮಾಡುವ ಮೂಲಕ ಯುವ ಕವಿಗಳಿಗೆ ಬಹಳ ಸೂಕ್ಷ್ಮವಾದ ಮನಸ್ಸಿರಬೇಕು ಎಂದು ಹಿರಿಯ ಕವಿ ಕೊತ್ತತ್ತಿ ರಾಜು ತಿಳಿಸಿದರು.

ಯುವ ಕವಿಗಳು ಹಿರಿಯ ಕವಿಗಳ ಕವಿತೆಗಳನ್ನು ಓದಬೇಕು. ಹತ್ತನೇ ಶತಮಾನದ ಆದಿಕವಿ ಪಂಪನಿಂದ ಆರಂಭಗೊಂಡ ಕನ್ನಡ ಕಾವ್ಯ ಪರಂಪರೆ ಕುವೆಂಪು, ಬೇಂದ್ರೆ, ಬಿಎಂಶ್ರೀ, ಅಡಿಗರು, ಎಚ್.ಎಸ್‌ ವೆಂಕಟೇಶ್ ಮೂರ್ತಿ ಹಾಗೂ ಎಚ್.ಎಸ್. ಶಿವಪ್ರಕಾಶ್ ಮುಂತಾದ ಕವಿಗಳಿಂದ ಕವಿತೆಗಳು ಶ್ರೀಮಂತವಾಗಿದೆ ಎಂದರು.

ಕಾವ್ಯ ಕುರಿತು ಪ್ರಾಚೀನ ಕಾವ್ಯ ಮೀಮಾಂಸಕರಾದ ಭಾಮಹ, ದಂಡಿ ಹಾಗೂ ಆನಂದ ವರ್ಧನ ಸೇರಿದಂತೆ ಕಾವ್ಯ ಮೀಮಾಂಸಕರು ಹಲವು ವ್ಯಾಖ್ಯಾನವನ್ನು ನೀಡಿದ್ದಾರೆ ಎಂದರು. ಕನ್ನಡ ಪರ ಗೋಷ್ಠಿಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಹ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಅವರು ತಿಳಿಸಿದರು.

ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ ಕುಮಾರ್, ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ಮಂಜುನಾಥ್, ಶ್ರೀರಂಗಪಟ್ಟಣದ ಕ.ಸಾ.ಪ ತಾಲ್ಲೂಕು ಅಧ್ಯಕ್ಷರುಗಳಾದ ಡಾ. ಸುಜಯ್ ಕುಮಾರ್, ಎ.ಸೋಮಶೇಖರ್, ಪುರುಷೋತ್ತಮ್ ಚಿಕ್ಕಪಾಳ್ಯ ಶ್ರೀರಂಗಪಟ್ಟಣ ಉಪನ್ಯಾಸಕರು ಹಾಗೂ ಹಿರಿಯ ಕವಿ ಮಹೇಶ್ ಕಡತನಾಳು,ಭಾರತ ಸೇವಾದಳ ಘಟಕದ ಅಧ್ಯಕ್ಷ ಶಿವಸ್ವಾಮಿ ನಗುವನಹಳ್ಳಿ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಕುಬೇರ, ಶ್ರೀರಂಗಪಟ್ಟಣ ನಗರ ಕಸಾಪ ಅಧ್ಯಕ್ಷೆ ಎನ್.ಸರಸ್ವತಿ, ವಾತ್ಸಲ್ಯ ಯೂನೀಟೆಡ್ ಸ್ಕೂಲ್ ಆಡಳಿತಾಧಿಕಾರಿ ಅನಿಲ್ ಬಾಬು ಅರಕೆರೆ ಸೇರಿದಂತೆ ಇತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!