ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಭಾಷಣದ 50ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರಥಮ ಯುವ ವೈಜ್ಞಾನಿಕ ಸಂಸತ್ ಅಧಿವೇಶನ-2024 ಅನ್ನು ಫೆ.27ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಸಿ.ಶಿವಲಿಂಗಯ್ಯ ತಿಳಿಸಿದರು.
ಅಂದು ಬೆಳಿಗ್ಗೆ 9.45ಕ್ಕೆ ಮಂಡ್ಯ ನಗರದ ರೈತಸಭಾಂಗಣದ ಮುಂಭಾಗವಿರುವ ಕುವೆಂಪು ಪ್ರತಿಮೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ವಿಜ್ಞಾನಜಾಥಾ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡುವರು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದ್ದು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಸಭೀಹಾಭೂಮಿಗೌಡ ಉದ್ಘಾಟಿಸುವರು. ಗೌರವ ಮಾರ್ಗದರ್ಶಕಿ ಸುನಂದಜಯರಾಮು ಪ್ರಾಸ್ತಾವಿಕ ನುಡಿಯುವರು. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸುವರು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂಬ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡುವರು. ವೇದಿಕೆಯಲ್ಲಿ ವಿವಿಧ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಬೆಳಿಗ್ಗೆ 11.45ರಿಂದ 1 ಗಂಟೆಯವರೆಗೆ ಕುವೆಂಪು ಸಂದೇಶಗಳಿಂದ ಉಂಟಾದ ಸಮಾಜದ ಬದಲಾವಣೆಗಳು ಕುರಿತು ಮೊದಲ ಗೋಷ್ಠಿ ನಡೆಯಲಿದೆ. ವೈಚಾರಿಕ ಚಿಂತಕ ತುಕಾರಾಂ ವಿಷಯ ಮಂಡಿಸುವರು. ಪರಿಷತ್ತಿನ ಉಪಾಧ್ಯಕ್ಷ ಡಾ.ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ರಿಂದ 3ರವರೆಗೆ ಯುವಜನತೆಗೆ ಸಂವಿಧಾನ ಆಶಯಗಳ ಪ್ರಸ್ತುತತೆ ಕುರಿತು ಎರಡನೇ ಗೋಷ್ಠಿ ನಡೆಯಲಿದ್ದು, ಪರಿಷತ್ತಿನ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಅಭಿದಾಬೇಗಂ ವಿಷಯ ಮಂಡಿಸುವರು. ಮಧ್ಯಾಹ್ನ 3ರಿಂದ 4ರವರೆಗೆ ವಿದ್ಯಾರ್ಥಿಗಳೊಡನೆ ಸಂವಾದ ನಡೆಯಲಿದೆ. ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಸಂವಾದ ನಡೆಸುವರು. ಪರಿಷತ್ತಿನ ನಿರ್ದೇಶಕಿ ಪ್ರಭಾವತಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸಂಜೆ 4.15ರಿಂದ 5.15ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರಿನ ಯಾಚೇನಹಳ್ಳಿ ರಾಮಕೃಷ್ಣ ಸೇವಾಶ್ರಮದ ನಾದಾನಂದನಾಥ ಸ್ವಾಮೀಜಿ ಗೌರವ ಉಪಸ್ಥಿತಿ ಇರುವರು. ಜನಶಕ್ತಿ ಸಂಘಟನೆಯ ಚಿಂತಕ ಡಾ.ವಾಸು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ವಿವಿಧ ಸಂಘಟನೆಗಳ ಮುಖಂಡರಾದ ತೂಬಿನಕೆರೆ ಲಿಂಗರಾಜು, ದೇವರಾಜ್ ಕೊಪ್ಪ, ಪದ್ಮಮೋಹನ್ ಸೇರಿದಂತೆ ಮತ್ತಿತರರು ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಪರಿಷತ್ತಿನ ಉಪಾಧ್ಯಕ್ಷ ಗುರುಮೂರ್ತಿ, ಸಹ ಕಾರ್ಯದರ್ಶಿ ಎಂ.ವಿನಯ್ಕುಮಾರ್, ಸಂಚಾಲಕರಾದ ಅನುಪಮ, ಅಭಿಗೌಡ ಹನಕೆರೆ, ಜಯರಾಮು ಉಪಸ್ಥಿತರಿದ್ದರು.




