ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ಆವರಣದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಿ, ಕಾರ್ಯಕ್ರಮದಲ್ಲಿ ಸುಮಾರು 11 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಸಂಸ್ಥೆ, ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್ , ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯಿಂದ ವೈದ್ಯರು ಆಶಾ ಕಾರ್ಯಕರ್ತೆಯರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆ ಸೇರಿದಂತೆ ಒಟ್ಟು 11 ಸಾವಿರ ಜನರನ್ನು ಕರೆತರುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ಕುಡಿಯುವ ನೀರು, ಉಪಹಾರ ಹಾಗೂ ಆಸನದ ವ್ಯವಸ್ಥೆಯನ್ನು ಸುಸಜ್ಜಿತವಾಗಿ ವ್ಯವಸ್ಥಿತಗೊಳಿಸುವಂತೆ ತಿಳಿಸಿದರು.ಕಾರ್ಯಕ್ರಮದ ದಿನದಂದು ಬೆ. 6:45 ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬೆ.7:00 ಗಂಟೆಗೆ ಯೋಗ ಪ್ರದರ್ಶನ, ನಂತರದಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಇಲಾಖೆಯವರು ನಿಗದಿಪಡಿಸಿದ ಸ್ಥಳಗಳಲ್ಲಿ ಶಿಸ್ತಿನಿಂದ ಭಾಗವಹಿಸುವಂತಹ ಹಾಗೂ ಯೋಗಪ್ರದರ್ಶನಕ್ಕೆ ಭಾಗವಹಿಸುವವರು ಸ್ವತಃ ಯೋಗಮ್ಯಾಟ್ ತರುವುದು ಅಗತ್ಯ ಎಂದರು.
ಸಭೆಯಲ್ಲಿ ಜಿಪಂ ಸಿಇಓ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಬಿ.ರಂಗೇಗೌಡ ನಗರಸಭೆಯ ಆಯುಕ್ತರಾದ ಆರ್. ಮಂಜುನಾಥ್, ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಕೆ.ಧನಂಜಯ, ಆಯುರ್ವೇದ ವೈದ್ಯಾಧಿಕಾರಿ ಡಾ.ಪುಷ್ಪ, ರೆಡ್ ಕ್ರಾಸ್ ಉಪಾಧ್ಯಕ್ಷರು ಮೀರಾ ಶಿವಲಿಂಗಯ್ಯ, ಯೋಗ ಶಿಕ್ಷಕರುಗಳಾದ ಶಿವರುದ್ರಸ್ವಾಮಿ, ಶಾಂತ ನಾರಾಯಣ ಶಾಸ್ತ್ರಿ ಹಾಗೂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.