ಮಂಡ್ಯ ಜಿಲ್ಲೆಯಿಂದ ಚುನಾಯಿತವಾಗಿರುವ ನಾನು ಜಿಲ್ಲೆಗೆ ಎರಡು ಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ, ಜಿಲ್ಲೆಯ ಜನರ ಋಣ ತೀರಿಸುವ ಇಂಗಿತವನ್ನು ಪರಮಪೂಜ್ಯರ ಸಮ್ಮುಖದಲ್ಲಿ ಘೋಷಿಸುತ್ತಿದ್ದೇನೆ. ನಾನಿಂದು ಪ್ರಚಾರಪ್ರಿಯನಲ್ಲ, ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾ ಭವನದಲ್ಲಿ ಆದಿಚುಂಚನಗಿರಿ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಹಾಗೂ ‘ವಿಜ್ಞಾತಂ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದರು.
ಮುಂದಿನ ಐದು ವರ್ಷಗಳಲ್ಲಿ ನೂತನ ಆವಿಷ್ಕಾರಗಳಾಗಿ ಭವಿತವ್ಯದ ಬದುಕನ್ನು ಹಸನು ಮಾಡುವ ಹೊಸ ವ್ಯವಸ್ಥೆಗಳು ಸಧ್ಯದಲ್ಲೇ ಕೈಗೂಡುತ್ತಿವೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಪ್ರಗತಿ ಪಥದಲ್ಲಿ ಕೊಂಡೊಯ್ದವರು ಶ್ರೀಗಳು. ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ಧ್ವನಿ ಇರದ ಸಮುದಾಯಗಳ ಬೆಂಬಲಕ್ಕೆ ನಿಂತರು. ಆಧ್ಯಾತ್ಮಿಕ ಶಕ್ತಿಯ ಮೂಲಕ ಇಷ್ಟೆಲ್ಲ ಬೆಳವಣಿಗೆಗೆ ದೈವಶಕ್ತಿಯ ಸಾಕಾರ ಮೂರ್ತಿ ಇವರು ಎಂದರು.

ವಿಜ್ಞಾನ ತಂತ್ರಜ್ಞಾನದ ಮೂಲಕ ನಾಗಾಲೋಟದಲ್ಲಿ ಸಾಗುತ್ತಿರುವ ವಿಶ್ವದ ವೇಗಕ್ಕೆ ಭಾರತವನ್ನು ಕೊಂಡೊಯ್ಯುವ ದಿಟ್ಟ ಹೆಜ್ಜೆಗೆ ಶ್ರೀ ನಿರ್ಮಲಾನಂದನಾಥರ ಕೊಡುಗೆಯು ಸೇರಿದೆ, ವಿಜ್ಞಾನದ ಬೆಳವಣಿಗೆಗಾಗಿ ಹಾಸನದಲ್ಲಿ ಐಐಟಿಯನ್ನು ಸ್ಥಾಪಿಸುವ ಉದ್ದೇಶವಿತ್ತು ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಕೈಗಾರಿಕಾ ಸಚಿವನಾಗಿ ಮುಂದಿನ ದಿನಗಳಲ್ಲಿ ಹೆಚ್ ಎಂ ಟಿ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವ ಯೋಜನೆಯಿದೆ ಎಂದರು.
ಹೊಸ ಆವಿಷ್ಕಾರಗಳಿಗೆ ಪೂರಕ ಶಕ್ತಿ
ಕರ್ನಾಟಕ ರಾಜ್ಯ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಮಾತನಾಡಿ ಆಧ್ಯಾತ್ಮಿಕ ಧಾರ್ಮಿಕ ನೆಲೆಗಟ್ಟಿನ ಮಠವಾದರೂ ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಪೂರಕ ಶಕ್ತಿಯಾಗಿ ನಿಂತು ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಬೇರೆ ಯಾವುದೇ ಮಠಗಳಿಂದಲೂ ಸಾಧ್ಯವಾಗುತ್ತಿಲ್ಲ. ಶ್ರೀ ಮಠ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇದಕ್ಕೆ ಕಾರಣ ಬಾಲಗಂಗಾಧರನಾಥ ಸ್ವಾಮೀಜಿಯವರ ಬೃಹತ್ ಸಂಕಲ್ಪ ಶಕ್ತಿಯೇ ಚೈತನ್ಯ ಶಕ್ತಿಯಾಗಿ ಮಾಡಿಸುತ್ತಿದೆ. ಕೃತಕ ಬುದ್ಧಿಮತ್ತೆಯ ಈ ಶರವೇಗದ ಯುಗದಲ್ಲಿ ವಿದ್ಯಾರ್ಥಿಗಳು ಕ್ರಮಬವರಿತ್ತು ನಡೆದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು
ಇಂದು ವಿಜ್ಞಾತಂ ಪ್ರಶಸ್ತಿ ಪಡೆದ ಸೂರಪ್ಪ ಅವರು ಐಐಟಿ ನಿರ್ದೇಶಕರಾಗಿದ್ದಾಗ ಮೈಸೂರು ಭಾಗದಲ್ಲಿ ಐಐಟಿಯನ್ನು ಸ್ಥಾಪಿಸುವ ಉದ್ದೇಶವಿತ್ತು, ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಗುರುಗಳ ಪಟ್ಟಾಭಿಷೇಕದ ಪ್ರಯುಕ್ತ ಪ್ರತಿ ವರ್ಷ ಆಯೋಜನೆಗೊಳ್ಳುತ್ತಿರುವ ವಸ್ತು ಪ್ರದರ್ಶನ ಕಣ್ಮನ ಸೆಳೆಯುವುದರ ಜೊತೆಗೆ ವೈಜ್ಞಾನಿಕ ಮಾಹಿತಿಯನ್ನು ನೀಡುಲ್ಲಿ ಸಫಲವಾಗಿದೆ. ಮಂಡ್ಯ ಸಾತನೂರು ವ್ಯಾಪ್ತಿಯಲ್ಲಿ ಶ್ರೀಮಠದ ವತಿಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶಯದಂತೆ ಒಂದು ಪಶು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಯೋಜನೆ ರೂಪುಗೊಂಡಿದೆ ಎಂದರು. ವಜ್ರು ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಬೆಳೆಸುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಶ್ರೀಮಠಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಸ್ವೀಕರಿಸಿದ ಹಿರಿಯ ವಿಜ್ಞಾನಿ ಡಾ ಎಂ ಕೆ ಸೂರಪ್ಪ ಮಾತನಾಡಿ ದೇಶಾದ್ಯಂತ ಹಲವು ವಿಶ್ವವಿದ್ಯಾಲಯ ಸೇವೆ ಸಲ್ಲಿಸಿ ಪಡೆದ ದೊಡ್ಡ ದೊಡ್ಡ ಪ್ರಶಸ್ತಿಗಳಿಗಿಂತಲೂ ಶ್ರೀಗಳು ನೀಡಿದ ವಿಜ್ಞಾತಂ ಪ್ರಶಸ್ತಿ ನನ್ನ ಜೀವನದ ಬಹು ದೊಡ್ಡ ಮೈಲಿಗಲ್ಲು. ಬಾಲಗಂಗಾಧರ ನಾಥರ ಅನ್ನ ಅಕ್ಷರ ಆರೋಗ್ಯದಿಂದ ಆರಂಭಿಸಿದ ಶ್ರೀ ಮಠವು ವಿಜ್ಞಾನ ತಂತ್ರಜ್ಞಾನ ಅರಣ್ಯ ದಂತಹ ಮೇರು ಆಶಯಗಳೊಂದಿಗೆ ಸಮಾಜದ ಆಧಾರ ಸ್ತಂಭವಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮಾಂತರ ಹಾಗೂ ಹಿಂದುಳಿದ ವರ್ಗಗಳ ಮುಂಚೂಣಿಗೆ ತರಲು ಸದಾ ಸನ್ನದ್ಧವಾಗಿದೆ. ಜಗತ್ತಿನ ಹಾಗೂ ಶ್ರೀಗಳ ಆಶಯದಂತೆ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಹೆಚ್ಚಿಸಿ ರಾಷ್ಟ್ರಮಟ್ಟದಲ್ಲಿ ರ್ಯಾಂಕಿಂಗ್ ಉತ್ತಮಪಡಿಸಲು ಸರ್ಕಾರದ ಜವಾಬ್ದಾರಿಯೂ ಇದೆ ಎಂದರು.
ವಿಜ್ಞಾತಂಪು ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಇತ್ಯಾದಿಗಳನ್ನು ಒಳಗೊಂಡಿದೆ.
ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವರಾದ ಕೆ ಹೆಚ್ ಮುನಿಯಪ್ಪ ಮಾತನಾಡಿ ಬಾಲಗಂಗಾಧರನಾಥ ಸ್ವಾಮೀಜಿಯವರ ಚಿಂತನೆಗಳನ್ನು ನಿರ್ಮಲಾನಂದನಾಥ ಶ್ರೀಗಳು ಸಾಕಾರಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಶ್ರೀಗಳ ದೂರ ದೃಷ್ಟಿ ವ್ಯಕ್ತಿತ್ವ ಹಾಗೂ ಸಂಕಲ್ಪಶಕ್ತಿಯಿಂದ ಇಂದು ಒಂದು ಲಕ್ಷ ಎಪ್ಪತೈದು ಸಾವಿರ ವಿದ್ಯಾರ್ಥಿಗಳು ಜ್ಞಾನದಾಸೋಹವನ್ನು ಪಡೆಯುತ್ತಿದ್ದಾರೆ. ಎಲ್ಲ ಜಾತಿ ಧರ್ಮದ ಮಕ್ಕಳಿಗೆ ಆಶ್ರಯವನ್ನು ನೀಡುತ್ತಿರುವ ಶ್ರೀಗಳು ಸ್ವತಹ ವಿಜ್ಞಾನಿ ತತ್ವಜ್ಞಾನಿ ಅಧ್ಯಾತ್ಮ ಚಿಂತಕರು ಆಗಿ ಮುನ್ನಡೆಸುತ್ತಿದ್ದಾರೆ. ರಸ್ತೆಗಳು ಮತ್ತು ರೈಲ್ವೆ ಸುಗಮವಾದರೆ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಚಿವನಾಗಿ ಶ್ರೀಮಠದೊಂದಿಗೆ ಕೈಜೋಡಿಸಲು ಸದಾ ಸಿದ್ಧನಿದ್ದೇನೆ ಎಂದರು.
ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ‘ವಿಜ್ಞಾತಂ ಸಂಚಯ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ವೇಗವಾಗಿ ಬೆಳೆಯುತ್ತಿರುವ ಜಗತ್ತು ತಂತ್ರಜ್ಞಾನ ಆಧಾರಿತವಾಗಿ ಬದುಕು ಯಾಂತ್ರಿಕವಾಗುತ್ತಿದೆ. ಇದರಿಂದ ಮಾರಕವೂ ಇದೆ, ಯುವಶಕ್ತಿಯನ್ನು ಉತ್ತಮ ದಿಕ್ಕಿಗೆ ತಯಾರು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಟ್ಟಾಭಿಷೇಕ ಹಾಗೂ ವಿಜ್ಞಾತಂ ಉತ್ಸವದ ಪ್ರಯುಕ್ತ ಐದು ವಿಭಾಗಗಳಲ್ಲಿ ಆಯೋಜಿಸಿದ್ದ ವಿಜ್ಞಾನ ತಂತ್ರಜ್ಞಾನ ವಸ್ತು ಪ್ರದರ್ಶನಗಳು ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಮೇರಿಕಾದ ಬಾಬು ಕೀಲಾರ, ಅಕ್ಕ ಸಮ್ಮೇಳನದ ರೂವಾರಿ ಡಾ. ಅಮರನಾಥ ಗೌಡ, ಶ್ರೀಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪ್ರಕಾಶನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ ಸೇರಿದಂತೆ ಎಲ್ಲಾ ಶಾಖಾ ಮಠಗಳ ಪೂಜ್ಯರು, ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಮಾಜಿ ಶಾಸಕ ಕೆ ಸುರೇಶಗೌಡ, ಕೆ ಆರ್ ಪೇಟೆ ಶಾಸಕ ಹೆಚ್ ಟಿ ಮಂಜು, ಪ್ರೊ. ಎಂ ಕೃಷ್ಣೇಗೌಡ, ವಿವಿಧ ವಿಶ್ವವಿದ್ಯಾಲಯಗಳ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಇತರರಿದ್ದರು.




