Thursday, September 19, 2024

ಪ್ರಾಯೋಗಿಕ ಆವೃತ್ತಿ

28 ಕೋಟಿ ವೆಚ್ಚದಲ್ಲಿ ರಸ್ತೆಗಳ ಡಾಂಬರೀಕರಣ: ಎಚ್. ಎಸ್. ಮಂಜು

ಮಂಡ್ಯ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು 28 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲು ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ತಿಳಿಸಿದರು.

ಮಂಡ್ಯ ನಗರದ ರಸ್ತೆಗಳನ್ನು ಕೆಲವು ರಾಜಕೀಯ ಮುಖಂಡರು ಅವೈಜ್ಞಾನಿಕವಾಗಿ ವೆಟ್ ಮಿಕ್ಸ್ ಹಾಕಿ ಮುಚ್ಚುತ್ತಿರುವ ಹಿನ್ನಲೆಯಲ್ಲಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಅಧ್ಯಕ್ಷ ಮಂಜು ಎಚ್ಚರಿಕೆ ನೀಡಿದ್ದರು.

ಈ ಹಿನ್ನಲೆಯಲ್ಲಿ ನುಡಿ ಕರ್ನಾಟಕ.ಕಾಮ್ ಪ್ರಶ್ನೆಗಳಿಗೆ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಸ್ಪಷ್ಟೀಕರಣ ನೀಡಿದರು.

ನಗರಸಭೆ ಗುಂಡಿ ಬಿದ್ದ ರಸ್ತೆಗಳನ್ನು ಸರಿ ಮಾಡಬೇಕಿತ್ತು, ಆದರೆ ಮಾಡದ ಕಾರಣ ರಾಜಕೀಯ ಮುಖಂಡರು ಮಾಡುತ್ತಿದ್ದಾರೆ. ಇದನ್ನು ಶ್ಲಾಘಿಸುವುದನ್ನು ಬಿಟ್ಟು ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಎಚ್‌.ಎಸ್.ಮಂಜು, ನಾವು ಅವೈಜ್ಞಾನಿಕವಾಗಿ ವೆಟ್ ಮಿಕ್ಸ್ ಹಾಕಿ ಜನರಿಗೆ ತೊಂದರೆಯಾಗುವ ಹಾಗೆ ಮಾಡುವವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ವೆಟ್ ಮಿಕ್ಸ್ ಹಾಕಿದ ನಂತರ ಪ್ರತಿದಿನ ನೀರು ಹಾಕುತ್ತಲೇ ಇರಬೇಕು. ಆದರೆ ಒಂದು ದಿನ ನೀರು ಹಾಕಿ ಸುಮ್ಮನಾದರೆ, ವೆಟ್ ಮಿಕ್ಸ್ ಹಾಕಿರುವ ರಸ್ತೆಯಲ್ಲಿ ಜಲ್ಲಿಗಳು ಮೇಲೆ ಬಂದು ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದೇವೆ ಎಂದರು‌.

ರಾಜಕೀಯ ಮುಖಂಡರು ರಸ್ತೆ ಗುಂಡಿ ಮುಚ್ಚಿದ ಮೇಲೆ ನಿಮಗೆ ಅರಿವಾಯಿತಲ್ಲವೇ ಎಂಬ ಪ್ರಶ್ನಗೆ ಉತ್ತರಿಸಿದ ಮಂಜು, ಮಂಡ್ಯ ನಗರದಲ್ಲಿ ರಸ್ತೆಗಳು ಗುಂಡಿಗಳಾಗಿದ್ದು ಮುಚ್ಚಿದರೆ ಪ್ರಯೋಜನವಿಲ್ಲ. ಪೂರ್ತಿಯಾಗಿ ಡಾಂಬರೀಕರಣ ಮಾಡಬೇಕು. ಈಗಾಗಲೇ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತದಲ್ಲಿ 22 ಕೋಟಿ ಹಣ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಮುಗಿದು ಡಿಸೆಂಬರ್ ಮೊದಲನೇ ವಾರದಲ್ಲಿ ಕಾಮಗಾರಿ ಶುರುವಾಗಲಿದೆ. ಹಾಗೆಯೇ ನಗರೋತ್ಥಾನ ಯೋಜನೆಯ ಮೊದಲನೇ ಹಂತದಲ್ಲಿ 1.30 ಕೋಟಿ ರೂ ವೆಚ್ಚದ ಕಾಮಗಾರಿ ಆರಂಭವಾಗಿದ್ದು, ನಗರದ ಕಾವೇರಿ ಸ್ಕೂಲ್, ಉದಯಗಿರಿ,ಹಾಲಹಳ್ಳಿಯ ವಿನಾಯಕ ಟೆಂಟ್ ರಸ್ತೆಯಲ್ಲಿ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು.

ನಗರೋತ್ಥಾನ ಯಾಜನೆಯ ನಾಲ್ಕನೇ ಹಂತದ ಯೋಜನೆ ಅಡಿ ನಗರದ ನೂರಡಿ ರಸ್ತೆ, ಯತ್ತಗದಹಳ್ಳಿ ರಸ್ತೆ, ಚೀರನಹಳ್ಳಿ ರಸ್ತೆ, ಸ್ವರ್ಣಸಂದ್ರದ ಪ್ರೇರಣಾ ಅಂಧರ ಮಕ್ಕಳ ಶಾಲೆಯ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇವೆ. ಇದಲ್ಲದೆ 15 ಹಣಕಾಸು ಯೋಜನೆ ಅಡಿ 3 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಮಂಡ್ಯ ನಗರದ ಎಲ್ಲಾ ರಸ್ತೆಗಳಿಗೂ ಡಾಂಬರೀಕರಣವಾಗಲಿದೆ ಎಂದರು.

ಅವೈಜ್ಞಾನಿಕ ಎನ್ನುವವರು ಇಷ್ಟು ದಿನ ಸುಮ್ಮನಿದ್ದದ್ದು ಏಕೆಂಬ ಪ್ರಶ್ನೆಗೆ ಉತ್ತರಿಸಿದ ಮಂಜು, ನಿರಂತರವಾಗಿ
ಸುರಿಯುತ್ತಿದ್ದ ಮಳೆಯ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಮಾಡಲು ಸ್ವಲ್ಪ ತಡವಾಗಿದೆ. ನಾವು ಕಳೆದ ಮೂರು ತಿಂಗಳ ಹಿಂದಿನಿಂದಲೇ ನಗರದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ, ನಗರಾಭಿವೃದ್ಧಿ ಇಲಾಖೆಗೆ ಶಾಸಕ ಎಂ. ಶ್ರೀನಿವಾಸ್ ಅವರ ಮೂಲಕ ಮನವರಿಕೆ ಮಾಡಿದ್ದೆವು. ಅದರಂತೆ ಎಲ್ಲರ ಪ್ರಯತ್ನದಿಂದ ಒಟ್ಟಾರೆ 28 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ನಗರದಾದ್ಯಂತ ಎಲ್ಲಾ ರಸ್ತೆಗಳ ಡಾಂಬರೀಕರಣ ನಡೆಯಲಿದೆ. ದಯವಿಟ್ಟು ಯಾರೂ ಅವೈಜ್ಞಾನಿಕವಾಗಿ ಗುಂಡಿ ಮುಚ್ಚಬೇಡಿ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!