Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೋವಾದ ಕಾಂಗ್ರೆಸ್ ಪಕ್ಷದ 11 ಶಾಸಕರಲ್ಲಿ 8 ಮಂದಿ ಬಿಜೆಪಿ ಸೇರ್ಪಡೆ

ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ 150 ದಿನಗಳ ಭಾರತ್‌ ಜೋಡೋ ಯಾತ್ರೆಯ ಮಧ್ಯೆಯೇ ಗೋವಾದ 8 ಕಾಂಗ್ರೆಸ್ ಶಾಸಕರು ಇಂದು ಬಿಜೆಪಿ ಸೇರಿದ್ದಾರೆ.

ಪ್ರಧಾನಿ ಮೋದಿ ಮತ್ತು ಸಿಎಂ ಪ್ರಮೋದ್ ಸಾವಂತ್ ಅವರ ಕೈ ಬಲಪಡಿಸಲು ಪಕ್ಷದ ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಹೇಳಿದ್ದಾರೆ.

ಮಾಜಿ ಸಿಎಂ ದಿಗಂಬರ್ ಕಾಮತ್, ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದು, ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ ಮೂರಕ್ಕೆ ಇಳಿದಿದೆ. ಈ ಹಿಂದೆ ಅಲ್ಲಿ ಪಕ್ಷಕ್ಕೆ 11 ಶಾಸಕರು ಇದ್ದರು.

ಬಿಜೆಪಿಗೆ ಸೇರಿದ ಶಾಸಕರಲ್ಲಿ ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸೇರಿದ್ದಾರೆ. ಈ ಎಲ್ಲಾ ಶಾಸಕರು ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

“ಇಂದು ಬಿಜೆಪಿಗೆ ಸೇರ್ಪಡೆಗೊಂಡ 8 ಶಾಸಕರನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ ಆರಂಭಿಸಿದೆ. ಆದರೆ ನನ್ನ ಪ್ರಕಾರ ‘ಕಾಂಗ್ರೆಸ್ ಛೋಡೋ ಯಾತ್ರೆ’ ಗೋವಾದಲ್ಲಿ ಪ್ರಾರಂಭವಾಗಿದೆ. ದೇಶಾದ್ಯಂತ ಜನರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ” ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ರಾಘವ್ ಚಡ್ಡಾ, “ದೆಹಲಿ ಮತ್ತು ಪಂಜಾಬ್‌ನಲ್ಲಿ ಆಪರೇಷನ್ ಕಮಲ ವಿಫಲವಾಗಿದೆ, ಗೋವಾದಲ್ಲಿ ಯಶಸ್ವಿಯಾಗಿದೆ” ಎಂದು ಹೇಳಿದ್ದಾರೆ.

ಬಿಜೆಪಿ ಸೇರಿರುವ ಪಕ್ಷದ ಶಾಸಕರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, “ಬಿಜೆಪಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ 25 ಕೋಟಿ ರೂ.ಗಳನ್ನು ನೀಡಿದೆ” ಎಂದು ಆರೋಪಿಸಿದ್ದಾರೆ.

ಕಳೆದ ವಿಧಾಸಭಾ ಚುನಾವಣೆ ಸಂದರ್ಭದಲ್ಲಿ ನಾವು ಗೆದ್ದ ನಂತರ ಬಿಜೆಪಿ ಪಕ್ಷ ಸೇರುವುದಿಲ್ಲ.ಅವರ ಆಪರೇಷನ್ ಗೆ ಬಲಿಯಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದ ಕಾಂಗ್ರೆಸ್ ಶಾಸಕರು ಈಗ ಬಿಜೆಪಿ ಸೇರುವ ಮೂಲಕ ದೇವರ ಪ್ರಮಾಣಕ್ಕಿಂತ ಹಣ,ಅಧಿಕಾರವೇ ಮುಖ್ಯ ಎಂದು ಸಾಬೀತು ಮಾಡಿದ್ದಾರೆ ಎಂದು ಗೋವಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!