ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ -ಯುಜಿ) ಅಕ್ರಮದ ಕುರಿತು ಚರ್ಚೆಗಳು, ವಿವಾದಗಳು ನಡೆಯುತ್ತಲೇ ಇವೆ. ನೀಟ್ ಅನ್ನು ರದ್ದುಗೊಳಿಸಲು ಅಭ್ಯರ್ಥಿಗಳು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರದ್ದುಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ನೀಟ್ ಅಕ್ರಮ ಸಂಬಂಧ 13 ಮಂದಿ ಆರೋಪಿಗಳನ್ನು ಉಲ್ಲೇಖಿಸಿ ಸಿಬಿಐ ಜಾರ್ಚ್‌ಶೀಟ್ ಸಲ್ಲಿಸಿದೆ. ಇದೆಲ್ಲದರ ನಡುವೆ, ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಆಗಸ್ಟ್ 14 ರಂದು ನೀಟ್-ಯುಜಿ ಕೌನ್ಸೆಲಿಂಗ್ ಪ್ರಾರಂಭಿಸುವುದಾಗಿ ಹೇಳಿದೆ.
“ವೇಳಾಪಟ್ಟಿ ಪ್ರಕಾರ, ನಾವು ಅಗಸ್ಟ್ 14ರಂದು ನೀಟ್-ಯುಜಿ ಕೌನ್ಸೆಲಿಂಗ್ ಪ್ರಾರಂಭಿಸುತ್ತೇವೆ. ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಎರಡು ತಿಂಗಳವರೆಗೆ ನಡೆಸಲಾಗುತ್ತದೆ. ದೇಶಾದ್ಯಂತ ಕೌನ್ಸಲಿಂಗ್ ಪ್ರಕ್ರಿಯೆಯು ಆನ್‌ಲೈನ್ ಮೂಲಕ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ. ಅರ್ಹ ವಿದ್ಯಾರ್ಥಿಗಳು ಭಾಗವಹಿಸಬಹುದು. ಅರ್ಹತೆ ಮತ್ತು ಆಯ್ಕೆಯ ಆಧಾರದ ಮೇಲೆ ಸೀಟುಗಳನ್ನು ಹಂಚಲಾಗುವುದು” ಎಂದು ಎನ್‌ಎಂಸಿ ಕಾರ್ಯದರ್ಶಿ ಬಿ ಶ್ರೀನಿವಾಸ್ ತಿಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶುಕ್ರವಾರ ನೀಟ್-ಯುಜಿ 2024ರ ಪರಿಷ್ಕೃತ ಫಲಿತಾಂಶಗಳನ್ನು ಪ್ರಕಟಿಸಿದೆ. 17 ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಹಿಂದಿನ ಫಲಿತಾಂಶಗಳಿಗೆ ಹೋಲಿಸಿದರೆ, ಟಾಪರ್‌ಗಳ ಸಂಖ್ಯೆಯಲ್ಲಿ 75% ಕುಸಿತವಾಗಿದೆ. ಜೂನ್ 4 ರಂದು ಪ್ರಕಟವಾದ ಫಲಿತಾಂಶದಲ್ಲಿ, ದಾಖಲೆಯ 67 ಅಭ್ಯರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದ್ದರು.
ಪರಿಪೂರ್ಣ ಅಂಕ ಗಳಿಸಿದ್ದ 67 ಅಭ್ಯರ್ಥಿಗಳ ಪೈಕಿ, ಇನ್ವಿಜಿಲೇಟರ್ ದೋಷಗಳಿಂದಾಗಿ ಪರೀಕ್ಷೆಯ ಸಮಯ ವ್ಯರ್ಥವಾದ ಕಾರಣಕ್ಕಾಗಿ 6 ಅಭ್ಯರ್ಥಿಗಳಿಗೆ ಹೆಚ್ಚುವರಿ (ಗ್ರೇಸ್) ಅಂಕಗಳನ್ನು ನೀಡಲಾಗಿತ್ತು. ಅಲ್ಲದೆ, 44 ವಿದ್ಯಾರ್ಥಿಗಳು ಭೌತಶಾಸ್ತ್ರದ ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದ್ದರು. ಅವರಿಗೂ, ‘ಗ್ರೇಸ್ ಅಂಕ’ಗಳನ್ನು ನೀಡಲಾಗಿತ್ತು. ಗ್ರೇಸ್ ಅಂಕ ಪಡೆದ ಕಾರಣದಿಂದ 50 ಅಭ್ಯರ್ಥಿಗಳು ಅಗ್ರಸ್ಥಾನ ಪಡೆದುಕೊಂಡಿದ್ದರು.
ಪರೀಕ್ಷೆಯ ಫಲಿತಾಂಶ ವಿವಾದಕ್ಕೆ ಸಿಲುಕಿದ ಬಳಿಕ ಗ್ರೇಸ್ ಅಂಕ ಪಡೆದು ಅಗ್ರಸ್ಥಾನ ಪಡೆದ 6 ಅಭ್ಯರ್ಥಿಗಳು ಸೇರಿದಂತೆ ಪರೀಕ್ಷೆಯ ಸಮಯ ವ್ಯರ್ಥವಾಗಿದ್ದ ಎಲ್ಲ 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗಿತ್ತು.
ಪರಿಷ್ಕೃತ ಫಲಿತಾಂಶದ ಬಳಿಕ, ಅರ್ಹ ಅಭ್ಯರ್ಥಿಗಳ ಸಂಖ್ಯೆಯು 13,16,268 ರಿಂದ 13,15,853ಕ್ಕೆ ಕುಸಿದಿದೆ. 415 ಅಭ್ಯರ್ಥಿಗಳು ಅರ್ಹತೆ ಕಳೆದುಕೊಂಡಿದ್ದಾರೆ.
ಮೇ 5 ರಂದು ನಡೆದಿದ್ದ ನೀಟ್-ಯುಜಿ 2024ರ ಪರೀಕ್ಷೆಯಲ್ಲಿ 13,31,321 ಮಹಿಳಾ ಅಭ್ಯರ್ಥಿಗಳು, 9,96,393 ಪುರುಷ ಅಭ್ಯರ್ಥಿಗಳು ಮತ್ತು 17 ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು ಸೇರಿ ಒಟ್ಟು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 67 ಅಭ್ಯರ್ಥಿಗಳು ಅಗ್ರಸ್ಥಾನ ಪಡೆದಿದ್ದರು.
ಆದರೆ, ಪತ್ರಿಕೆ ಸೋರಿಕೆ, ಅಕ್ರಮಗಳು ಮತ್ತು ಪರೀಕ್ಷೆಯ ಸಮಯದಲ್ಲಿ ಸಮಯ ವ್ಯರ್ಥದ ಆರೋಪದ ನಂತರ ವಿವಾದಕ್ಕೆ ಸಿಲುಕಿದೆ. ಮಾತ್ರವಲ್ಲದೆ, ಈ ವಿವಾದ ಕಾರಣಕ್ಕಾಗಿ ನೀಟ್-ಪಿಜಿ, ಎನ್‌ಇಟಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ರದ್ದಾಗಿವೆ.