Friday, September 20, 2024

ಪ್ರಾಯೋಗಿಕ ಆವೃತ್ತಿ

ಜೂನ್ 7ರಿಂದ 9| ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಜಾತ್ರೆ: ಅಂದಾಜು ವೆಚ್ಚ ₹30 ಕೋಟಿ

57ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜೂ.7, 8 ಹಾಗೂ 9ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯಲಿದೆ,ಇದರ ಅಂದಾಜು ವೆಚ್ಚ ಸುಮಾರು ₹30 ಕೋಟಿಯಾಗಿದ್ದು, ಸಮ್ಮೇಳನದಲ್ಲಿ ಸುಮಾರು 5 ರಿಂದ 6 ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು, ನಾನು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು.

ಫೆಬ್ರವರಿ ಕೊನೇ ಅಥವಾ ಮಾರ್ಚ್ ನಲ್ಲಿ ಲೋಕಸಭಾ ಚುನಾವಣೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಮೂರನೇ ಬಾರಿಗೆ ಆತಿಥ್ಯ ಪಡೆದ ಮಂಡ್ಯ 

ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ 1974 ಹಾಗೂ 1994ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದ್ದವು.  ಈ ಐತಿಹಾಸಿಕ ಸಮ್ಮೇಳನ ನಡೆಸಿದ್ದರ ಕುರುಹುವಿನ ಜಿಲ್ಲೆಯಲ್ಲಿ 3ನೇ ಬಾರಿಗೆ ಸುಮಾರು 30 ವರ್ಷಗಳ ನಂತರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿದೆ. ಇದನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದರು.

3-4 ಸ್ಥಳ ಕಡೆ ಪರಿಶೀಲನೆ

ಸಮ್ಮೇಳನ ಸ್ಥಳ ಇನ್ನೂ ನಿಗಧಿಯಾಗಿಲ್ಲ, ಮಂಡ್ಯ ಆರ್.ಎ.ಪಿ.ಸಿ.ಎಂ.ಎಸ್ ಒಡೆದತನ ಜಾಗ, ಕೆರಗೋಡು ಅಥವಾ ಚಿಕ್ಕಮಂಡ್ಯ ಇಲ್ಲವೇ ಮಾಂಡವ್ಯ ಕಾಲೇಜು ಬಳಿ ಜಾಗ ಗುರುತಿಸಲು ಪರಿಶೀಲನೆ ನಡೆಯುತ್ತಿದೆ, ಇದಕ್ಕಾಗಿ ಆಯ್ಕೆಯಾದ ಸಮಿತಿಯು ಜಾಗ ಅಂತಿಮಗೊಳಿಸಲಿದೆ ಎಂದರು.

25 ಉಸ್ತುವಾರಿ ಸಮಿತಿಗಳ ರಚನೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹೆಗಳೊಂದಿಗೆ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಎಲ್ಲರನ್ನೂ ಒಳಗೊಂಡಂತೆ ಸುಮಾರು 25 ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಮ್ಮೇಳನಕ್ಕೆ ಸ್ವಾಗತ ಸಮಿತಿ, ಸಮನ್ವಯ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ, ವೇದಿಕೆ ನಿರ್ಮಾಣ, ಆಹಾರ ಮತ್ತು ಮೆರವಣಿಗೆ, ವಸತಿ ಆರೋಗ್ಯ ಮತ್ತು ನೈರ್ಮಲ್ಯ, ಸಾಂಸ್ಕೃತಿಕ ಮತ್ತು ಸಾರಿಗೆ, ನಗರ ಅಲಂಕಾರ ವಿದ್ಯುತ್, ಪುಸ್ತಕ ಬಿಡುಗಡೆ, ಪ್ರಚಾರ, ಆಮಂತ್ರ ಪತ್ರಿಕೆ, ಸ್ಮರಣಿಕೆ, ಮಾಧ್ಯಮ ಮತ್ತು ಶಿಷ್ಟಾಚಾರ ಹಾಗೂ ಇತರೆ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.

₹30 ಕೋಟಿ ಅಂದಾಜು ವೆಚ್ಚ

ಈ ಹಿಂದೆ ಹಾವೇರಿಯಲ್ಲಿ ನಡೆದ 86 ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 25 ಕೋಟಿ ರೂ. ಗಳನ್ನು ಸರ್ಕಾರ ನೀಡಿದ್ದು, ಇನ್ನು 5 ಕೋಟಿ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಭರಿಸಿತ್ತು. ಆದ್ದರಿಂದ ಸಮ್ಮೇಳನಕ್ಕೆ ₹ 30 ಕೋಟಿ ವೆಚ್ಚವಾಗಬಹುದೆಂದು ಕಸಾಪ ಅಂದಾಜು ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವರಿಕೆ ಮಾಡಿಕೊಟ್ಟಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಶಾಸಕರಾದ ಪಿ.ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!