ಶ್ರೀಲಂಕಾದ ರಾಜಧಾನಿ ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಸುಲಭ ಗೆಲುವು ದಾಖಲಿಸಿದೆ.8 ನೇ ಬಾರಿಗೆ ಏಷ್ಯಾ ಕಪ್ ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ತಂಡ ಭಾರತೀಯರಿಗೆ ಗೌರಿ-ಗಣೇಶ ಹಬ್ಬದ ಕೊಡುಗೆ ನೀಡಿದೆ.
ಆರು ವಿಕೆಟ್ ಕಿತ್ತು ಶ್ರೀಲಂಕಾ ತಂಡದ ನಡುಮುರಿದ ಮೊಹಮದ್ ಸಿರಾಜ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಪಡೆ ಎಲ್ಲಾ ನಿರೀಕ್ಷೆಗಳನ್ನೂ ಬುಡಮೇಲು ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ ಅಲ್ಪಮೊತ್ತಕ್ಕೆ ಸರ್ವಪತನಗೊಂಡಿತು. ಶ್ರೀಲಂಕಾ ತಂಡವು 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 51 ರನ್‌ಗಳ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ ಕೇವಲ 6.1 ಓವರ್‌ಗೆ 51 ರನ್ ಗಳಿಸುವ ಮೂಲ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ 8ನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಇಶಾನ್ ಕಿಷನ್ 23 ಹಾಗೂ ಶುಭಮನ್ ಗಿಲ್ 27 ರನ್ ಗಳಿಸಿದರು.
ಸಿರಾಜ್ ಎಸೆದ ಬೆಂಕಿ ಚೆಂಡುಗಳು
ಇನ್ನು, ಮೊಹಮ್ಮದ್ ಸಿರಾಜ್ ಶ್ರೀಲಂಕಾ ಆಟಗಾರರ ಮೇಲೆ ಬೆಂಕಿ ಚೆಂಡುಗಳನ್ನೆಸೆದರು.ಅವರ ಮಾರಕ ದಾಳಿಗೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಕಡೆ ಪೆರೇಡ್ ನಡೆಸಿದರು. ಸಿರಾಜ್ ಒಂದೇ ಓವರ್ ನಲ್ಲಿ 4 ವಿಕೆಟ್ ಕಿತ್ತು ಲಂಕಾ ತಂಡದ ಬೆನ್ನೆಲೆಬು ಮುರಿದರು. ಒಟ್ಟಾರೆ 6 ವಿಕೆಟ್ ಪಡೆದ ಸಿರಾಜ್ ಶ್ರೀಲಂಕಾಗೆ ಉಸಿರಾಡಲೂ ಸಮಯವನ್ನು ನೀಡಲಿಲ್ಲ.
ಸಿರಾಜ್ 3ನೇ ಓವರ್‌ನಲ್ಲಿ ರೌದ್ರಾವತಾರ ತಾಳಿದ್ದರು. ಈ ಓವರ್‌ನಲ್ಲಿ ಸಿರಾಜ್ ಲಂಕಾದ ನಿಸ್ಸಾಂಕ, ಸದಿರ ಸಮರವಿಕ್ರಮ, ಚರಿತ್ ಅಸಲಂಕ ಮತ್ತು ಧನಂಜಯ ಡಿಸಿಲ್ವಾ ಅವರ ವಿಕೆಟ್ ಪಡೆಯುವ ಮೂಲಕ ಓವರ್‌ನಲ್ಲಿ W, 0, W, W, 4, W ನ ಅದ್ಭುತ ಪ್ರದರ್ಶನ ತೋರಿಸಿದರು. ಇದು ಅವರ ವೃತ್ತಿ ಜೀನದ ಅತ್ಯುತ್ತಮ ದಾಖಲೆ ಆಗಿದೆ.
ಹಾಗೆಯೇ ಹಾರ್ದಿಕ್ ಪಾಂಡ್ಯ 3 ರನ್ ಗಳಿಗೆ 3 ವಿಕೆಟ್ ಪಡೆದು ಮಿಂಚಿದರು. ಬುಮ್ರಾ ಒಂದು ವಿಕೆಟ್ ಪಡೆದರು. ಪರಿಣಾಮವಾಗಿ ಶ್ರೀಲಂಕಾ 15.2 ಓವರ್‌ಗಳಲ್ಲಿ ನಿಖರವಾಗಿ 50 ರನ್‌ಗಳಿಗೆ ಆಲೌಟ್ ಆಯಿತು.
ತತ್ತರಿಸಿದ ಲಂಕಾ
ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರವನ್ನು ಭಾರತ ತಂಡದ ಬೌಲರ್‌ಗಳು ತಪ್ಪು ಎಂದು ಸಾಬೀತುಪಡಿಸಿದರು. ಭಾರತೀಯ ದಾಳಿಗೆ ತತ್ತರಿಸಿದ ಲಂಕಾ 50 ರನ್‌ಗೆ ಆಲೌಟ್ ಆಯಿತು.
ಶ್ರೀಲಂಕಾ ಪರ, ಕುಸಾಲ್ ಪೆರೆರಾ 0 ರನ್, ಪಾತುಮ್ ನಿಸ್ಸಾಂಕ 2 ರನ್, ಕುಸಲ್ ಮೆಂಡಿಸ್ 17 ರನ್, ಸದಿರ ಸಮರವಿಕ್ರಮ 0 ರನ್, ಚರಿತ್ ಅಸಲಂಕಾ 0 ರನ್, ಧನಂಜಯ್ ಡಿ ಸಿಲ್ವಾ 4 ರನ್, ದಸುನ್ ಶನಕ 0 ರನ್, ದುನಿತಾ ವೆಲ್ಲಲಾಗೆ 8 ರನ್, ದುಶನ್ ಹೇಮಂತ 13 ರನ್, ಮಹೇಶ್ ಪತಿರಾಣ 0 ರನ್ ಗಳಿಸಿದರು.




