Thursday, November 19, 2026

ಪ್ರಾಯೋಗಿಕ ಆವೃತ್ತಿ

ಪೌರಕಾರ್ಮಿಕರ ಮಕ್ಕಳು ಉನ್ನತ ಸ್ಥಾನಮಾನ ಪಡೆಯಲಿ

ಸಮಾಜದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉನ್ನತ ಸ್ಥಾನಮಾನ ಕೊಡಿಸಲು ಪ್ರಯತ್ನ ಪಡಬೇಕೆಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಸಲಹೆ ನೀಡಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ, ನೇರ ಪಾವತಿ ಪೌರಕಾರ್ಮಿಕರ ಸಂಘ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಸ್ಮೃತಿಯಲ್ಲಿ ಹೇಳಿರುವ ಹಾಗೆ ಪೌರಕಾರ್ಮಿಕರು ತಮ್ಮ ತಾತ,ಮುತ್ತಾತನ ಕಾಲದಿಂದಲೂ ಇದೇ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಪೌರಕಾರ್ಮಿಕ ವೃತ್ತಿಯನ್ನು ನಾನು ಅವಮಾನಿಸುತ್ತಿಲ್ಲ. ಆದರೆ ಪೌರಕಾರ್ಮಿಕ ಮಕ್ಕಳು ಪೌರಕಾರ್ಮಿಕರಾಗಿಯೇ ಕೆಲಸ ಮಾಡುವುದು ಬೇಡ. ಅವರು ಈ ಸಮಾಜದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಮಾನ ಕೊಡಿಸಲು ನೀವೆಲ್ಲರೂ ಪ್ರಯತ್ನ ಮಾಡಿದರೆ ಅವರ ಸಾಮಾಜಿಕ ಸ್ಥಾನಮಾನಗಳು ಕೂಡ ಬದಲಾಗುತ್ತವೆ ಎಂದರು.

ಪೌರಕಾರ್ಮಿಕರ ಮಕ್ಕಳು ಕೂಡ ಪೌರಕಾರ್ಮಿಕರಾಗಿಯೇ ಕೆಲಸ ಮಾಡಬೇಕೆಂಬುದು ಈ ಸಮಾಜದಲ್ಲಿರುವ ಹಲವರ ಮನಸ್ಥಿತಿ ಮತ್ತು ಹಿತಾಸಕ್ತಿಯೂ ಆಗಿದೆ. ನೀವು ಯಾವ ರೀತಿ ಕೆಲಸ ಮಾಡಿಕೊಂಡು ಇದ್ದೀರೋ ಅದೇ ರೀತಿ ನಿಮ್ಮ ಮಕ್ಕಳು ಮುಂದುವರಿಯಬೇಕೆಂದು ಭಾವಿಸುತ್ತಾರೆ. ಏಕೆಂದರೆ ಎಲ್ಲರೂ ಈ ವೃತ್ತಿ ಬಿಟ್ಟರೆ, ನಾವು ಮಾಡಬೇಕಾಗುತ್ತದೆ ಎನ್ನುವ ಸ್ವಾರ್ಥ ಹಿತಾಸಕ್ತಿ ಇದರ ಹಿಂದೆ ಅಡಗಿದೆ ಎಂದರು.

ಪೌರಕಾರ್ಮಿಕರಲ್ಲಿ ಹಲವರು ನಮ್ಮ ಮಗನಿಗೆ, ಮಗಳಿಗೆ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ಡ್ರೈವರ್ ಆಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡು ಬರುತ್ತಾರೆ. ಪೌರಕಾರ್ಮಿಕರು ಇರುವ ಅವಕಾಶ ಬಳಸಿಕೊಂಡು ನಿಮ್ಮ ಮುಂದಿನ ಪೀಳಿಗೆ ಈ ಕೆಲಸದಲ್ಲಿ ಮುಂದುವರೆಯದಂತೆ, ಬೇರೆ ಉನ್ನತ ಕೆಲಸ ಮಾಡುವಂತೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಸಮಾಜದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಹತ್ತಾರು ಕೋಟಿ ರೂ.ಗಳ ವಹಿವಾಟು ನಡೆಸುವ ಕಂಪನಿ ಮಾಡಬಹುದು, ಸುಸಜ್ಜಿತ ಮನೆ, ಕಾರು ಎಲ್ಲವನ್ನೂ ಹೊಂದುವಂತಹ ಸ್ಥಾನಮಾನ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಸಾಮಾಜಿಕ ಬದಲಾವಣೆ ಆಗಲಿ
ಪೌರಕಾರ್ಮಿಕರ ಆರ್ಥಿಕ ಸ್ಥಾನಮಾನ ಜೊತೆಗೆ ಸಾಮಾಜಿಕ ಸ್ಥಾನಮಾನದಲ್ಲೂ ಬದಲಾವಣೆಯಾಗಬೇಕು. ಇಂದಿಗೂ ಕೂಡ ಪೌರಕಾರ್ಮಿಕರು ನಮ್ಮ ಮನೆ ಮುಂದಿನ ರಸ್ತೆ, ಚರಂಡಿ ಸ್ವಚ್ಛ ಮಾಡುತ್ತಾರೆ. ಆದರೆ ಎಷ್ಟು ಜನ ಹಬ್ಬ ಹರಿದಿನಗಳಲ್ಲಿ ಪೌರಕಾರ್ಮಿಕರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಹಬ್ಬದ ಊಟ ಮಾಡಿಸುತ್ತಾರೆ.

ಹಾಗಾಗಿ ಅವರ ಸಾಮಾಜಿಕ ಸ್ಥಾನಮಾನಗಳು ಬದಲಾಗಬೇಕಿದೆ. ಮ್ಯಾನ್ ಹೋಲ್ ಗಳಿಗೆ ಇಳಿದು ಕೆಲಸ ಮಾಡುವ ವೃತ್ತಿಯನ್ನು ಈ ಸಮಾಜದಲ್ಲಿ ಯಾರೂ ಕೂಡ ಮಾಡುವುದಿಲ್ಲ. ಮನೆಯ ಮುಂದೆ ಸಣ್ಣ ಚರಂಡಿ ಕಟ್ಟಿಕೊಂಡರೆ, ಹುಲ್ಲು ಬೆಳೆದಿದ್ದರೆ ನಗರಸಭೆಗೆ ಪೋನು ಮಾಡಿ ಪೌರಕಾರ್ಮಿಕರನ್ನು ಕಳಿಸಿ ಎಂದು ಹೇಳುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳ ಕರೆತನ್ನಿ
ಪೌರಕಾರ್ಮಿಕರು ಇಂತಹ ಸಮಾರಂಭಗಳಿಗೆ ತಮ್ಮ ಕುಟುಂಬಸ್ಥರನ್ನು, ಮಕ್ಕಳನ್ನು ಕರೆದುಕೊಂಡು ಬರಬೇಕು. ಅವರು ಕೂಡ ನಮ್ಮ ಪೋಷಕರು ಯಾವ ಕೆಲಸ ಮಾಡುತ್ತಿದ್ದಾರೆ. ಮುಂದೆ ನಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಮಾಹಿತಿಗಳು ಸಿಗುತ್ತವೆ‌‌. ಆದ್ದರಿಂದ ಚಿಂತನೆಗೆ ಅವಕಾಶ ಕಲ್ಪಿಸುವ ಇಂತಹ ಕಾರ್ಯಕ್ರಮಗಳಿಗೆ ನಿಮ್ಮ ಮಕ್ಕಳನ್ನು ಕರೆ ತರಬೇಕು ಎಂದರು.

ಆಯುಕ್ತ ಮಂಜುನಾಥ್ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೇರ ಪಾವತಿ ಹಾಗೂ ಕಾಯಂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಪುಟ್ಟಸ್ವಾಮಿ, ನಗರಸಭಾ ಸದಸ್ಯರಾದ ಮಂಜುಳಾ, ಪೂರ್ಣಿಮಾ, ಮಹಾದೇವ, ಅರುಣ್ ಕುಮಾರ್, ಶ್ರೀಧರ್, ಸೌಭಾಗ್ಯ, ವಿದ್ಯಾ, ಶ್ರೀನಿವಾಸ, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎಂ‌.ಬಿ.ನಾಗಣ್ಣ, ಸೋಮಸುಂದರ್, ಮಹಾದೇವ, ನಾಗರಾಜು, ಲಿಂಗುಮಯ್ಯ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ