Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯ ರೈತಸಂಘದಿಂದ ‘ಪೇ ಫಾರ್ಮರ್’ ಅಭಿಯಾನ


  • ಕಾಂಗ್ರೆಸ್-ಬಿಜೆಪಿ ಕಮಿಷನ್ ರಾಜಕಾರಣ ಸಾಕು

  • ಮೊದಲು ರೈತರ ಟನ್ ಕಬ್ಬಿಗೆ 4,500 ರೂ. ಪೇ ಮಾಡಿ

‘ಪೇ ಸಿಎಂ’ ಎಂದು ಕಾಂಗ್ರೆಸ್ ಮತ್ತು ‘ಪೇ ಕಾಂಗ್ರೆಸ್ ಮೇಡಂ’ ಎಂದು ಬಿಜೆಪಿ ಕೆಸರೆರೆಚಾಟ ಆಡುತ್ತಿರುವ ಮಧ್ಯೆ ರಾಜ್ಯ ರೈತಸಂಘ ‘ಪೇ ಫಾರ್ಮರ್’ ಎಂಬ ನೂತನ ಅಭಿಯಾನವನ್ನು ತೀವ್ರಗೊಳಿಸಿದೆ.

ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ನಡೆಸುತ್ತಿರುವ ‘ಪೇ ಫಾರ್ಮರ್’ ಅಭಿಯಾನವನ್ನು ರೈತ ಕಾರ್ಯಕರ್ತರು ಜನರ ಮನಸ್ಸಿಗೆ ಮುಟ್ಟುವ ಅಭಿಯಾನವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ.
ಅದರಂತೆ ಇಂದು ಮಂಡ್ಯ ನಗರದಲ್ಲಿ ಸರ್ಕಾರಿ ಬಸ್‌ಗಳಿಗೆ ಹಾಗೂ ಗೋಡೆಗಳಿಗೆ ಪೇ ಫಾರ್ಮರ್ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ರೈತ ಸಂಘದ ಮುಖಂಡರು, ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಗಳಿಗೆ ಪೇ ಫಾರ್ಮರ್ ಪೋಸ್ಟರ್ ಅಂಟಿಸಿ ಟನ್ ಕಬ್ಬಿಗೆ 4500 ರೂ. ನೀಡುವಂತೆ ಆಗ್ರಹಿಸಿದರು.

ಹಾಗೆಯೇ ರೈತರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಘೋಷಣೆ ಕೂಗಿ ಒತ್ತಾಯಿಸಿದರು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಮಂಕು ಬೂದಿ ಎರಚಿದ್ದು ಸಾಕು

ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಬಿಜೆಪಿಯವರು ಶೇ.40 ರಷ್ಟು ಲಂಚ ತೆಗೆದು ಕೊಳ್ಳುತ್ತಾರೆ ಎಂದು, ಕಾಂಗ್ರೆಸ್, ಕಾಂಗ್ರೆಸ್ ನಾಯಕರು ಶೇ.10ರಷ್ಟು ಲಂಚ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ, ಪರಸ್ಪರ ಮಾತಿನ ಆರೋಪ ಮಾಡುತ್ತಿವೆ. ಇಂತಹ ಕೆಟ್ಟ ರಾಜಕೀಯ ನಮಗೆ ಬೇಡ, ಈ ರೀತಿ ನಾಟಕವಾಡಿಕೊಂಡು ರೈತರಿಗೆ ಮಂಕುಬೂದಿ ಎರಚಿದ್ದು ಸಾಕು ಎಂದು ಕಿಡಿಕಾರಿದರು.

ಚುನಾವಣೆ ಬಂದಾಗ ಮಾತ್ರ ರೈತರನ್ನು ನೆನೆಪಿಸಿಕೊಳ್ಳುವ ರಾಜಕೀಯ ಪಕ್ಷಗಳು, ಸದನದಲ್ಲಿಯೂ ರೈತರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕಬ್ಬಿಗೆ ಹಾಲಿ ನಿಗದಿಯಾಗಿರುವ ದರದಿಂದ ಯಾವುದೇ ಲಾಭ ಸಿಗುವುದಿಲ್ಲ. ಕೂಲಿ ಖರ್ಚು ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು, ಇಲ್ಲದಿದ್ದರೆ ರೈತರೇ ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠಹೇಳಿ ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಚಿಕ್ಕಾಡೆ ಹರೀಶ್, ಪ್ರಸನ್ನ ಎನ್.ಗೌಡ, ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ಜಿ.ಕೆ.ರಾಮಕೃಷ್ಣ. ಕನ್ನಲಿ ಕೃಷ್ಣಪ್ಪ, ರವಿ, ತಗ್ಗಹಳ್ಳಿ ಪ್ರಸನ್ನ, ವಿಜಯಕುಮಾರ್, ಬಾಲಚಂದ್ರು, ವಿನೋದ್, ಬಾಲಕೃಷ್ಣ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!