Friday, September 20, 2024

ಪ್ರಾಯೋಗಿಕ ಆವೃತ್ತಿ

ಕುಂಭಮೇಳ ನಮ್ಮ ಪರಂಪರೆಯಲ್ಲ, ಇದೊಂದು ಅನಿಷ್ಟಮೇಳ : ಕೆ.ಮಾಯಿಗೌಡ ಕಿಡಿ


  • ಸ್ವಾಮೀಜಿಗಳಿಂದ ಜನಸಾಮಾನ್ಯರಲ್ಲಿ ಮೌಢ್ಯ ಹೆಚ್ಚಳ

  • ಶೂದ್ರರ ಮೇಲೆ ಮನುವಾದಿಗಳ ಕುಂಭಮೇಳ ಹೇರುವ ಹುನ್ನಾರ

ಕುಂಭಮೇಳವೆಂಬುದು, ಉತ್ತರ ಭಾರತದ ಸಂಸ್ಕೃತಿ ಇದು ಪುರೋಹಿತಶಾಹಿಗಳಿಂದ ಬಂದಿದ್ದು, ಆದರೆ ಕೆ.ಆರ್.ಪೇಟೆಯಲ್ಲಿ ಕುಂಭಮೇಳ ಮಾಡುವ ಮೂಲಕ ವೈದಿಕ ಸಂಸ್ಕೃತಿಯನ್ನು ಶೂದ್ರರ ಮೇಲೆ ಹೇರುವ ಹುನ್ನಾರ ನಡೆಯುತ್ತಿದೆ ಎಂದು ವಿಚಾರವಾದಿ ಕೆ.ಮಾಯಿಗೌಡ ಕಿಡಿಕಾರಿದರು.

ಮಂಡ್ಯನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕುಂಭಮೇಳವಲ್ಲ, ಅನಿಷ್ಟಮೇಳ, ಇದು ಆರ್.ಆರ್.ಎಸ್.ನ ಮನುವಾದಿ ಸಿದ್ಧಾಂತದಿಂದ ಬಂದದ್ದು, ಆದಿಚುಂಚನಗಿರಿ ಹಾಗೂ ಸೂತ್ತೂರು ಮಠಗಳು ಮೂಲತಃ ಶೂದ್ರ ಮಠಗಳು, ಇತಂಹ ಮಠಗಳು ಪುರೋಹಿತಶಾಹಿಗಳ ಪಡಿಯಚ್ಚಿನಂತೆ, ಅವರ ಗುಲಾಮರಾಗಿ  ಕಾರ್ಯ ನಿರ್ವಹಿಸುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.

ಕೆ.ಆರ್.ಪೇಟೆ ಬಳಿಯ ತ್ರೀವೇಣಿ ಸಂಗಮ ಸುಂದರವಾದ ಪರಿಸರ ತಾಣ, ಅದನ್ನು ಕುಂಭಮೇಳದ ಹೆಸರಿನಲ್ಲಿ ಹೊಲಸು ಮಾಡಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ, ಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸುವುದಾಗಿ ಸಂಘಟಕರೇ ಹೇಳಿಕೊಂಡಿದ್ದಾರೆ. ಅಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ, ಅಷ್ಟೊಂದು ಜನರ ದಿನ ನಿತ್ಯ ಕ್ರಮದ ನಿರ್ವಹಣೆಗೆ ಯಾವುದೆ ವ್ಯವಸ್ಥೆ ಮಾಡದೇ  ಪರಿಸರದ ಹಾಳು ಮಾಡಲಾಗುತ್ತಿದೆ ಎಂದು  ದೂರಿದರು.

ಸ್ವಾಮೀಜಿಗಳಿಂದ ಜನಸಾಮಾನ್ಯರ ಮೌಢ್ಯಗಳು ಇನ್ನಷ್ಟು ಹೆಚ್ಚಳವಾಗುತ್ತವೆ, ಸಚಿವ ನಾರಾಯಣಗೌಡ ಅವರ ಸ್ವಾರ್ಥ ರಾಜಕಾರಣಕ್ಕಾಗಿ ಈ ಕುಂಭಮೇಳವನ್ನು ಮಾಡುತ್ತಿದ್ದಾರೆ, ಸರ್ಕಾರ ಈಗಾಗಲೇ 2 ಕೋಟಿ ಬಿಡುಗಡೆ ಮಾಡಿದೆ, ಕೇವಲ 4 ದಿನಕ್ಕೆ ಇಷ್ಟೊಂದು ಹಣವನ್ನು ವೆಚ್ಚ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.

ಸುತ್ತೂರು ಹಾಗೂ ಆದಿಚುಂಚನಗಿರಿ ಮಠಗಳು ಮೂಲತಃ ಶೂದ್ರ ಮಠಗಳಾಗಿದ್ದು, ವಿಶ್ವ ಹಿಂದೂ ಪರಿಷತ್ ನ ಪರವಾಗಿ ಪುರೋಹಿತಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ, ಚುಂಚನಗಿರಿಯಲ್ಲಿ ಮಾಂಸಾಹಾರವನ್ನು ಎಡೆಯಾಗಿ ಇಡುವ ಪದ್ದತಿ ಇದೆ, ಇಂತಹ ಮಠಗಳು ಪುರೋಹಿತಶಾಹಿಗಳ ಹಿಡಿತಕ್ಕೆ ಬಲಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಾವಿರಾರು ಹೆಣ್ಣು ಮಕ್ಕಳನ್ನು ಮೇಳಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ, ಅಲ್ಲಿ ಅವರಿಗೆ ರಕ್ಷಣೆ ಇದೆಯೇ ? ಎಂದು ಪ್ರಶ್ನಿಸಿದರು.

ಸಾಹಿತಿ ರಾಜೇಂದ್ರ ಪ್ರಸಾದ್ ಮಾತನಾಡಿ, ಕೋವಿಡ್ ಪರಿಸ್ಥಿತಿಯ ನಂತರ ಮಂಡ್ಯ ಜಿಲ್ಲೆಯು ತೀವ್ರತರನಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಅತಿವೃಷ್ಟಿ, ಒಡೆದ ಕರೆಗಳು, ಕಬ್ಬಿಗೆ ಸೂಕ್ತ ಬೆಲೆ  ನಿಗದಿಯಾಗದಿರುವುದು, ವರ್ಷ ಪೂರ್ತಿ ಬಿದ್ದ ಮಳೆಗೆ ಕೊಚ್ಚಿ ಹೋಗಿರುವ ರಸ್ತೆಗಳು, ಚರಂಡಿಗಳು, ಹೆಚ್ಚಿದ ನಿರುದ್ಯೋಗದ ಸಮಸ್ಯೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದನ್ನು ಬಿಟ್ಟು ಕುಂಭಮೇಳಕ್ಕೆ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿರುವುದು ಖಂಡನೀಯ ಎಂದರು.

ಮಂಡ್ಯ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ಮುಜರಾಯಿ ಇಲಾಖೆಯ ಕೊಡಲಾಗಿದೆಯೇ, ಯಾವುದೇ ರೀತಿಯ ಐತಿಹಾಸ ಪೌರಾಣಿಕ ಅಥವಾ ಸ್ಥಳೀಯ ಹಿನ್ನೆಲೆಗಳು ಇರದ ಉತ್ತರ ಭಾರತದ ಕುಂಭ ಮೇಳದ ನಕಲು ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರವು, ಮಂಡ್ಯದಲ್ಲಿ ಸೃಷ್ಟಿಸುತ್ತಿದ್ದು, ಕೆ.ಆರ್.ಎಸ್ ಜಲಾಶಯ ಹಿನ್ನೀರಿನ ಪ್ರದೇಶದ ಪರಿಸರವನ್ನು ಹಾಳುಗೆಡವುತ್ತಿದೆ. ಇನ್ನು 2 ಸಂಗಮದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನವು ಈಚಿನ ವರ್ಷಗಳಲ್ಲಿ ಸ್ಥಳೀಯರೊಬ್ಬರ ಭಾವನಾತ್ಮಕ ಉದ್ದೇಶದಿಂದ ನಿರ್ಮಿಸಲ್ಪಟ್ಟಿದ್ದು, ಅದಕ್ಕೂ ಉತ್ತರ ಭಾರತದ ಕುಂಭಮೇಳದ ಪರಿಕಲ್ಪನೆಗೂ ಯಾವುದೇ  ಸಂಬಂಧಗಳು ಇಲ್ಲ ಎಂದರು.

ಗೋಷ್ಠಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!