Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ : 20 ಕೋಟಿ ರೂ. ಹಣ ಬಿಡುಗಡೆಗೆ ಸರ್ಕಾರಕ್ಕೆ ಒತ್ತಾಯ

ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ರಾಜ್ಯ ಸರ್ಕಾರವು ಕಳೆದ ಆಯವ್ಯಯದಲ್ಲಿ ರೂ.50 ಕೋಟಿ ರೂ. ಹಣವನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಇದುವರೆಗೆ ಕೇವಲ 30 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿಕೆ ರೂ.20 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕಳೆದ ಸೆಪ್ಟೆಂಬರ್ 1ರಿಂದ ಕಾರ್ಖಾನೆಯು ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಪ್ರತಿದಿನ 300-400 ಟನ್ ಕಬ್ಬು ಅರೆಯುವಿಕೆಯಿಂದ ಪ್ರಾರಂಭವಾಗಿ, ಪ್ರಸ್ತುತ ಸುಮಾರು 1500-1600 ಟನ್ ಕಬ್ಬನ್ನು ಅರೆಯಲಾಗುತ್ತಿದೆ. ಕಾರ್ಖಾನೆಗೆ ರೈತರು ಸುಮಾರು 3 ಲಕ್ಷ ಟನ್ ಕಬ್ಬನ್ನು ಸರಬರಾಜು ಮಾಡಲು ಒಪ್ಪಿಗೆ ಕರಾರಾಗಿದೆ. ಆದರೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಮತ್ತು ಕಬ್ಬು ಅರೆಯುವಿಕೆಯು ನಿಧಾನಗತಿಯಿಂದ ಕೂಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಇದುವರೆವಿಗೂ ಸುಮಾರು 36,000 ಟನ್ ಕಬ್ಬು ಅರೆಯಲಾಗಿದ್ದರೂ ಸಹ ನಿಗದಿತ ಗುರಿಯಂತೆ, ಪ್ರತಿ ದಿನ ಸುಮಾರು 3,000 ಟನ್ ಕಬ್ಬನ್ನು ಅರೆಯಬೇಕಾಗಿತ್ತು, ನಿಗದಿತ ಗುರಿಯನ್ನು ಮುಟ್ಟದಿರುವುದರಿಂದ ಕಾರ್ಖಾನೆಗೆ ನಷ್ಟವುಂಟಾಗುತ್ತಿದೆ. ತಾವು ಈ ಹಿಂದೆ ಹಣಕಾಸು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಾಕಿಯಿರುವ ರೂ.20 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಸಹ, ಇದುವರೆವಿಗೂ ಅಧಿಕಾರಿಗಳು ಹಣ ಬಿಡುಗಡೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಕಾರ್ಖಾನೆಗೆ ದುಡಿಯುವ ಬಂಡವಾಳ ಪಡೆಯಲು ಸರ್ಕಾರ ಇದುವರೆವಿಗೂ ಅನುಮತಿಯನ್ನು ನೀಡಿಲ್ಲ, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೇ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕಾರ್ಮಿಕರಿಗೆ ವೇತನ ನೀಡಲು ಸಹ ತುಂಬಾ ತೊಂದರೆಯಾಗಿರುತ್ತದೆ. ಆದ್ದರಿಂದ ತಕ್ಷಣವೇ 20 ಕೋಟಿ ರೂ.ಹಣ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!