Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತಸಂಘದಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ


  • ಪ್ರತಿ ಟನ್ ಕಬ್ಬಿಗೆ 4.500 ರೂ. ದರ ನಿಗಧಿಗೆ ಒತ್ತಾಯ

  • ಭಾಗ್ಯಜ್ಯೋತಿ-ಕುಟೀರ ಜ್ಯೋತಿ ವಿದ್ಯುತ್ ಬಿಲ್ ಬಾಕಿ ಮನ್ನಾಕ್ಕೆ ಆಗ್ರಹ

ಪ್ರತಿ ಟನ್ ಕಬ್ಬಿಗೆ 4.500 ದರ ನಿಗಧಿ ಮಾಡಬೇಕು, ಕೂಡಲೇ ಎಸ್.ಎ.ಪಿ. ದರ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಮಂಡ್ಯನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕರ್ನಾಟಕ ರಾಜ್ಯ ರೈತಸಂಘ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದೆ.

ರೈತಸಂಘದ ಜಿಲ್ಲಾಧ್ಯಕ್ಷ  ಎ.ಎಲ್.ಕೆಂಪೂಗೌಡ ಅವರ ನೇತೃತ್ವದಲ್ಲಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು, ರೈತರಿಗೆ ಮುಖ್ಯಮಂತ್ರಿಗಳು ನೀಡಿದ ಭರವಸೆ ಹುಸಿಯಾಗಿದೆ, ಈ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಕಳೆದ ಜು.11ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೀಘ್ರದಲ್ಲೇ ಎಸ್ಎಪಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು, ಇದು ಈಡೇರಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಳಕೆದಾರರ ಬಿಲ್ ಮನ್ನಾ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು, ಆದರೆ ಜಿಲ್ಲೆಯ ವಿವಿಧೆಡೆ ಸೆಸ್ಕ್‌ ಕಂಪನಿಯ ನೌಕರರು ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆಂದು ದೂರಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಪ್ರತಿಭಟನೆ ನಡೆಸಿದಾಗ ಅವರು ಟನ್ ಕಬ್ಬಿಗೆ 150 ರೂ. ಎಸ್ಎಪಿ ಘೋಷಣೆ ಮಾಡಿದ್ದರು. ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ನೀಡಿದ ಭರವಸೆ ಹುಸಿಯಾಗಿದೆ. ಅಲ್ಲದೆ ಸಕ್ಕರೆ ಸಚಿವರು ದೀಪಾವಳಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದದ್ದರೂ, ಅದು ನೆರವೇರಲಿಲ್ಲ. ಆದ್ದರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಲೀಟರ್ ಹಾಲಿಗೆ ಕೇವಲ 1 ರೂ.ಹೆಚ್ಚಳ ಮಾಡಿ, ಪಶು ಆಹಾರದ ಬೆಲೆಯನ್ನು ಏಕಾಏಕಿ 125 ರೂ.ಗೆ ಏರಿಸುವ ಮೂಲಕ ಮುನ್ಮುಲ್  ರೈತರಿಗೆ ಬರೆ ಹಾಕಿದೆ, ಪಕ್ಕದ ರಾಜ್ಯದವರು ಲೀಟರ್ ಹಾಲಿಗೆ ಯಾವುದೇ ಪರೀಕ್ಷೆ ಮಾಡದೆ 40 ರೂ.ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಅದರಂತೆ ಮನ್ಮುಲ್ ಹಾಲು ಖರೀದಿ ಮಾಡಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್, ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಪ್ರಸನ್ನ, ಶಿವಳ್ಳಿ ಚಂದ್ರಶೇಖರ್, ರವಿಕುಮಾರ್, ಕುಮಾರ್, ಮುಟ್ಟನಹಳ್ಳಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!