Monday, May 6, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಕಾರ್ಖಾನೆಗೆ ₹10 ಕೋಟಿ ಬಿಡುಗಡೆಗೆ ಶಾಸಕದ್ವಯರ ಮನವಿ

ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಗೆ 2023-24 ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕಿದೆ. ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಹಣದ ಅವಶ್ಯಕತೆ ಇದೆ. ಇದಕ್ಕಾಗಿ 18 ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದರೂ ತುರ್ತಾಗಿ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ವಿಧಾನ ಪರಿಷತ್‌ ಶಾಸಕರಾದ ದಿನೇಶ್‌ ಗೂಳಿಗೌಡ ಹಾಗೂ ಮಂಡ್ಯ ವಿಧಾನಸಭಾ ಶಾಸಕರಾದ ರವಿ ಕುಮಾರ್  ಗಣಿಗ ಅವರು ಮನವಿ ಮಾಡಿದ್ದಾರೆ.

nudikarnataka.com Ganiga Ravikumar ಕಳೆದ ವರ್ಷ ಆಯವ್ಯಯದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿಯನ್ನು ಘೋಷಣೆ ಮಾಡಿತ್ತು. ಆದರೆ, ಈವರೆಗೆ ಕೇವಲ 32 ಕೋಟಿ ರೂಪಾಯಿಯನ್ನಷ್ಟೇ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಈ ಬಾರಿ ತುರ್ತಾಗಿ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಸುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಬೇಕು ಎಂದು ಶಾಸಕರಾದ ದಿನೇಶ್‌ ಗೂಳಿಗೌಡ ಹಾಗೂ ರವಿ ಗಣಿಗ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪತ್ರದ ಸಾರಾಂಶ
ಮಂಡ್ಯ ಜಿಲ್ಲೆಯ ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) ಯು ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆಯನ್ನು ಸ್ಥಗಿತ ಮಾಡಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಪುನಃ ಪ್ರಾರಂಭಿಸಿದೆ.‌ ಅಲ್ಲದೆ, ಕಳೆದ ವರ್ಷ ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ₹ 50 ಕೋಟಿ ರೂಪಾಯಿ ಹಣ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ ₹32 ಕೋಟಿ ರೂಪಾಯಿಯನ್ನು ಮಾತ್ರವೇ ಬಿಡುಗಡೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ.

nudikarnataka.com

ಕಾರ್ಖಾನೆಯ ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 10,002 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್‌ ಟನ್‌ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ನುರಿಸಲು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ.

ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್ ನಿಂದ ಆರಂಭವಾಗಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ,‌ ಕಟಾವು ಗ್ಯಾಂಗ್‌ಗಳಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂಪಾಯಿಯ ಅಗತ್ಯವಿದೆ. ಹಾಗಾಗಿ ತುರ್ತಾಗಿ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಬೇಕು ಎಂದು ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.

ಮಾಡಬೇಕಾದ ಕಾರ್ಯಗಳ ವಿವರ
ಹಂಗಾಮು ಪೂರ್ವ ನಿರ್ವಹಣೆ ಕೆಲಸ ಪೂರ್ಣ ಮಾಡಲು ₹ 5 ಕೋಟಿ, ಫ್ಯಾಕ್ಟರಿ ಕಾರ್ಮಿಕರಿಗೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವೇತನ ಪಾವತಿಗೆ ₹ 1.50 ಕೋಟಿ, ಸ್ಥಳೀಯ ಹಾಗೂ ಹೊರಗಿನ ಕಬ್ಬು ಕಟಾವು ಗ್ಯಾಂಗ್‌ಗಳಿದ್ದು, ಮುಂಗಡ ಹಣ ಪಾವತಿಗೆ  ₹ 5.80 ಕೋಟಿ, ಕಾರ್ಖಾನೆಗೆ ಕೋಣನಹಳ್ಳಿ ನೀರಿನ ಲೈನ್ ನಿರ್ಮಾಣಕ್ಕೆ  ₹ 98 ಲಕ್ಷ, ಘಟಕದ ಒಳಗೆ ವಿವಿಧ ಸಿವಿಲ್ ಕಾಮಗಾರಿಗಳಿಗೆ ₹ 98 ಲಕ್ಷ, ಇಆರ್ ಪಿ ಪ್ರಾಜೆಕ್ಟ್ ಗೆ ₹ 98 ಲಕ್ಷ, ನೀರು ಮತ್ತು ಸ್ಟೇಕ್ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆಗೆ ₹ 30 ಲಕ್ಷ, ಜೂಸ್ ಸಪ್ಲೀಟರ್ ಮತ್ತು ಗೇರ್ ಬಾಕ್ಸ್ ಅಳವಡಿಕೆಗೆ- ₹ 1 ಕೋಟಿ, ಜಿಐ ಶೀಟ್ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ- ₹ 2 ಕೋಟಿ ಅಗತ್ಯವಾಗಿದೆ.

ಹೀಗಾಗಿ ಕೂಡಲೇ ಅಗತ್ಯವಾಗಿ ಬೇಕಿರುವ ಹಣವನ್ನು ಬಿಡುಗಡೆ ಮಾಡಬೇಕಿದ್ದು, ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ ಗೂಳಿಗೌಡ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿ ಗಣಿಗ ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!