Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿರ್ಮಲಾನಂದನಾಥ ಆಗ್ತಾರಾ ಕರ್ನಾಟಕದ ಯೋಗಿ ಆದಿತ್ಯನಾಥ…?

‘ಸಂಸ್ಕೃತಿ ತಿಳಿದವರು ದೇಶಕ್ಕೆ ಶಕ್ತಿ ನೀಡುತ್ತಾರೆ ಸಂಸ್ಕೃತಿ ಅರಿಯದೆ ಇರುವವರಿಂದ ಅದು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಾಡಪ್ರಭು ಕೆಂಪೇಗೌಡ ಅವರಂತೆ ಶ್ರೇಷ್ಠ ನಾಯಕ’

ಒಂದು ಕಾಲದಲ್ಲಿ ನಾವು (ಭಾರತೀಯರು) ಬೇರೆಯವರನ್ನು ಕೇಳಿ ಆಡಳಿತ ನಡೆಸಬೇಕಾದ ಸ್ಥಿತಿ ಇತ್ತು. ಆದರೆ ಈಗ ಬೇರೆ ರಾಷ್ಟ್ರಗಳು ತಮ್ಮ ಸಮಸ್ಯೆ ಪರಿಹಾರಕ್ಕೆ ಭಾರತದ ನೆರವು ಕೇಳುತ್ತಿದೆ. ಪ್ರಧಾನಿ ಅವರ ‘ಕರ್ಮ-ಜ್ಞಾನದ ಶಕ್ತಿಯಿಂದ ಇದು ಸಾಧ್ಯವಾಗಿದೆ. ಮೋದಿ ಈಗ ವಿಶ್ವದ ನಾಯಕ’.

ಸ್ವಾಮಿ ವಿವೇಕಾನಂದರು ಯಾವ ಮಹತ್ತರ ಸಾಧನೆಗಳು ಸುಮ್ಮನೆ ಆಗುವುದಿಲ್ಲ ಎಂದಿದ್ದರು. ವಿವೇಕಾನಂದರಂತೆಯೇ ಜೀವನದಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು ವೀರ ಸಾವರ್ಕರ್.

ಅರೆ ಈ ವಾಕ್ಯಗಳನ್ನು ಕೇಳಿದರೆ, ಇವೆಲ್ಲ ಯಾರೋ ಆರ್ ಎಸ್ ಎಸ್ ಅಥವಾ ಸಂಘ ಪರಿವಾರದ ನಾಯಕನೊಬ್ಬ ಆಡಿದ ಮಾತಗಳಿರಬೇಕು ಎಂಬ ಭಾವನೆ ತಕ್ಷಣ ಬರುತ್ತದೆ.ಆದರೆ ಇದು ತಪ್ಪು. ಇವೆಲ್ಲಾ ಮಾತುಗಳು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ ನುಡಿಮುತ್ತುಗಳು.

ನಿರ್ಮಲಾನಂದನಾಥ ಸ್ವಾಮೀಜಿ ನಾಥ ಪಂಥಕ್ಕೆ ಸೇರಿದ ಆದಿಚುಂಚನಗಿರಿ ಮಠಾಧೀಶರು. ಅದೇ ರೀತಿ ಗೋರಕನಾಥ ಮಠದ ಸ್ವಾಮೀಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ, ನಾಥ ಪಂಥಕ್ಕೆ ಸೇರಿದವರು. ಈ ಕಾರಣದಿಂದ ಇಬ್ಬರಲ್ಲೂ ಆತ್ಮೀಯತೆ, ಅನ್ಯೋನ್ಯತೆ ಇದೆ.

ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಿರ್ಮಲಾನಂದನಾಥ ಸ್ವಾಮೀಜಿ ಅವರ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಆರ್ ಎಸ್ ಎಸ್ ಮುಖಂಡರಂತೆಯೇ ಪ್ರಬಲ ಹಿಂದುತ್ವದ ಪ್ರತಿಪಾದಕರು ಕೂಡ ಹೌದು. ಕೆ.ಆರ್‌.ಪೇಟೆಯ ಕುಂಭಮೇಳ, ಕೆಂಪೇಗೌಡ ಪ್ರತಿಮೆ ಅನಾವರಣ, ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ನಿರ್ಮಲಾನಂದ ಬಿಜೆಪಿ ಸರ್ಕಾರ ಆಯೋಜಿಸುವ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರೊಡನೆ ಉತ್ತಮ ಒಡನಾಟ ಹೊಂದಿರುವ ನಿರ್ಮಲಾನಂದನಾಥ ಸ್ವಾಮೀಜಿ ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗ ಸಮುದಾಯದ ಮಠಾಧೀಶರು.

2023ರ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಬಿಜೆಪಿ ಮತ್ತು ಸಂಘ ಪರಿವಾರದ ಪ್ರಥಮ ಆಯ್ಕೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ. ಅತಂತ್ರವಾದರೆ ಬಿಜೆಪಿ ಮತ್ತು ಸಂಘ ಪರಿವಾರ ಸೇರಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಿಎಂ ಕುರ್ಚಿಗೆ ತರಬಹುದೆಂಬ ಮಾತು ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಈ ಚರ್ಚೆಯನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಜೊತೆ ತುಂಬಾ ನಿಕಟವಾದ ಸಂಪರ್ಕ, ಬಾಂಧವ್ಯ ಎಲ್ಲವನ್ನು ಹೊಂದುತ್ತಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಒಕ್ಕಲಿಗ ಸಮುದಾಯದ ದೊಡ್ಡ ಮಠದ ಸ್ವಾಮೀಜಿಯಾಗಿರುವ ನಿರ್ಮಲಾನಂದನಾಥರಿಗೆ ಸಿಎಂ ಸ್ಥಾನ ನೀಡಿದರೆ, ಒಕ್ಕಲಿಗ ಸಮುದಾಯದ ಪಕ್ಷ ಜೆಡಿಎಸ್ ವಿರೋಧಿಸದೆ ಸಂಪೂರ್ಣವಾಗಿ ಸಹಕಾರ ನೀಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇವೆಲ್ಲವನ್ನೂ ಕಳೆದು ತೂಗಿರುವ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಅಗತ್ಯಕ್ಕಿಂತಲೂ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಇತ್ತೀಚಿಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆದ ಕುಂಭಮೇಳದಲ್ಲಿ, ಅಷ್ಟೂ ದಿನಗಳ ಕಾಲ ನಿರ್ಮಲಾನಂದ ಸ್ವಾಮೀಜಿ ವೇದಿಕೆಯಲ್ಲಿದ್ದರು. ಇದು ಕೂಡ ನಿರ್ಮಲಾನಂದನಾಥ ಸ್ವಾಮೀಜಿ ದಿನೇ ದಿನೇ ಬಿಜೆಪಿಗೆ ಎಷ್ಟು ಹತ್ತಿರವಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೆಸರು, ಈಗ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಉತ್ತರ ಪ್ರದೇಶದಲ್ಲೂ ಕೊನೆಗಳಿಗೆಯಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದಂತೆ ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದಾ? ನಿರ್ಮಲಾನಂದನಾಥ ಆಗ್ತಾರಾ  ಕರ್ನಾಟಕದ ಯೋಗಿ ಆದಿತ್ಯನಾಥ…? ಎಂಬ ಪ್ರಶ್ನೆಗೆ ಇನ್ನೂ ಆರೇಳು ತಿಂಗಳು ಕಾದರೆ ಉತ್ತರ ಸಿಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!