Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತಸಂಘದ ಅಹೋರಾತ್ರಿ ಧರಣಿಗೆ ಮಳವಳ್ಳಿ ರೈತರ ಬೆಂಬಲ

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಸರಣಿಯನ್ನು ಮಳವಳ್ಳಿಯ ರೈತರು ಬೆಂಬಲಿಸಿದರು.

ಮಳವಳ್ಳಿಯ ರೈತ ಹೋರಾಟಗಾರ ಉಜ್ಜನಿಗೌಡರು ಧರಣಿ ಉದ್ದೇಶಿಸಿ ಮಾತನಾಡಿದರು. ರೈತರ ನ್ಯಾಯಯುತ ಬೇಡಿಕೆಗಳಾದ ಪ್ರತಿ ಟನ್ ಕಬ್ಬಿಗೆ 4500 ರೂ ಹಾಗೂ ಒಂದು ಲೀಟರ್ ಹಾಲಿಗೆ 40 ರೂ ಬೆಂಬಲ ಬೆಲೆ ನಿಗದಿ ಮೊದಲಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದರು.

ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕೊಡಬೇಕೆಂದು ಕೇಳುವ ಪರಿಸ್ಥಿತಿಗೆ ನೂಕಿರುವ ಈ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಆದರೆ ಬೀಜ, ರಸಗೊಬ್ಬರ, ಕೀಟನಾಶಕ, ಬೇಸಾಯದ ಉಪಕರಣಗಳ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರು ಕೇಳುವ ಮೊದಲೇ ಬಹುದೊಡ್ಡ ಲಾಭದ ಖಾತ್ರಿಯನ್ನು ಆಳುವ ಸರ್ಕಾರಗಳು ಪೂರೈಸುತ್ತವೆ ಎಂದು ಕಿಡಿಕಾರಿದರು.

ಎಲ್ಲಿಯಾದರೂ ಬಹುರಾಷ್ಟ್ರೀಯ ಕಂಪನಿಗಳು ಬೀದಿಗಿಳಿದು ನಮಗೆ ಬೆಂಬಲ ಬೆಲೆ ಕೊಡಿಯೆಂದು ಕೇಳಿದ ಉದಾಹರಣೆ ಇದೆಯೇ? ಆಳುವ ವರ್ಗಗಳು ಅವರ ಕಾಲಾಳುಗಳಾಗಿ ಕೆಲಸ ಮಾಡುತ್ತಿರುವಾಗ ಬಹುಪಾಲು ಜನರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.

ಅವರು ಜಾತಿ,ಧರ್ಮ, ದೇವರು, ಕೋಮುದ್ವೇಷದ ಮೂಲಕ ಜನರನ್ನು ವಿಭಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಕುತಂತ್ರವನ್ನು ಜನರ ಬಳಿಗೆ ಹೋಗಿ ತಿಳಿಸದಿದ್ದರೆ ನಮಗಾರಿಗೂ ಉಳಿಗಾಲವಿಲ್ಲ.ಸದ್ಯದ ಪರಿಸ್ಥಿತಿಯನ್ನು ನಾವೂ ಅವಲೋಕಿಸಿ ಜನಪರವಾದ, ಗಟ್ಟಿಯಾದ, ರಾಜಿರಹಿತವಾದ ಜನಚಳುವಳಿಯನ್ನು ಕಟ್ಟುವುದರ ಮೂಲಕ ನಮ್ಮ ಹಕ್ಕುಗಳನ್ನು ಹಾಗೂ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಯೆಂದು ಹೇಳಿದರು.

ಈ ಸಂದರ್ಭದಲ್ಲಿ ರೈತಸಂಘದ ಮಧುಚಂದನ್, ಕೆಂಪೂಗೌಡ, ಹಿರಿಯ ಸಾಹಿತಿ ಕೆ. ಮಾಯಿಗೌಡ, ಶಿವಲಿಂಗು ಕೆಂಬೂತಗೆರೆ,ಗುಳಘಟ್ಟ ಶಿವು, ಕನ್ನಡಪರ ಹೋರಾಟಗಾರರು ಹಾಗೂ ರೈತ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!