Thursday, September 19, 2024

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರದ ವಿರುದ್ಧ ನಾಳೆಯಿಂದ ‘ಆಗ್ರಹ ಅಭಿಯಾನ’

ಇತ್ತಿಚೇಗೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ನ.26ರ ಸಂವಿಧಾನ ದಿನದಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ” ಅತ್ಯಾಚಾರದ ವಿರುದ್ಧ ‘ಆಗ್ರಹ ಅಭಿಯಾನ’ ಆರಂಭಿಸಲಾಗುವುದು ಎಂದು ಮಹಿಳಾ ಮುನ್ನಡೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನ.26 ರಿಂದ ಡಿ.10ರವರೆಗೆ ಅಭಿಯಾನ ನಡೆಸಿ, ಡಿ.10ರಂದು ಮಂಡ್ಯನಗರದಲ್ಲಿ ‘ಮಹಿಳಾ ಪ್ರತಿರೋಧ ಸಮಾವೇಶ’ ನಡೆಸಲಾಗುವುದು. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಗತ್ತಿನೆಲ್ಲಡೆ ಹಮ್ಮಿಕೊಳ್ಳಲಾಗುತ್ತದೆ, ಹಾಗಾಗಿ ಅಮಾಯಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾದ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಅತ್ಯಾಚಾರದ ವಿರುದ್ಧ ‘ಆಗ್ರಹ ಅಭಿಯಾನ’ ಆರಂಭಿಸುತ್ತಿದ್ದೇವೆ ಎಂದರು.

ಈ ಅಭಿಯಾನವು ಮಂಡ್ಯ ಜಿಲ್ಲೆಯಲ್ಲಿ ಆರಂಭಿಕ ರೂಪದಲ್ಲಿ ಪ್ರಾರಂಭವಾಗುತ್ತಿದ್ದರೂ, ಅತ್ಯಾಚಾರದ ವಿರುದ್ಧ ರಾಜ್ಯಮಟ್ಟದಲ್ಲೂ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿರುವ ಅತ್ಯಾಚಾರ ವಿರೋಧಿ ಆಂದೋಲನದಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಜೊತೆಗೂಡಬೇಕೆಂದು ಮನವಿ ಮಾಡಿದರು.

ದೆಹಲಿಯೊಂದರಲ್ಲಿ, ಕಳೆದ ವರ್ಷದಲ್ಲಿ ಅತ್ಯಾಚಾರ ಪ್ರಕರಣಗಳು ಶೇ.41ರಷ್ಟು ಏರಿಕೆಯಾಗಿದೆ, ಲೈಂಗಿಕ ಕಿರುಕುಳದ ಪ್ರಕರಣಗಳು ಶೇ.30ರಷ್ಟು ಏರಿಕೆಯಾಗಿವೆ, ಹೆಣ್ಣುಮಕ್ಕಳ ಅಪಹರಣದ ಪ್ರಕರಣಗಳು 46ರಿಂದ 159ಕ್ಕೆ ಏರಿಕೆಯಾಗಿವೆ, ಇದು ಕೇವಲ ರಜಧಾನಿಯೊಂದರ ಕತೆಯೇ ಅಲ್ಲ, ಭಾರತದ ಬಹುತೇಕ ರಾಜ್ಯಗಳು. ಇದೇ ರೀತಿಯ ಸನ್ನಿವೇಶವನ್ನು ನೋಡುತ್ತಿದ್ದೇವೆ, ದಲಿತ ಮತ್ತು ಇನ್ನಿತರ ಶೋಷಿತ, ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಹಿಳೆಯರ ಮೇಲಿನ ಹಿಂಸೆಯ ಪ್ರಮಾಣ ಸಾಮಾನ್ಯ ಸಂದರ್ಭಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಥಾವು ಮಳವಳ್ಳಿ ತಾಲೂಕಿನಿಂದ ಆರಂಭವಾಗಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆಆರ್ ಪೇಟೆ, ನಾಗಮಂಗಲ ತಾಲೂಕುಗಳ ಮೂಲಕ ಹಾದು ಮಂಡ್ಯಕ್ಕೆ ಮತ್ತೆ ಬಂದು ಸೇರಲಿದೆ. ದಾರಿಯುದ್ದಕ್ಕೂ, ಹಳ್ಳಿಗಳು, ಶಾಲಾ ಕಾಲೇಜುಗಳು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಮುಂತಾದೆಡೆ ಅರಿವಿನ ಕಾರ್ಯಕ್ರಮಗಳನ್ನು ನೀಡುತ್ತಾ, ಈ ಕುರಿತು ಸಂವಾದ ನಡೆಸುತ್ತಾ ಜಾಥಾ ಸಾಗಲಿದೆ. ಹಾಗೆಯೇ ಹಾದಿಯುದ್ದಕ್ಕೂ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಜೊತೆಗೂಡಿ ಕೆಲಸ ಮಾಡಲು ಆಸಕ್ತಿಯುಳ್ಳವರ ಸಮನ್ವಯ ಸಮಿತಿಗಳೂ ರಚನೆಯಾಗಲಿವೆ ಎಂದರು.

ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆದಾಗ ಹೋರಾಡುವುದು ಮಾತ್ರವಲ್ಲ, ಅವು ನಡೆಯದಂತೆ ಸಾಧ್ಯವಾದ ಎಲ್ಲ ರೀತಿಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸರ್ಕಾರವನ್ನು ಅಧಿಕಾರಿಗಳನ್ನು ಒತ್ತಾಯಿಸುವುದು, ಜನರಲ್ಲಿ ಅರಿವು ಮೂಡಿಸುವುದು, ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಎಲ್ಲ ಚಟುವಟಿಕೆಗಳೂ ನಿರಂತರವಾಗಿ ಈ ಎಲ್ಲ ಕಡೆಗಳಲ್ಲಿ ನಡೆಯುವಂತೆ ಪ್ರಯತ್ನಿಸುವುದು ಈ ಜಾಥಾದ ಆಶಯ. ಜಾಥಾಗೆ ಪ್ರತಿದಿನದ ವಾಹನವೆಚ್ಚವೂ ಸೇರಿದಂತೆ ಒಟ್ಟು ಏಳು ದಿನಗಳಿಗೆ ಸುಮಾರು 35,000 ಹಾಗೂ ಸಮಾವೇಶಕ್ಕೆ ಕಡಿಮೆಯೆಂದರೂ ಅಂದಾಜು 25,000ರೂ.ಗಳು ಖರ್ಚಾಗಲಿವೆ ಎಂದು ತಿಳಿಸಿದರು.

ಅತ್ಯಾಚಾರದ ವಿರುದ್ಧ ‘ಆಗ್ರಹ ಅಭಿಯಾನ’ಕ್ಕಾಗಿ ನೆರವಿಗೆ ಮನವಿ…  

ನೆರವಾಗಲು ಬಯಸುವವರು ಈ ಕೆಳಗಿನ ಅಕೌಂಟ್ ಗೆ ಹಣ ಕಳಿಸಬಹುದು ಅಥವಾ ಗೂಗಲ್ ಪೇ ಮೂಲಕ ಈ ನಂಬರ್ ಗೂ ಕಳಿಸಬಹುದು.

POORNIMA,G.
Union Bank of India
Mandya Branch
AC no-598602010007310
IFSC code- UBIN0901393.

ಗೂಗಲ್ ಪೇ ಅಥವಾ ಪೋನ್ ಪೇ ಮಾಡುವವರು 7338542833 ಈ ಮೊಬೈಲ್ ನಂಬರ್ ಗೆ ಮಾಡಬಹುದು.

ಹೆಚ್ಚಿನ ಮಾಹಿತಿಗೆ: ಪೂರ್ಣಿಮಾ, ಮಹಿಳಾ ಮುನ್ನಡೆ, ಮಂಡ್ಯ- ಮೊ.8892323523 ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಿಐಟಿಯು ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಮರ್ಥನ ಮಹಿಳಾ ವೇದಿಕೆಯ ನಾಗರೇವಕ್ಕ, ಶಿಲ್ಪ ಬಿ.ಎಸ್., ಮಂಜುಳಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!