Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವಿ ತೊಟ್ಟ ಕಳ್ಳರಿಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ : ಡಾ.ಭೂಮಿಗೌಡ

ಕೆಲವು ಕಾವಿ ತೊಟ್ಟ ಕಳ್ಳರು, ನೀಚರು ಇನ್ನೂ ಋತುಮತಿಯಾಗದ ಪುಟ್ಟ ಪುಟ್ಟ ಕಂದಮ್ಮಗಳ ಮೇಲೆ ದೌರ್ಜನ್ಯ ನಡೆಸಿ ಸಿಕ್ಕಿ ಬೀಳುತ್ತಿರುವುದು, ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ ಎಂದು ಅಧ್ಯಾಪಕ ಡಾ.ಭೂಮಿಗೌಡ ಆತಂಕ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದಲ್ಲಿ ವಿವಿಧ ಮಹಿಳಾ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅತ್ಯಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿರ್ಗತಿಕ ಹೆಣ್ಣು ಮಕ್ಕಳಿಗೆ ಅನ್ನ, ಶಿಕ್ಷಣ ನೀಡುವುದಾಗಿ ಹೇಳಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕಳ್ಳರು ನೀಚ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗಾಗಿ ಕಠಿಣವಾದ ಕಾನೂನು ಜಾರಿಗೊಳಿಸುವ ಅಗತ್ಯವಿದೆ, ಬೇರೆ ಬೇರೆ ದೇಶಗಳಲ್ಲಿ ಅತ್ಯಾಚಾರಿಗಳನ್ನು ಕಾಲು, ಕೈಗಳು, ತಲೆಗಳನ್ನು ಕತ್ತರಿಸುವ ಮೂಲಕ ಶಿಕ್ಷಿಸಲಾಗುತ್ತಿದೆ, ಆದರೆ ನಮ್ಮ ದೇಶದಲ್ಲಿ ಅದಕ್ಕೆ ಅವಕಾಶವಿಲ್ಲ, ಆದ್ದರಿಂದ ಇಂತಹ ನೀಚರಿಗಾಗಿ ಕಠಿಣ ಕಾನೂನುಗಳು ಜಾರಿಯಾಗಬೇಕಿದೆ ಎಂದರು.

ಒಂದು ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆದಾಗ ಇಡೀ ಸಮಾಜ ಅವರ ಜೊತೆ ನಿಲ್ಲುವ ಕೆಲಸ ಮಾಡಬೇಕು.  ಅವರ ನೋವಿನಲ್ಲಿ ಭಾಗಿಯಾಗಬೇಕು. ಆದರೆ ಇಂದು ಜನರು ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ ಎಂದರು.

ನಮ್ಮ ಪ್ರಧಾನಿ ಅಧಿಕಾರಕ್ಕೆ ಬಂದ ನಂತರ ‘ಭೇಟಿ ಬಚಾವೋ ಭೇಟಿ ಪಡವೋ’ ಯೋಜನೆಯನ್ನು ಘೋಷಣೆ ಮಾಡಿದರು. ಅದರೆ ನಿಜಕ್ಕೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ನಿಂತಿವೆಯೇ ಎಂದು ಪ್ರಶ್ನಿಸಿದರು. ಇತ್ತೀಚೆಗೆ ದೆಹಲಿಯಲ್ಲಿ ಹೆಣ್ಣು ಮಗಳೊಬ್ಬಳನ್ನು 30-40 ತುಂಡುಗಳನ್ನಾಗಿ ಕತ್ತರಿಸಿ, ಹದ್ದು, ಕಾಗೆ, ನಾಯಿಗಳಿಗೆ ಹಾಕಿದ್ದ. ಇಂತಹ ದೌರ್ಜನ್ಯಗಳನ್ನು ಇನ್ನೇಷ್ಟು ದಿನಗಳ ಕಾಲ ಮಹಿಳೆಯರು ದೌರ್ಜನ್ಯ ಅನುಭವಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಆಂದೋಲನದಲ್ಲಿ ಮಹಿಳಾ ಪರ ಚಿಂತಕಿ ಸಬೀಹಾ ಭೂಮಿಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಹಿಳಾ ಮನ್ನಡೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ವಿಮೋಚನ ಸಂಘಟನೆಯ ಜರ್ನಾಧನ್ ಹೂತಗೆರೆ, ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಚನ್ನಮ್ಮ, ಇಂಪನಾ, ಮಂಜುಳಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!