Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಳೆ ಕನ್ನಡ ರಾಜ್ಯೋತ್ಸವ : ಪದಗ್ರಹಣ ಸಮಾರಂಭ

ಮಂಡ್ಯ ನಗರದ ದ್ವಾರಕನಗರ ಬಡಾವಣೆಯ ಪಾರ್ಕ್ ಆವರಣದಲ್ಲಿ ನ.30ರಂದು ಸಂಜೆ 5 ಗಂಟೆಗೆ ಕನ್ನಡ ರಾಜ್ಯೋತ್ಸವ ಹಾಗೂ ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ.ಬಸವರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶಾಂತ ಎಲ್. ಹುಲ್ಮನಿ ಸಮಾರಂಭ ಉದ್ಘಾಟಿಸುವರು. ಕನ್ನಡಾಂಬೆಯ ಭಾವಚಿತ್ರಕ್ಕೆ ಅಪರ ಜಿಲ್ಲಾ ಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಪುಷ್ಪಾರ್ಚನೆ ಮಾಡುವರು. ಬಡಾವಣೆಯ ಪ್ರತಿಭೆಗಳು ಹಾಗೂ ದಾನಿಗಳನ್ನು ಯುವ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು ಅವರು ಅಭಿನಂದಿಸುವರು. ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು ಅಧ್ಯಕ್ಷತೆ ವಹಿಸುವರು. ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಅವಿನಾಶ್‌, ಸದಸ್ಯೆಯರಾದ ಸುವರ್ಣಾವತಿ, ಜ್ಯೋತಿ, ಮಮತಾ, ಮಂಜುಳಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ಬೇಲೂರು ಗ್ರಾಪಂ ಪಿಡಿಒ ಎಸ್‌. ಸುರೇಶ್ ಭಾಗವಹಿಸುವರು ಎಂದರು.

ದ್ವಾರಕನಗರ ಬಡಾವಣೆಯು ರಚನೆಯಾಗಿ 20-25 ವರ್ಷಗಳಾಗಿವೆ. ಮಂಡ್ಯ ನಗರಸಭೆ ಕಚೇರಿಗೆ ಕೇವಲ 2 ಕಿ.ಮೀ. ಅಂತರದಲ್ಲಿರುವ ನಮ್ಮ ಬಡಾವಣೆಯು ಮಂಡ್ಯ ತಾಲೂಕು ಬೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ. ಕ್ಷೇತ್ರ ಮರುವಿಂಗಡಣೆ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ನಗರಸಭೆ ಹತ್ತಿರವಿದ್ದರೂ ನಗರಸಭೆ ಸರಿಯಾದ ರೀತಿಯ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.

ಈವರೆಗೆ ನಮ್ಮ ಬಡಾವಣೆಯ ರಸ್ತೆಗಳು ಡಾಂಬರು ಕಂಡಿಲ್ಲ, ಮಣ್ಣಿನ ರಸ್ತೆಗಳಲ್ಲೇ ಓಡಾಡುವಂತಾಗಿದೆ. ರಸ್ತೆ ಬದಿ ಮಳೆ ನೀರು ಚರಂಡಿ, ಒಳಚರಂಡಿ ವ್ಯವಸ್ಥೆಯೂ ಇಲ್ಲ. ಮಳೆ ಬಂದರೆ ನಮ್ಮ ಬಡಾವಣೆ ರಸ್ತೆಗಳು ನೀರು ತುಂಬಿಕೊಂಡು ಕೊಚ್ಚೆ ಗುಂಡಿಯಂತಾಗುತ್ತದೆ. ಇಂತಹ ದೈನೇಸಿ ಪರಿಸ್ಥಿತಿಯ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ಮಂಡ್ಯ ನಗರಕ್ಕೆ ದಿನದ 24ಗಂಟೆಯೂ ಕಾವೇರಿ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಾಗುತ್ತಿದೆ. ಅದರ, ನಗರಕ್ಕೆ ಹೊಂದಿಕೊಂಡಿರುವ ನಮ್ಮ ಬಡಾವಣೆಗೆ ಕುಡಿಯುವ ಕಾವೇರಿ ನೀರು ಬರುತ್ತಿಲ್ಲ,  ಹೀಗಾಗಿ ಜಲಜೀವನ ಮಿಷನ್ ಯೋಜನೆಯಡಿ ನಮ್ಮ ಬಡಾವಣೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ಅಲ್ಲದೇ ರಸ್ತೆ, ಚರಂಡಿ ಸೌಲಭ್ಯ ಕಲ್ಪಿಸಬೇಕು. ಮಂಡ್ಯ ನಗರಕ್ಕೆ ನಮ್ಮ ಬಡಾವಣೆಯು ತೀರಾ ಹತ್ತಿರದಲ್ಲಿ ಇರುವುದರಿಂದ ಒಳಚರಂಡಿ ಸೌಲಭ್ಯವನ್ನು ದ್ವಾರಕನಗರಕ್ಕೂ ವಿಸ್ತರಿಸಬೇಕು. ನಮ್ಮ ಬಡಾವಣೆಯ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಬೇಕು. ಅಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ನೂತನ ಪದಾಧಿಕಾರಿಗಳ ವಿವರ 

ಸಂಘದ ಅಧ್ಯಕ್ಷರಾಗಿ ಎಚ್.ಎಂ. ಬಸವರಾಜು, ಉಪಾಧ್ಯಕ್ಷೆಯಾಗಿ ಪವಿತ್ರ ನಾಗರಾಜು, ಕಾರ್ಯದರ್ಶಿಯಾಗಿ ಎ.ಎಂ.ಸಂದೇಶ್‌, ಖಜಾಂಚಿಯಾಗಿ ಮತ್ತೀಕೆರ ಪ್ರಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಜೆ.ಕುಮಾರ್, ನಿರ್ದೇಶಕರಾಗಿ ನವೀನ್ ಚಿಕ್ಕಮಂಡ್ಯ, ದಾಸಯ್ಯ, ಚಂದ್ರಗೌಡ, ಎಸ್.ಮಹೇಶ್, ಕೆ.ಆರ್.ಶ್ರೀನಾಥ್, ಎಸ್. ಶಿವಕುಮಾರ್, ಸಿದ್ದೇಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಪವಿತ್ರ ನಾಗರಾಜು, ಕಾರ್ಯದರ್ಶಿ ಎ.ಎಂ.ಸಂದೇಶ್, ಚಂದ್ರು, ಶ್ರೀನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!