Thursday, September 19, 2024

ಪ್ರಾಯೋಗಿಕ ಆವೃತ್ತಿ

ಮತ್ತೊಂದು ಬಾಬಾ ಬುಡನ್ ಗಿರಿ ಆಗದಿರಲಿ ಶ್ರೀರಂಗಪಟ್ಟಣ…!

ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ಬಾಬಾ ಬುಡನ್ ಗಿರಿಯಲ್ಲಿ ದತ್ತ ಮಾಲೆ ಅಭಿಯಾನ ಶುರು ಮಾಡಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಹಿಂದುತ್ವದ ಬೇರು ಗಟ್ಟಿಮಾಡಿ ಅಧಿಕಾರ ಹಿಡಿದ ಬಿಜೆಪಿ ಮತ್ತು ಸಂಘಪರಿವಾರ ಈಗ ದಕ್ಷಿಣದ ಜಿಲ್ಲೆಗಳಲ್ಲೂ ಹನುಮ ಮಾಲೆಯ ಮೂಲಕ ರಾಜಕೀಯ ಅಧಿಕಾರ ಹಿಡಿಯಲು ಸಂಚು ರೂಪಿಸಿದೆ ಎಂದು ಸಿಪಿಐಎಂ ಮುಖಂಡರು ಆರೋಪಿಸಿದ್ದಾರೆ.

ಇದರಿಂದ ಶ್ರೀರಂಗಪಟ್ಟಣ ಮತ್ತೊಂದು ಬಾಬಾಬುಡನ್ ಗಿರಿ ಆಗಲಿದೆಯೇ ಎಂಬ ಪ್ರಶ್ನೆ ಕೋಮು ಸೌಹಾರ್ದತೆ ಬಯಸುವವರನ್ನು ಕಾಡುತ್ತಿದ್ದು,ಯಾವ ಕಾರಣಕ್ಕೂ ಶ್ರೀರಂಗಪಟ್ಟಣ ಬಾಬಾಬುಡನ್ ಗಿರಿ ಆಗದಿರಲಿ, ಕೋಮು ಸಂಘರ್ಷಕ್ಕೆ ಕಾರಣವಾಗದಿರಲಿ ಎಂದು ಈ ಭಾಗದ ನಾಗರಿಕರ ಆಗ್ರಹ.

ಡಿಸೆಂಬರ್ 4ರಂದು ನಾಳೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಸುತ್ತಿದೆ.ನಾಳೆ 20-25 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಪರಿವಾರದ ಮುಖಂಡರು ಹೇಳಿದ್ದಾರೆ.

ರಾಜಕೀಯ ಸಂಚು
ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನು ಕೆಡವಿ ಜಾಮಿಯಾ ಮಸೀದಿ ನಿರ್ಮಿಸಿದ್ದಾನೆ ಎಂದು ಸಂಘ ಪರಿವಾರ ಹೇಳುತ್ತಿದೆ. ಜಾಮಿಯಾ ಮಸೀದಿಯಲ್ಲಿ ಹಿಂದೂ ದೇವರಾದ ಆಂಜನೇಯ ಸ್ವಾಮಿ ದೇವಸ್ಥಾನ ಇರುವುದಕ್ಕೆ ಸಾಕಷ್ಟು ಸಾಕ್ಷಿಗಳಿದ್ದು,ಆಂಜನೇಯ ದೇವಾಲಯ ನಿರ್ಮಾಣ ಮಾಡುವುದಾಗಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲನ್ನು ಕೂಡ ಏರಿದೆ. ಆಂಜನೇಯ ದೇವಸ್ಥಾನ ಕ್ಕಿಂತಲೂ ಈ ಭಾಗದಲ್ಲಿ ರಾಜಕೀಯ ಅಧಿಕಾರ ಹಿಡಿಯುವುದು ಬಿಜೆಪಿ ಮತ್ತು ಸಂಘ ಪರಿವಾರದ ಹುನ್ನಾರ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಆರೋಪಿಸಿದ್ದಾರೆ.

ಬಾಬಾ ಬುಡನ್ ಗಿರಿಯಲ್ಲಿ ದತ್ತಮಾಲೆ ಅಭಿಯಾನ ಮಾಡಿ ಅಧಿಕಾರ ಹಿಡಿದಂತೆ ಹಳೆ ಮೈಸೂರು ಭಾಗದಲ್ಲೂ ಅಧಿಕಾರ ಹಿಡಿಯಲು ಬಿಜೆಪಿ,ಸಂಘ ಪರಿವಾರ ರಾಜಕೀಯ ಸಂಚು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಜಾಮಿಯ ಮಸೀದಿ ಕೆಡವಬೇಕು ಎಂದು ಮುಂದಾಗಿರುವ ಈ ಹುನ್ನಾರವನ್ನು ಜಿಲ್ಲಾಡಳಿತ ತಡೆಯಬೇಕೆಂದು ಮನವಿ ಮಾಡಿದ್ದಾರೆ.

1991ರಲ್ಲಿ ದೇಶದಲ್ಲಿ 1947ಕ್ಕಿಂತಲೂ ಇಂದಿನ ಯಾವುದೇ ಐತಿಹಾಸಿಕ ಸ್ಮಾರಕಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಾಗಲಿ, ಕೆಡುವುದಾಗಲಿ ಮಾಡಬಾರದು ಎಂದು ಪುರಾತತ್ವ ರಕ್ಷಣಾ ಕಾಯ್ದೆ ರೂಪಿಸಲಾಗಿದೆ. ಹಾಗಿದ್ದರೂ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಕೆಡವುತ್ತೇವೆ ಎಂದು ಹೇಳುವುದು ಪುರಾತತ್ವ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿದ್ದು, ಒಂದು ವೇಳೆ ಕೆಡವಲು ಮುಂದಾದರೆ ಹಿಂದೂ ಜಾಗರಣ ವೇದಿಕೆ ಮತ್ತು ಸಂಘ ಪರಿವಾರದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಪಿಐಎಂ ಮುಖಂಡರು ಒತ್ತಾಯಿಸಿದ್ದಾರೆ.

ಒಟ್ಟಾರೆ ಕೋಮು ಸೌಹಾರ್ದತೆಯಿಂದ ಇದ್ದ ಶ್ರೀರಂಗಪಟ್ಟಣದಲ್ಲಿ ಕಳೆದ ಏಳೆಂಟು ವರ್ಷಗಳಿಂದೀಚೆಗೆ ಹನುಮ ಮಾಲೆ ದತ್ತ ಮಾಲೆ ರೀತಿಯ ಅಭಿಯಾನ ಆರಂಭವಾಗಿದೆ‌. ಅದಕ್ಕೂ ಹಿಂದೆ ಈ ರೀತಿಯ ಯಾವುದೇ ಆಚರಣೆಗಳು ಈ ಭಾಗದಲ್ಲಿ ನಡೆದಿರಲಿಲ್ಲ. ಚುನಾವಣೆಯ ವರ್ಷವಾಗಿರುವುದರಿಂದ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹನುಮಮಾಲಾಧಾರಿಗಳನ್ನು ಸೇರಿಸಲು ಸಂಘ ಪರಿವಾರ ತೀರ್ಮಾನಿಸಿದೆ.

ಅಲ್ಲದೆ ಪ್ರತಿ ತಾಲ್ಲೂಕಿನಿಂದಲೂ ಸಹಸ್ರಾರು ಹನುಮ ಮಾಲಾಧಾರಿಗಳನ್ನು ಕರೆದುಕೊಂಡು ಹೋಗಲು ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಕೂಡ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.ಹಾಗಾಗಿ ಈ ಬಾರಿ ಹೆಚ್ಚು ಹನುಮ ಮಾಲಾಧಾರಿಗಳು ಬರುತ್ತಾರೆ ಎಂಬುದು ಪರಿವಾರದ ನಾಯಕರ ಮಾತು.

ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು. ಹಾಗಾಗಿ ಹನುಮ ಮಾಲಾಧಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಸಂಕೀರ್ತನಾ ಯಾತ್ರೆ ಮಾಡಲಿ ಎಂಬುದು ಈ ಭಾಗದ ನಾಗರೀಕರ ಆಗ್ರಹವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!