ವೈಜ್ಞಾನಿಕ ಮನೋಭಾವದಿಂದ ವಿಜ್ಞಾನವನ್ನು ಸರಿಯಾಗಿ ಅಭ್ಯಾಸಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ಕಾಳೀರಯ್ಯ ತಿಳಿಸಿದರು.
ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಕಾನ್ವೆಂಟ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈಜ್ಞಾನಿಕ ಮನೋಭಾವನೆ ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳಸುವುದು ಅವಶ್ಯಕವಾಗಿದೆ. ಇದನ್ನು, ಗಮನದಲ್ಲಿಟ್ಟುಕೊಂಡು ಪೂರ್ಣಪ್ರಜ್ಞಾ ಕಾನ್ವೆಂಟ್ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಂಡು ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಬರುವಂತೆ ಹಾಗೂ ಜ್ಞಾನ ಹೆಚ್ಚುವಂತೆ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ವಸ್ತು ಪ್ರದರ್ಶನದಲ್ಲಿ ಸ್ವೀಚ್ ಬದಲಿಗೆ ಚಪ್ಪಾಳೆ ಹೊಡೆದರೆ ಮನೆಯಲ್ಲಿ ವಿದ್ಯುತ್ ದೀಪ ಹತ್ತಿಕೊಳ್ಳುವುದು. ಸ್ವಯಂಚಾಲಿತ ಬೀದಿ ದೀಪದ ನಿರ್ವಹಣೆ ವ್ಯವಸ್ಥೆ, ವಾಯು, ಜಲ ಮಾಲಿನ್ಯ, ಟ್ರಾಫಿಕ್ ಸಮಸ್ಯೆ, ಹೃದಯ ಮತ್ತು ಶ್ವಾಸ ಕೋಶದ ಕಾರ್ಯ ನಿರ್ವಹಣೆ ಸೇರಿದಂತೆ ಸುಮಾರು 540 ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ, ಅವುಗಳ ಬಗ್ಗೆ ಶಿಕ್ಷಕರಿಗೆ ಹಾಗೂ ಪಾಲಕರಿಗೆ ವಿವರಣೆ ನೀಡಿ ಗಮನ ಸೆಳೆದರು.
ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಕಾರ್ಯದರ್ಶಿ ಅನಂತೇಗೌಡ, ನಿವೃತ್ತ ಶಿಕ್ಷಕರಾದ ಶಂಕರಯ್ಯ, ನಾರಾಯಣ್, ರಮೇಶ್, ಶಿಕ್ಷಕ ಜನಾರ್ಧನ ಕೊಂಡಲಿ, ಅಭಿಯಂತರ ರವೀಶ್ ಉಪಸ್ಥಿತರಿದ್ದರು.




