Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ನ್ಯಾಯ ಮತ್ತು ಹಿತ ಕಾಪಾಡುವುದೇ ಸಾಹಿತ್ಯ : ಡಾ.ಲೀಲಾ ಅಪ್ಪಾಜಿ

ಮನುಷ್ಯನಿಗೆ ಬದುಕನ್ನು ಕಟ್ಟಿಕೊಡುವುದೇ ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಹಿತ ಕಾಪಾಡುವುದೇ ಸಾಹಿತ್ಯ ಎಂದು ಮಂಡ್ಯ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ, ಡಾ.ಲೀಲಾ ಅಪ್ಪಾಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಿಸಿದ್ದ ಜಿ.ಎಸ್.ಬೊಮ್ಮೇಗೌಡ ಪ್ರಧಾನ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಮಂಡ್ಯ ತಾಲ್ಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಪದ ಸಾಹಿತ್ಯವೇ ಇರಬಹುದು ,ಶಿಷ್ಟ ಭಾಷೆಯ ಸಾಹಿತ್ಯವೇ ಇರಬಹುದು. ಅದು ಕೂಡ ಸಾಹಿತ್ಯವೇ. ಮಾತೃ ಭಾಷೆಯನ್ನು ಮರೆಯಲು ಸಾಧ್ಯವಿಲ್ಲ.ಮಾತೃಭಾಷೆಗೆ ಅಪಾಯ ತರುವವರಿಂದ ಎಚ್ಚರಿಕೆ ವಹಿಸಬೇಕಿದೆ. ಮನುಷ್ಯನ ಬದುಕನ್ನ ಕಟ್ಟಿಕೊಡಬಲ್ಲದುದೇ ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಹಿತ ಕಾಪಾಡುವುದೇ ಸಾಹಿತ್ಯ. ಸಾಹಿತ್ಯ ಓದುಗರನ್ನು ಸೇರಬೇಕು. ಕೇವಲ ಅಕ್ಷರ ರೂಪದಲ್ಲಿ ಮೂಡಿರುವುದಷ್ಟೇ ಸಾಹಿತ್ಯವಲ್ಲ,ಯಾವುದು ಮನಸ್ಸಿಗೆ ಹಿತ ಉಂಟು ಮಾಡುತ್ತದೋ ಅದು ಕೂಡ ಸಾಹಿತ್ಯ ಎಂದರು.

ಇನ್ಸಟ್ರಾಗ್ರಾಮ್ ಕೂಡ ಮಾಧ್ಯಮವೇ ಆಗಿದೆ

nudikarnataka.com

ಇಂದು ಬರಹದ ರೂಪದಲ್ಲಿ ಬಂದಂತಹದ್ದನ್ನು ಓದುವವರ ಸಂಖ್ಯೆ ಕಡಿಮೆ ಆಗಿದೆ. ತಾಳೆಗರಿ ಕಾಲದಲ್ಲಿಂದ ಹಿಡಿದು ಹೊಸಗಾಲಕ್ಕೆ ತಕ್ಕಂತೆ ವಾಟ್ಸಾಪ್ ಫೇಸ್ ಬುಕ್, ಟ್ವಿಟರ್, ಇನ್ಸಟ್ರಾಗ್ರಾಮ್ ಕೂಡ ಮಾಧ್ಯಮವೇ ಆಗಿದೆ. ಹಾಗಾಗಿ ಈ ಕಾಲಘಟ್ಟಕ್ಕೆ ಸಾಹಿತ್ಯಾಸಕ್ತರು ಹೊಂದಿಕೊಳ್ಳಬೇಕಿದೆ. ಕೇವಲ ಮನರಂಜನೆಗೆಂದು ಬರೆದರೆ ಅದು ಕೆಲ ಕಾಲ ಮಾತ್ರ ಇರುತ್ತದೆ. ನಂತರ ಜಳ್ಳಿನ ರೀತಿ ತೂರಿ ಹೋಗುತ್ತದೆ ಎಂದರು.

nudikarnataka.com

ಮಾಂಡವ್ಯ ಋಷಿಯಿಂದಲೇ ಮಂಡ್ಯ ಬಂದಿದೆ ಎನ್ನುವುದು ಒಂದು ಕಡೆ ಆದರೆ. ಮಂಡೆಯ ಎಂದರೆ ರಾಗಿ ಎಂಬ ಹೆಸರಿದೆ. ಈ ಹಿನ್ನಲೆಯಲ್ಲಿಯೂ ಮಂಡ್ಯ ಎಂಬ ಹೆಸರು ಬಂದಿದೆ. ಹೇಮಾವತಿ, ಲೋಕಪಾವನಿ, ಶಿಂಷಾ ನದಿ ಇದ್ದರೂ ಮೂಲವಾಗಿಯೇ ಕಾವೇರಿ ಹಚ್ಚ ಹಸಿರಿನಿಂದ ಕೂಡಿರುವಂತೆ ಮಾಡಿರುವುದು ಅದರ ಹಿರಿಮೆ.

ನಾಲ್ವಡಿ ಅವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿ, ಲಕ್ಷಾಂತರ ಹೆಕ್ಟೇರ್ ಗಳಿಗೆ ನೀರುಣಿಸಲು ನೆರವಾದ ಮಹಾನ್ ವ್ಯಕ್ತಿ. ಅವರ ಜೊತೆ ಕೈ ಜೋಡಿಸಿದ ಮಿರ್ಜಾ ಇಸ್ಮಾಯಿಲ್ ಅವರಿಗೆ ಅಭಿನಂದನೆಗಳು. ಮೈಷುಗರ್ ಕಾರ್ಖಾನೆಯು ನೂರು ವರ್ಷಕ್ಕೆ ತಲುಪಿದೆ. ಅದರ ಸಮಸ್ಯೆ ಬಗೆಹರಿಸಿ, ಪುನರುಜ್ಜೀವನಗೊಳಿಸಲು ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಸರ್ಕಾರ ದಿಟ್ಟ ಕೃಷಿ ಬಜೆಟ್ ಮಂಡನೆ ಮಾಡಬೇಕು

nudikarnataka.com

ರೈತರ ಕೃಷಿ ಭೂಮಿಯು ರೈತರ ಕೈಯಲ್ಲೇ ಇರುವಂತೆ ನೋಡಿಕೊಳ್ಳಬೇಕಿದೆ. ಸರ್ಕಾರ ದಿಟ್ಟ ಕೃಷಿ ಬಜೆಟ್ ಮಂಡನೆ ಮಾಡಬೇಕು. ಮಹಿಳಾ ಸಂಘಟನೆಗಳು ಬಲಗೊಳ್ಳಬೇಕಿದೆ. ಸಾಹಿತ್ಯಕ್ಕೆ ಹಲವರು ಕೊಡುಗೆ ನೀಡಿದ್ದಾರೆ, ಜಾನಪದ ಸಂಸ್ಕೃತಿ ಉಳಿಯಬೇಕು. ಜಾನಪದ ನೃತ್ಯ, ಕಲೆ, ನಾಟಕಗಳಿಗೆ ಬೆಲೆಯಿದೆ. ಜಾನಪದ ಹಾಡಿನ ಹಿನ್ನಲೆ ಗಮನಸಿದರೆ ಅದರ ಹಿನ್ನಲೆಯೇ ಕೃಷಿ ಸಂಸ್ಕೃತಿಯಾಗಿದೆ ಎಂದು ಬಣ್ಣಿಸಿದರು‌

ನಾಟಕ ಕ್ಷೇತ್ರಕ್ಕೆ ಅದರದೇ ಆದ ಹಿರಿಮೆಯನ್ನ ಮಂಡ್ಯ ಕಲಾವಿದರು ತೋರಿಸಿಕೊಟ್ಟಿದ್ದಾರೆ, ಸಹಕಾರ ಕ್ಷೇತ್ರದಲ್ಲಿ ಕೆ.ವಿ.ಶಂಕರಗೌಡ ಅವರ ಸಾಧನೆ ಅಮರವಾಗಿದೆ ಎಂದು ತಿಳಿಸಿದರು.

ಕನ್ನಡಿಗರು ಎಂದರೆ ಹಿಂದೂ ಮಾತ್ರವಲ್ಲ

nudikarnataka.com

ಕನ್ನಡ ಎಂದರೆ ಅದು ಕೀಳರಿಮೆನೂ ಅಲ್ಲ, ಕೃಷಿಕನಿಂದ ಹಿಡಿದು ಕಾರ್ಮಿಕನವರೆಗೂ ಕನ್ನಡ ಕಟ್ಟಿದ್ದಾನೆ. ಕನ್ನಡ ಬಳಸುವುದರಿಂದ ಉಳಿಯುತ್ತದೆ. ಅದು ನಮ್ಮ ನಾಲಗೆಯಿಂದ ಬರಬೇಕು. ಕನ್ನಡಿಗರು ಎಂದರೆ ಹಿಂದೂ ಮಾತ್ರವಲ್ಲ, ಪರಭಾಷಿಕರು ಸಹ ಕನ್ನಡ ಮಾತನಾಡುತ್ತಾರೆ, ಈ ನಾಡಲ್ಲಿ ಇರುವವರು ಕನ್ನಡ ಭಾಷೆ ಕಲಿತು ಮಾತನಾಡಲಿ, ಪರಭಾಷೆ ಕಲಿಸಲು ಬರುವವರಿಗೆ ದಿಟ್ಟ ಉತ್ತರ ಕೊಡಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಂಡವ್ಯ ಸ್ಮರಣ ಸಂಚಿಕೆ, ಹನಿಗವನ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಮ್ಮೇಳನದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು,ಮನ್ ಮುಲ್ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕಾರ್ಯದರ್ಶಿ ಬಾಲರಾಜ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜು ಮುತ್ತೇಗೆರೆ, ಮುಖಂಡರಾದ ಸಿ.ಡಿ.ಗಂಗಾಧರ, ಎಚ್.ಟಿ.ಬಾಲರಾಜು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಇ.ಸಿ.ರಾಮಚಂದ್ರೇಗೌಡ, ನಿಕಟಪೂರ್ವ ಅಧ್ಯಕ್ಷ ಧರಣೀಂದ್ರಯ್ಯ, ದುದ್ದ ಗ್ರಾ.ಪಂ.ಅಧ್ಯಕ್ಷೆ ಸೌಭಾಗ್ಯ, ತಾಲ್ಲೂಕು ಆರೋಗ್ಯ ಅಧಿಕಾರಿ ಜವರೇಗೌಡ, ಬಿಇಒ ಸೌಭಾಗ್ಯ, ಚಂದ್ರಕಾಂತ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!