Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರ ಬಂದ್ : ರೈತರಿಗೆ ಜನರ ಬೆಂಬಲ

ಟನ್ ಕಬ್ಬಿಗೆ 4500ರೂ. ದರ ನಿಗದಿ, ಹಾಲಿನ ದರ 40 ರೂ. ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತಸಂಘ ಕರೆ ನೀಡಿದ್ದ ಮಂಡ್ಯ ನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದು,ರೈತರು ರಾಜ್ಯ ಸರ್ಕಾರದ ಗಮನ ಸೆಳೆಯಲು ಡಿ.19 ರ ಇಂದು ಮಂಡ್ಯ ನಗರ ಬಂದ್ ಕರೆ ನೀಡಿದ್ದರು. ಇದಕ್ಕೆ ಮಂಡ್ಯದ ಜನರು ಅಭೂತಪೂರ್ವ ಬೆಂಬಲ ನೀಡಿದ್ದು, ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿ ಬಂದ್ ಮಾಡಿ ಬೆಂಬಲ ನೀಡಿದರು.

nudikarnataka.com

ಮಂಡ್ಯ ನಗರದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಪೇಟೆ ಬೀದಿ, ಜೈನರ ಬೀದಿ, ವಿವಿ ರಸ್ತೆ, ಆರ್.ಪಿ. ರಸ್ತೆ,ನೂರಡಿ ರಸ್ತೆ,ಗುತ್ತಲು ರಸ್ತೆ ಸೇರಿದಂತೆ ನಗರದ ಎಲ್ಲೆಡೆ ಜನರು ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಸಹಕರಿಸಿದರು. ಹಲವು ಅಂಗಡಿ ಮಳಿಗೆಗಳ ಮೇಲೆ ಮಂಡ್ಯ ಬಂದ್ ಗೆ ನಮ್ಮ ಬೆಂಬಲ ಎಂದು ಅಂಗಡಿಯ ಮೇಲೆ ಚೀಟಿ ಅಂಟಿಸಲಾಗಿತ್ತು. ಪೇಟೆ ಬೀದಿಯಲ್ಲಿ ವರ್ತಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಹಾಗೂ ವಿವಿ ರಸ್ತೆಯಲ್ಲಿ ಕೆಲವು ಅಂಗಡಿಗಳಿಗೆ ರೈತರೊಂದಿಗೆ ನಾವು ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂಬ ಚೀಟಿಯನ್ನು ಅಂಟಿಸಿ ಬಾಗಿಲು ಹಾಕಿರುವುದು ಗಮನ ಸೆಳೆಯಿತು.

ಬೈಕ್ ರ್‍ಯಾಲಿ

ಮಂಡ್ಯ ನಗರ ಬಂದ್ ಹಿನ್ನಲೆಯಲ್ಲಿ ರಾಜ್ಯ ರೈತಸಂಘದ ಸಾವಿರಾರು ರೈತರು ಬೈಕ್ ರ‌್ಯಾಲಿ ನಡೆಸಿ ಬಂದ್ ಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ರೈತ ನಾಯಕರ ಮನವಿಗೆ ಮಂಡ್ಯ ನಗರದ ನಾಗರೀಕರು ಸ್ಪಂದಿಸಿ ಅಂಗಡಿ-ಮಳಿಗೆಗಳ ಬಾಗಿಲು ಮುಚ್ಚಿ ಬೆಂಬಲ ನೀಡಿದರು.ಬೆಳ್ಳಂ ಬೆಳಿಗ್ಗೆ ವ್ಯಾಪಾರ ಮಾಡುತ್ತಿದ್ದ ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರು ಬಾಗಿಲು ಮುಚ್ಚಿಸಿದರು, ಇದರಿಂದ ಹೋಟೆಲ್ ವ್ಯಾಪಾರಕ್ಕೆ ಅಡೆತಡೆ ಉಂಟಾಯಿತು.

nudikarnataka.com

ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು ಮಾಡಲಾಗಿತ್ತು. ಹೆದ್ದಾರಿಯಲ್ಲಿನ ಪೆಟ್ರೋಲ್ ಬಂಕ್ ಗಳು ಕೆಲ ತಾಸು ವ್ಯಾಪಾರ ಸ್ಥಗಿತ ಮಾಡಿದ್ದವು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು,ಸರ್ಕಾರಿ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳು ಕೆ ಎಸ್ ಆರ್ ಟಿ ಸಿ ನಿಲ್ದಾಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರು ಮೈಸೂರಿಗೆ ತೆರಳುವ ಪ್ರಯಾಣಿಕರು ಬಸ್ ಸಿಗದೆ ಪರದಾಡಿದರು

ರಸ್ತೆ ಸಂಚಾರ ಅಸ್ತವ್ಯಸ್ತ

ಬಂದ್ ಹಿನ್ನಲೆಯಲ್ಲಿ ಇಂದು ಮಂಡ್ಯ ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ನೆರೆದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳನ್ನು ವಿಸಿ ಫಾರಂ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಹಾಗೆಯೇ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ಶ್ರೀನಿವಾಸಪುರ ಗೇಟ್ ಬಳಿ ಎನ್ ಎಚ್ ಎ ಐನ ಸರ್ವಿಸ್ ರಸ್ತೆಯ ಮೂಲಕ ಸಂಚರಿಸಲು ಅನುಕೂಲ ಮಾಡಿಕೊಡಲಾಯಿತು.

ವಿದ್ಯಾರ್ಥಿಗಳ ಬೆಂಬಲ

ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರೈತರ ಹೋರಾಟ ಬೆಂಬಲಿಸಿದರು. ಕೇಂದ್ರ- ರಾಜ್ಯಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರೈತರಸಂಘದ ಜೊತೆ ದನಿಗೂಡಿಸಿದ ದಲಿತ, ಪ್ರಗತಿಪರ,ಕನ್ನಡಪರ ಸಂಘಟನೆಗಳು ಮುಖಂಡರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೃಹತ್ ಹೋರಾಟ ನಡೆಸಿದ ಸಾವಿರಾರು ರೈತಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿ ಕಾರಿದರು.

ನಡೆದ ಶಾಲೆಗಳು
ಮಂಡ್ಯ ನಗರ ಬಂದ್ ನಡೆದರೂ ಶಾಲೆಗಳು ಎಂದಿನಂತೆಯೇ ನಡೆದವು. ಶಾಲೆಗಳಿಗೆ ಯಾವ ರೀತಿಯ ತೊಂದರೆಯೂ ಆಗಲಿಲ್ಲ.

ರೈತನಾಯಕರಾದ ಎ.ಎಲ್‌.ಕೆಂಪೂಗೌಡ, ಮಧುಚಂದನ್, ಪ್ರಸನ್ನ,ರವಿಕುಮಾರ್, ಬೊಮ್ಮೇಗೌಡ ಸೇರಿದಂತೆ ಸಾವಿರಾರು ರೈತಸಂಘದ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!