2023 ರ ವಿಧಾನಸಭಾ ಚುನಾವಣೆಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹೊರತುಪಡಿಸಿ ಉಳಿದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಹಳಬರಿಗೆ ಜೆಡಿಎಸ್ ವರಿಷ್ಠರು ಮಣೆ ಹಾಕಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಶ್ರೀನಿವಾಸ್, ಮದ್ದೂರಿನಿಂದ ಡಿ.ಸಿ.ತಮ್ಮಣ್ಣ, ಮೇಲುಕೋಟೆಯಿಂದ ಸಿ.ಎಸ್.ಪುಟ್ಟರಾಜು, ನಾಗಮಂಗಲದಿಂದ ಸುರೇಶ್ ಗೌಡ, ಶ್ರೀರಂಗಪಟ್ಟಣದಿಂದ ರವೀಂದ್ರ ಶ್ರೀಕಂಠಯ್ಯ, ಮಳವಳ್ಳಿಯಿಂದ ಅನ್ನದಾನಿ ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ಘೋಷಣೆ ಮಾಡಿದ್ದಾರೆ. ಇವರೆಲ್ಲರೂ ಹಾಲಿ ಶಾಸಕರಾಗಿದ್ದು, ಮತ್ತೊಮ್ಮೆ ಸ್ಪರ್ಧೆ ಮಾಡಲಿದ್ದಾರೆ.

ಇನ್ನು ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಜಿ.ಪಂ.ಮಾಜಿ ಸದಸ್ಯ ಎಚ್.ಟಿ.ಮಂಜು ಅವರಿಗೆ ನೀಡುವ ಮೂಲಕ ದಳಪತಿಗಳು ಕಳೆದ ಉಪ ಚುನಾವಣೆಯಲ್ಲಿ ಸೋತಿದ್ದ ದೇವರಾಜು ಅವರ ಕೈ ಬಿಟ್ಟಿದ್ದಾರೆ. ಇಲ್ಲಿ ಎಚ್.ಟಿ.ಮಂಜು ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಕುತೂಹಲದ ಆಯ್ಕೆ
ಜೆಡಿಎಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿರುವುದು ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಆರೋಗ್ಯ ಸರಿಯಿರದ ಹಿನ್ನಲೆಯಲ್ಲಿ ಬೇರೆಯವರಿಗೆ ಮಣೆ ಹಾಕುತ್ತಾರೆಂಬ ಮಾತು ಮೂರ್ನಾಲ್ಕು ವರ್ಷಗಳಿಂದ ದಟ್ಟವಾಗಿತ್ತು. ಇಂತಹ ಮಾತುಗಳಿದ್ದ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ ಅವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿರುವುದು ಅವರ ಅಭಿಮಾನಿಗಳಿಗೆ ನಂಬಲು ಆಗದಂತೆ ಮಾಡಿದೆ.
ಆಕಾಂಕ್ಷಿಗಳಿಗೆ ಶಾಕ್
ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ವರಿಷ್ಠರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನೀಡುತ್ತಿದ್ದ, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಪಿಇಟಿ ಅಧ್ಯಕ್ಷ ವಿಜಯ್ ಆನಂದ್, ಶಾಸಕ ಎಂ.ಶ್ರೀನಿವಾಸ್ ಅಳಿಯ, ಜಿ.ಪಂ.ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಹಾಗೂ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಆರು ಕ್ಷೇತ್ರಗಳಲ್ಲಿದ್ದ ಹಾಲಿ ಶಾಸಕರನ್ನೇ ಮುಂದುವರೆಸುವ ಮೂಲಕ ಜೆಡಿಎಸ್ ವರಿಷ್ಠರು ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಹಳಬರನ್ನೇ ಕಣಕ್ಕಿಳಿಸಲು ಮುಂದಾಗಿದ್ದಾರೆ. ಹಾಗಾಗಿ ಜೆಡಿಎಸ್ ನಿಂದ ಆಕಾಂಕ್ಷಿಗಳಾಗಿದ್ದ ಯುವ ನಾಯಕರು ಮುಂದಿನ ಐದು ವರ್ಷಗಳ ಕಾಲ ಕಾಯಬೇಕಿದೆ ಅಥವಾ ವರಿಷ್ಠರ ನಿರ್ಧಾರದಿಂದ ಬೇಸತ್ತು ಬೇರೆ ಪಕ್ಷಗಳ ಕಡೆಗೆ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗೊಂದಲ ಕಾರಣವಾಯ್ತಾ
ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ನಾಲ್ಕು ಮಂದಿ ಆಕಾಂಕ್ಷಿಗಳು ಕಳೆದ ಎರಡು, ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಈ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ಎಂದು ಮಂಡ್ಯ ಕ್ಷೇತ್ರದ ಜನರು ಭಾವಿಸಿದ್ದರು. ಆದರೆ ಹೀಗೆ ಮಾಡಿದರೆ ಬಹಳ ಗೊಂದಲ ಉಂಟಾಗಲಿದೆ ಎಂದು ವರಿಷ್ಟರು ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿ ಎಂ.ಶ್ರೀನಿವಾಸ್ ಹೆಸರನ್ನು ಘೋಷಣೆ ಮಾಡಿ ಜೆಡಿಎಸ್ ಶಾಸಕನಾಗುವ ಕನಸು ಕಾಣುತ್ತಿದ್ದ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ.




