Thursday, September 19, 2024

ಪ್ರಾಯೋಗಿಕ ಆವೃತ್ತಿ

ದರ್ಶನ್ ಮೇಲೆ ಚಪ್ಪಲಿ ಎಸೆತ ಪ್ರಕರಣ : ದರ್ಶನ್‌ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್‌

ನಟ ದರ್ಶನ್‌ ಮೇಲೆ ಹೊಸಪೇಟೆಯಲ್ಲಿ ನಡೆದ ಚಪ್ಪಲಿ ಎಸೆತ ಹಲ್ಲೆಯನ್ನು ಖಂಡಿಸಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಕಿಚ್ಚ ಸುದೀಪ್‌ ಬಹಿರಂಗ ಪತ್ರ ಬರೆದಿದ್ದಾರೆ.

ಈ ಹಿಂದೆ ಕುಚ್ಚಿಕು ಗೆಳೆಯರಂತಿದ್ದ ಸುದೀಪ್‌ ಮತ್ತು ದರ್ಶನ್‌ ಕಾರಣಾಂತರಗಳಿಂದ ಅಂತರ ಕಾಯ್ದುಕೊಂಡಿದ್ದರು. ದರ್ಶನ್‌ ಮೇಲೆ ಹಲ್ಲೆ ನಡೆದ ವಿಚಾರ ತಿಳಿಯುತ್ತಲೇ ಟ್ವೀಟ್‌ ಮಾಡಿ ಬೆಂಬಲ ವ್ಯಕ್ತಪಡಿಸಿರುವ ಸುದೀಪ್‌, “ನಮ್ಮಿಬ್ಬರ ನಡುವೆ ಏನೇ ಮನಸ್ತಾಪಗಳಿರಬಹುದು. ಆದರೆ, ಆತನ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸದೆ ಇರಲಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ದರ್ಶನ್ ಜೊತೆಗೆ ಈ ರೀತಿ ನಡೆದುಕೊಂಡಿದ್ದು ಸರಿ ಅಲ್ಲ. ಈ ಘಟನೆ ನನ್ನನ್ನು ಕೂಡ ವಿಚಲಿತನನ್ನಾಗಿಸಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀಪ್‌ ಬಹಿರಂಗ ಪತ್ರದ ಭಾವಾನುವಾದ ಇಲ್ಲಿದೆ

ನಮ್ಮ ನೆಲ, ಭಾಷೆ, ಸಂಸ್ಕೃತಿ, ಪ್ರೀತಿ ಮತ್ತು ಗೌರವವನ್ನು ತೋರುವಂಥದ್ದು. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಪರಿಹಾರ ಕಂಡುಕೊಳ್ಳಲು ಹಲವು ರೀತಿಯ ಮಾರ್ಗಗಳೂ ಇವೆ. ಯಾರೇ ಆಗಲಿ ಪ್ರತಿಯೊಬ್ಬರ ಜೊತೆಗೆ ಗೌರವದಿಂದ ನಡೆದುಕೊಳ್ಳಬೇಕು. ಶಾಂತಿಯಿಂದ ಯಾವುದೇ ಸಮಸ್ಯೆಯನ್ನು ಬೇಕಿದ್ದರೂ ಪರಿಹರಿಸಬಹುದು.

ದರ್ಶನ್‌ ಮೇಲೆ ಹಲ್ಲೆ ನಡೆಸಿದ ವಿಡಿಯೋವನ್ನು ನೋಡಿ ನಾನು ಕೂಡ ವಿಚಲಿತನಾದೆ. ಚಿತ್ರದ ನಾಯಕಿ ಸೇರಿದಂತೆ ಹಲವರು ಆ ವೇದಿಕೆಯ ಮೇಲಿದ್ದರು. ಯಾವುದಕ್ಕೂ ಸಂಬಂಧವೇ ಇರದ ಚಿತ್ರತಂಡದ ಮೇಲೆ ದರ್ಪ ತೋರಿಸಿದ್ದು ಅಸಂಭದ್ದ. ಸಾರ್ವಜನಿಕವಾಗಿ ಅವರನ್ನೆಲ್ಲ ಅವಮಾನಿಸಿದ್ದನ್ನು ನೋಡಿದಾಗ ಕನ್ನಡಿಗರು ಈ ರೀತಿ ಅಸಹ್ಯಕರವಾಗಿ ನಡೆದುಕೊಳ್ಳಲು ಸಾಧ್ಯವೇ ಎನ್ನಿಸಿತು. ನಿಜಕ್ಕೂ ಈ ರೀತಿ ವರ್ತಿಸುವ ಅಗತ್ಯವಿತ್ತೆ?

ದರ್ಶನ್‌ ವಿಚಾರಕ್ಕೆ ಬರುವುದಾದರೆ, ಪುನೀತ್‌ ಅಭಿಮಾನಿಗಳು ಮತ್ತು ದರ್ಶನ್‌ ನಡುವೆ ಮನಸ್ತಾಪಗಳಿವೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಪುನೀತ್‌ ಬದುಕಿದ್ದರೆ ತಮ್ಮ ಹೆಸರಿನಲ್ಲಿ ನಡೆಸಿದ ಈ ಕೃತ್ಯವನ್ನು ಅವರು ಮೆಚ್ಚಿಕೊಂಡು, ಬೆಂಬಲಿಸುತ್ತಿದ್ದರು ಎನ್ನುತ್ತೀರಾ? ಪುನೀತ್‌ ಅವರನ್ನು ಪ್ರೀತಿಸುವ ಪ್ರತಿ ಅಭಿಮಾನಿಗೂ ಈ ಪ್ರಶ್ನೆಗೆ ಉತ್ತರ ಏನೇಂಬುದು ತಿಳಿದಿದೆ. ಗುಂಪಿನಲ್ಲಿ ಅಡಗಿಕೊಂಡು ಒಬ್ಬ ಕಿಡಿಗೇಡಿ ಮಾಡಿದ ಚಿಲ್ಲರೆ ಕೆಲಸದಿಂದ ಪ್ರೀತಿ, ಅಭಿಮಾನ ಮತ್ತು ಘನತೆಗೆ ಹೆಸರಾಗಿರುವ ಪುನೀತ್‌ ಅಭಿಮಾನಿಗಳಿಗೆ ಧಕ್ಕೆಯುಂಟಾಗಬಾರದು.    

ದರ್ಶನ್‌ ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮಿಬ್ಬರ ನಡುವೆ ಏನೇ ಮನಸ್ತಾಪಗಳಿರಬಹುದು. ಆದರೆ, ಆತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸದೆ ಸುಮ್ಮನಿರಲಾರೆ. ಆತನಿಗೆ ಈ ರೀತಿಯ ಅವಮಾನ ಮಾಡಿದ್ದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಈ ಘಟನೆಯಿಂದ ನಾನು ಕೂಡ ವಿಚಲಿತನಾಗಿದ್ದೇನೆ.

ಒಳ್ಳೆಯ ಕಾರಣಗಳಿಗಾಗಿ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನರನ್ನು ಎಲ್ಲ ರಾಜ್ಯಗಳ ಜನರು ಗೌರವಿಸುತ್ತಾರೆ. ನೆರೆಹೊರೆಯವರಿಗೆ ನಾವು ರವಾನಿಸಬೇಕಾದ್ದು ಈ ರೀತಿಯ ಸಂದೇಶವನ್ನಲ್ಲ. ಯಾವುದೇ ವಿಚಾರಕ್ಕೆ ಈ ರೀತಿ ಅಸಮಾಧಾನ ತೋರುವುದನ್ನು ಯಾರೂ ಕೂಡ ಪ್ರತಿಯುತ್ತರ ಎನ್ನಲು ಸಾಧ್ಯವಿಲ್ಲ.

ನಟರ ನಡುವೆ ಮತ್ತು ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯಗಳಿರುತ್ತವೆ ಎಂಬುದನ್ನು ನಾನು ಬಲ್ಲೆ. ಆ ವಿಚಾರವಾಗಿ ಮಧ್ಯ ಪ್ರವೇಶಿಸಿ ಇತ್ಯರ್ಥ ಮಾಡಲು ನಾನ್ಯಾರೂ ಅಲ್ಲ. ಆದರೆ, ದರ್ಶನ್‌ ಮತ್ತು ಪುನೀತ್‌ ಇಬ್ಬರೊಂದಿಗೂ ಆತ್ಮೀಯವಾಗಿದ್ದೆ. ಅವರ ಬದುಕಿನಲ್ಲಿ ನನಗಿದ್ದ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಅದೇ ಸಲಿಗೆಯಿಂದ ನನಗನ್ನಿಸಿದ್ದನ್ನು ಹೇಳುತ್ತಿದ್ದೇನೆ.

ನಾನು ನನ್ನ ಇತಿ ಮಿತಿಗಳನ್ನು ಮೀರಿ ಮಾತನಾಡಿದ್ದೇನೆ ಎಂದನಿಸಿದರೆ ದಯವಿಟ್ಟು ಕ್ಷಮಿಸಿ. 27 ವರ್ಷಗಳ ಕಾಲ ಈ ಚಿತ್ರರಂಗದದಲ್ಲಿ ಸಾಗಿ ಬಂದಿರುವ ನಾನು ಒಂದು ಅಂಶವನ್ನಂತು ಖಂಡಿತವಾಗಿ ಅರ್ಥ ಮಾಡಿಕೊಂಡಿದ್ದೇನೆ. ಇಲ್ಲಿ ಯಾವುದು ಕೂಡ ಶಾಶ್ವತವಲ್ಲ. ಹಾಗೇ ಯಾರೂ ಕೂಡ ಶಾಶ್ವತವಾಗಿ ಉಳಿಯುವುದಿಲ್ಲ. ಇರುವಷ್ಟು ದಿನ ಎಲ್ಲರೊಂದಿಗೂ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳೋಣ, ಎಲ್ಲರಿಂದಲೂ ಅದೇ ಪ್ರೀತಿ, ಗೌರವವನ್ನು ನಿರೀಕ್ಷಿಸೋಣ. ಯಾರನ್ನೇ ಆಗಲಿ, ಸಂದರ್ಭ ಎಂಥದ್ದೇ ಇರಲಿ ಪ್ರೀತಿ ಮತ್ತು ಗೌರವದಿಂದ ಮಾತ್ರ ಗೆಲ್ಲಲು ಸಾಧ್ಯ.  

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!