Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಿತ್ರಕಲೆಗೆ ಅನುಭವ-ಸ್ವಂತಿಕೆ ಬೇಕು : ಚಿತ್ರ ಕಲಾವಿದ ಜಯದೇವ್

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗೂಗಲ್ ಮಾಹಿತಿ ಪಡೆದು ಚಿತ್ರ ರಚನೆಯಲ್ಲಿ ತೊಡಗುತ್ತಾರೆ, ಇದರಲ್ಲಿ ಸ್ವಂತಿಕೆ ಮತ್ತು ಸತ್ವವಿರುವುದಿಲ್ಲ, ಚಿತ್ರಕಲೆ ಎಂದರೆ ಅನುಭವ, ಸ್ವಂತಿಕೆಯಿಂದ ಕೂಡಿರಬೇಕೆಂದು ಚಿತ್ರ ಕಲಾವಿದ ಜಯದೇವ್ ಅಭಿಪ್ರಾಯಪಟ್ಟರು.

ಮಂಡ್ಯನಗರದ ವಿ.ವಿ.ನಗರದ ”ಪುಟ್ಟಹೆಜ್ಜೆ” ನಿವಾಸದಲ್ಲಿ ನಡೆದ ಚಿತ್ರ ಕಲಾವಿದ ಸೋಮುವರದ ಅವರ ಪುತ್ರಿ  5 ವರ್ಷದ  ಸೃಜನಿ ಎಸ್.ವಿ. ಅವರ 3 ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳ ಚಿತ್ರಕಲೆಯ ಸವಾಲುಗಳು ಕುರಿತು ಮಾತನಾಡಿದ ಅವರು, ಸ್ವಂತ ಅನುಭವದಿಂದ ಒಡಮೂಡಿದ ಚಿತ್ರಗಳನ್ನು ಬರೆದಾಗ ಅವುಗಳು ತುಂಬಾ ಸತ್ವಯುತವಾಗಿರುತ್ತವೆ. ಇಂತಹ ಚಿತ್ರ ರಚಿಸುವುದನ್ನು ಕಲಿಯಬೇಕು. ಸೃಜನಿಯ ಚಿತ್ರಗಳಲ್ಲಿ ಪ್ರಾಮಾಣಿಕತೆ, ಸ್ವಂತಿಕೆ ಇದೆ. ತನ್ನ ಅನುಭವಕ್ಕೆ ಬಂದದ್ದನ್ನು ನೇರವಾಗಿ ಸರಳ ಸುಂದರವಾಗಿ ಅಭಿವ್ಯಕ್ತಿಗೊಳಿಸಿದ್ದಾಳೆ ಎಂದು ಶ್ಲಾಘಿಸಿದರು.

nudikarnataka.com

ಚಿತ್ರಕಲಾ ಪ್ರದರ್ಶನವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದ ಶಿಕ್ಷಕಿ ಕೆ.ಎಸ್.ಅಶ್ವಿನಿ ಮಾತನಾಡಿ, ಶಾಲೆಯ ಪಠ್ಯಗಳ ಓದಿನ ಜೊತೆಗೆ ಈ ರೀತಿಯ ಸೃಜನಾತ್ಮಕ ಕಲೆಗಳನ್ನು ಮಕ್ಕಳು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪೋಷಕರು ಅದಕ್ಕೆ ಸರಿಯಾದ ಪ್ರೋತ್ಸಾಹ ನೀಡಿದಲ್ಲಿ ಮಕ್ಕಳು ಉತ್ತಮ ಕಲಾವಿದರಾಗುತ್ತಾರೆ. ಇದಕ್ಕೆ ಸೃಜನಿಯೇ ಸಾಕ್ಷಿಯಾಗಿದ್ದಾಳೆ. ಇವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಶುಭ ಕೋರಿದರು. ಮುಖ್ಯ ಶಿಕ್ಷಕ ಯೋಗೇಶ್ ಎಂ.ಮಾತನಾಡಿ, ಸೃಜನಿ ರೇಖಾಚಿತ್ರ ಹಾಗೂ ಬಣ್ಣದ ಚಿತ್ರಗಳ ಪ್ರದರ್ಶನ ಅತ್ಯದ್ಭುತವಾಗಿದೆ. ಅವರ ತಂದೆಯಲ್ಲಿರುವ ಸೃಜನಶೀಲತೆ ಇವರಿಗೆ ಪ್ರೇರಣೆಯಾಗಿದೆ ಎಂದರು.

nudikarnataka.com

ಅಧ್ಯಕ್ಷತೆ ವಹಿಸಿದ್ದ ಚಿಂತಕ ಸಾ.ವೆ.ರ ಸ್ವಾಮಿ ಮಾತನಾಡಿ, ಚಿತ್ರಗಳು ಅನೇಕ ಬಗೆಯ ಅರ್ಥಗಳನ್ನು ಹಾಗೂ ಭಾವನೆಗಳನ್ನು ಮೂಡಿಸುತ್ತವೆ. ಒಂದೇ ಅರ್ಥಕ್ಕೆ ಸೀಮಿತವಾಗಿಲ್ಲ. ಮುಗ್ಧಲೋಕದ ಅನಾವರಣ ಸೃಜನಿಯ ಚಿತ್ರಕಲೆಗಳಲ್ಲಿ ಒಡಮೂಡಿದೆ. ಚಿತ್ರಗಳಲ್ಲಿರುವ ಸೂಕ್ಷ್ಮ ಭಾವನೆಗಳನ್ನು ಸಹ ಕಾಣಬಹುದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕಲಾನಿಕೇತನ ಸ್ಕೂಲ್ ಆರ್ಟ್ ನ ಚಿತ್ರಕಲಾ ಶಿಕ್ಷಕ ಪರಮೇಶ್ವರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!