Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾರ್ವಜನಿಕ ಸಂಪರ್ಕಾಧಿಕಾರಿ ಇಲ್ಲದೇ ಕೊಳಗೇರಿ ಮಂಡಳಿ ಕೆಲಸ ಕುಂಠಿತ

ಸರ್ಕಾರದ ಕೆಲವು ಇಲಾಖೆಗಳ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಕೋಟಿ ಕೋಟಿ ಅನುದಾನ, ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಿದ್ದರೂ, ಅವುಗಳ ಮಾಹಿತಿಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ವಿಫಲವಾಗುತ್ತಿವೆ. ಆ ಕಾರಣಕ್ಕಾಗಿ ನೆಗೆಟಿವ್ ಇಮೇಜ್ ಸೃಷ್ಟಿಸಿಕೊಂಡಿವೆ. ಇಂತಹದ್ದೆ ಸಮಸ್ಯೆಯನ್ನ ‘ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ’ಯೂ ಎದುರಿಸುತ್ತಿದೆ.

ಒಂದು ಸಂಸ್ಥೆಯ ಅಥವಾ ಇಲಾಖೆಯ ಬಗೆಗಿನ ವಿವರವನ್ನು ಸಾರ್ವಜನಿಕರೊಂದಿಗೆ ಹಾಗೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಓ) ಅತ್ಯವಶ್ಯಕ. ಆದರೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಈ ಹುದ್ದೆಯೇ ಇಲ್ಲ.

ಸಾರ್ವಜನಿಕ ಸಂಪರ್ಕಾಧಿಕಾರಿ ಎಂದರೇನು?

ಒಂದು ಸಂಸ್ಥೆ, ಇಲಾಖೆ ಅಥವಾ ಕಂಪನಿ ಮತ್ತು ಅವುಗಳ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ಪರಿಚಯಿಸುವ, ಮಾಹಿತಿ ನೀಡುವ ಕಾರ್ಯವನ್ನು ಸಾರ್ವಜನಿಕ ಸಂಪರ್ಕಾಧಿಕಾರಿ ನಿರ್ವಹಿಸುತ್ತಾರೆ.

ಇಲಾಖೆ ಮತ್ತು ಸಂಸ್ಥೆಗಳಲ್ಲಿನ ಕಾರ್ಯ ಚಟುವಟಿಕೆಗಳು ಸೇರಿದಂತೆ ಇತರ ಕಾರ್ಯಕ್ರಮಗಳನ್ನು ದಾಖಲಿಸುವುದು. ಗ್ರಾಹಕರಿಗೆ ಬೆಂಬಲ ಮತ್ತು ಮಾಹಿತಿ ನೀಡುವುದು ಸಂಪರ್ಕಾಧಿಕಾರಿಯ ಪ್ರಮುಖ ಕೆಲಸ. ಒಂದರ್ಥದಲ್ಲಿ ಪಿಆರ್‌ಓ ಮ್ಯಾನೇಜ್ಮೆಂಟ್, ಉದ್ಯೋಗಿ ಹಾಗೂ ಗ್ರಾಹಕರ ನಡುವೆ ಸಂಪರ್ಕ ಸೇತುವಾಗಿ ನಿಲ್ಲುತ್ತಾರೆ. ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಓ) ಎಂದೇ ಕರೆಸಿಕೊಳ್ಳುವ ಈ ಹುದ್ದೆ ಹಲವಾರು ಯುವಜನರಿಗೆ ಉದ್ಯೋಗವನ್ನು ನೀಡಿದೆ.

ಪಿಆರ್‌ಓನ ಪ್ರಮುಖ ಕೆಲಸ

ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುವುದು.
ಸಂಪರ್ಕ ಸಾಧಿಸಲು ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಪಡಿ, ಅದನ್ನು ಜಾರಿಗೊಳಿಸುವುದು.
ಮಾಧ್ಯಮದ ಮೂಲಕ ಪ್ರಚಾರ ನಡೆಸಲು ಪ್ರೆಸ್ ಕಾನ್ಫರೆನ್ಸ್ ನಡೆಸುವುದು.
ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇರಿಕೊಂಡಿರುವ ಸಂಸ್ಥೆಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳೊಂದಿಗೆ ದೂರವಾಣಿ ಅಥವಾ ಇಮೇಲ್ ಮೂಲಕ ಸಂಪರ್ಕ ಬೆಳೆಸುವುದು.
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ದಾಖಲಿಸುವುದು.
ಸಂಸ್ಥೆಯ ಮ್ಯಾಗಝಿನ್, ಕೇಸ್ ಸ್ಟಡಿಗಳು, ಭಾಷಣ, ಪತ್ರಿಕೆಗಳಿಗೆ ಲೇಖನ ಬರೆಯುವುದು, ವಾರ್ಷಿಕ ಲೆಕ್ಕ ಪತ್ರಗಳನ್ನು ಸಿದ್ದಗೊಳಿಸುವುದು.
ಕೈಪಿಡಿ, ಕರಪತ್ರ, ಇಮೇಲ್, ಪ್ರಚಾರದ ವೀಡಿಯೋ, ಚಿತ್ರ, ಛಾಯಾಚಿತ್ರಗಳನ್ನು ತಯಾರು ಮಾಡುವುದು.
ದುಡಿಯುತ್ತಿರುವ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಅನುಗುಣವಾಗಿ ಡಾಕ್ಯುಮೆಂಟರಿ ಚಿತ್ರಗಳನ್ನು ಸಿದ್ಧಪಡಿಸುವುದು.
ವೆಬ್‌ಸೈಟ್‌ಗಳಲ್ಲಿ ಮಾಹಿತಿಗಳನ್ನು ಅಪ್‌ಡೇಟ್ ಮಾಡುವುದು.

ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಏನು ಅರ್ಹತೆ?

ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಕನಿಷ್ಟ ಪದವಿ ಶಿಕ್ಷಣ ಮುಗಿಸಿರಬೇಕು. ಕ್ರಿಯಾಶೀಲತೆ, ಜನರೊಂದಿಗೆ ಉತ್ತಮ ಒಡನಾಟ ನಡೆಸುವ ಗುಣವಿರಬೇಕು. ಭಾಷಾ ಸಾಮರ್ಥ್ಯ, ಸಂವಹನ ಕಲೆ, ಒಳ್ಳೆಯ ಸಂಶೋಧನೆ ಮತ್ತು ವಿಶ್ಲೇಷಿಸುವ ಕೌಶಲ್ಯ ಹೊಂದಿರಬೇಕು.

ಸೈಕಾಲಜಿ, ಎಕಾನಾಮಿಕ್ಸ್, ಮಾರ್ಕೆಟಿಂಗ್, ಸೋಷಿಯಾಲಜಿ, ಬ್ಯುಸಿನೆಸ್ ಸ್ಟಡೀಸ್ ಅಥವಾ ಜಾಹೀರಾತು ವಿಷಯದಲ್ಲಿ ಪದವಿಗಳಿಸಿದವರು ಅಥವಾ ಜಾಹೀರಾತು ಟ್ರೆಂಡ್, ಮೀಡಿಯಾ ಟೆಕ್ನಿಕ್ಸ್, ಎಡಿಟಿಂಗ್, ಭಾಷಣ ಬರೆಯವುದು, ಸಂಶೋಧನಾ ವಿಧಾನಗಳನ್ನು ತಿಳಿದಿರುವವರು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದು.

ಈ ಕುರಿತು ದಕ್ಷಿಣ ಭಾರತ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಘದ ಅಧಿಕಾರಿಯೊಬ್ಬರು ಮಾತನಾಡಿ, “ಒಂದು ಇಲಾಖೆಯಲ್ಲಿ 100ರಿಂದ 200 ಅಧಿಕಾರಿಗಳಿರುತ್ತಾರೆ. ಕೆಎಎಸ್, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಪ್ರತಿ ಸಂದರ್ಭದಲ್ಲಿಯೂ ನಾನಾ ವಿಚಾರಗಳ ಬಗ್ಗೆ ಕೇಳಲು ಆಗುವುದಿಲ್ಲ. ಅವರು ಮೀಟಿಂಗ್‌ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಕಾರ್ಯನಿರತರಾಗಿರುತ್ತಾರೆ. ಒಂದು ಸಂಸ್ಥೆ ಅಥವಾ ಇಲಾಖೆಯ ಬಗ್ಗೆ ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ವಿಚಾರಗಳ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಲು ಒಬ್ಬ ಅಧಿಕಾರಿ ಬೇಕಾಗುತ್ತಾರೆ” ಎಂದು ವಿವರಿಸಿದರು.

“ಒಂದು ಇಲಾಖೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಒಬ್ಬ ಅಧಿಕಾರಿ ಅವಶ್ಯಕ. ಸರ್ಕಾರ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಯಲ್ಲಿನ ಆಗುಹೋಗುಗಳ ಮಾಹಿತಿ ಒದಗಿಸಲು ಪಿಆರ್‌ಓ ಬೇಕೇಬೇಕು. ಇಂತಹವರನ್ನೇ ಪಿಆರ್‌ಓ ಅಧಿಕಾರಿಯಾಗಿ ಮಾಡಬೇಕು ಎಂಬುದಕ್ಕಿಂತ ಜನರೊಂದಿಗೆ ಹಾಗೂ ಸಂಸ್ಥೆಯಲ್ಲಿನ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಂವಹನ ಹೊಂದಿದವರು ಪಿಆರ್ರ್‍‌ಓ ಆಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಪ್ರಸ್ತುತ ನಮ್ಮ ಮಂಡಳಿಯಲ್ಲಿ ಯಾವುದೇ ಪಿ.ಆರ್.ಓಗಳು ಕಾರ್ಯನಿರ್ವಹಿಸುತ್ತಿಲ್ಲ. ಸದ್ಯಕ್ಕೆ ಆ ಹುದ್ದೆಯೇ ಇಲ್ಲ. ಮುಂದಿನ ವರ್ಷದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆಯನ್ನು ತರಲಾಗುವುದು” ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಶಂಕರ ಪೂಜಾರಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!