Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜದಲ್ಲಿ ಸ್ವಾತಂತ್ರ್ಯದ ಜೊತೆ ಸಹಬಾಳ್ವೆ ಅಗತ್ಯ : ನ್ಯಾ.ರಮಾ ಬಿ.ಜಿ

ಮನುಷ್ಯನಿಗೆ ಸ್ವಾತಂತ್ರ್ಯದ ಜೊತೆ ಸಹಬಾಳ್ವೆಯ ಗುಣ ಇರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ ಅವರು ತಿಳಿಸಿದರು.

ಮಂಡ್ಯ ಜಿ.ಪಂ‌.ನ ಕಾವೇರಿ ಸಭಾಂಗಣದಲ್ಲಿ ಇಂದು ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮೊದಲು ಕುಟುಂಬದ ಸದಸ್ಯರು, ಮನೆಯ ಮಗಳು ಹಾಗೂ ಸೊಸೆಯನ್ನು ಪ್ರೀತಿಯಿಂದ ಕಾಣಬೇಕು. ವಿದ್ಯೆ ಮತ್ತು ಜ್ಞಾನವನ್ನು ನೀಡಬೇಕು. ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದರು.

ನಮ್ಮ ಜ್ಞಾನಾರ್ಜನೆಯ ಸ್ವರೂಪ ಬದಲಾಗಬೇಕು, ವಿದ್ಯೆ ಎಂದರೆ ಬರಿ ಪದವಿಗಳಲ್ಲ, ನಾವು ಯಾವ ರೀತಿ ಸಮಾಜದಲ್ಲಿ ಬಾಳಬೇಕು ಎಂಬುದನ್ನು ಕಲಿಯುವುದು ಹಾಗೂ ಸಮಾಜದಲ್ಲಿ ಎಲ್ಲಾ ವರ್ಗವದರೊಂದಿಗೆ ಶಾಂತಿಯುತ ಬಾಳುವುದೇ ವಿದ್ಯೆಯಾಗಬೇಕು ಎಂದು ಹೇಳಿದರು.

ಬದುಕಿನಲ್ಲಿ ವಿದ್ಯೆ ಜೊತೆ ಜ್ಞಾನದ ಅವಶ್ಯಕತೆಯು ಬಹಳ ಮುಖ್ಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಹೊಸ ಹೊಸ ಕಾನೂನುಗಳು ದುರ್ಬಲರ ರಕ್ಷಣೆಗೆ ಬರುತ್ತಿವೆ, ಅದರ ಜೊತೆಯಲ್ಲಿಯೆ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಹೊಸ ಸ್ವರೂಪಗಳು ಬರುತ್ತಿವೆ ಎಂದು ಅಭಿಪ್ರಾಯಪಟ್ಟರು.

ದೌರ್ಜನ್ಯ ಎಂಬುದು ಎಲ್ಲಾ ಕಾಲದಲ್ಲಿಯು ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಕಾನೂನಿನ ಪಾತ್ರ ಪ್ರಮುಖವಾಗಿದೆ. ಕಾನೂನನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮ ರಕ್ಷಣೆ ಸಿಗುತ್ತದೆ. ಕಾನೂನನ್ನು ಯಾರದೋ ಮೇಲಿನ ದ್ವೇಷಕ್ಕೆ ಬಳಸಿಕೊಂಡರೆ ಕಾನೂನಿನ ಬಲ ಕುಸಿಯುತ್ತದೆ ಎಂದರು.

ದೌರ್ಜನ್ಯವನ್ನು ತಡೆಯಲು ಕುಟುಂಬದ ಸದಸ್ಯರ ಪಾತ್ರ ಬಹಳ ಮುಖ್ಯವಾಗಿ ಇರುವುದು. ಕುಟುಂಬದ ಸದಸ್ಯರನ್ನ ಪ್ರೀತಿ-ವಿಶ್ವಾಸ, ಒಬ್ಬರ ಮೇಲೆ ಒಬ್ಬರಿಗೆ ಪರಸ್ಪರ ಗೌರವವಿದ್ದರೆ ನ್ಯಾಯಾಲಯದ ಅವಶ್ಯಕತೆ ಕಡಿಮೆ ಆಗುತ್ತದೆ. ಗಂಡ ಹೆಂಡತಿ ಸಂಬಂಧದಲ್ಲಿ ನಾನು ಮೇಲು ನೀನು ಮೇಲು ಎಂಬ ಮನೋಭಾವ ಇರದೆ ಪರಸ್ಪರ ಗೌರವ, ಸಹಭಾಗಿತ್ವ ಇದ್ದರೆ ಸಂಬಂಧ ಹಾಳಗುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ರವರು ಮಾತನಾಡಿ ಸಮಾಜದಲ್ಲಿ ಹೆಚ್ಚು ವಿದ್ಯಾವಂತರಾದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಸಂಗತಿ ಹಾಗೂ ಅನಾಗರಿಕತೆ ಹೆಚ್ಚುತ್ತಿರುವುದು ಚಿಂತಿಸುವ ವಿಷಯವಾಗಿದೆ ಎಂದರು.

ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಬೀಳುವುದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಎರಡು ಕುಟುಂಬದಲ್ಲಿಯೂ ಸಂಬಂಧಗಳು ಹಾಳಾಗುವುದು. ಇಂತಹ ಸಮಸ್ಯೆಗಳಿದ್ದರೆ ಗಂಡ ಹೆಂಡತಿ ಇಬ್ಬರಿಗೂ ಕೌನ್ಸಿಲ್ ಮಾಡುವುದು ಮುಖ್ಯವಾಗುವುದು. ಕೌನ್ಸಿಲ್ ಮೂಲಕ ಅವರನ್ನು ಒಂದು ಗೂಡಿಸುವುದು ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಎಂ. ನಳಿನ ಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!