Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ನೌಕರರು ಕಾರ್ಯ ವೈಖರಿಯಿಂದ ಸಾರ್ವಜನಿಕರ ಮನಗೆಲ್ಲಿ: ಸಿ.ಎಸ್.ಪುಟ್ಟರಾಜು

ಸಾರ್ವಜನಿಕರ ಕೆಲಸಗಳನ್ನು ಉತ್ಸುಕತೆಯಿಂದ ನಿರ್ವಹಿಸಿ ಜನಪರ ಕಾರ್ಯವೈಖರಿ ಮೂಲಕ, ಸಾರ್ವಜನಿಕರ ಮನಗೆಲ್ಲಿ ಸ್ವಸ್ಥ ಸಮಾಜವನ್ನು ಕಟ್ಟಲು ಕಟಿಬದ್ಧರಾಗಿ ಎಂದು ಮೇಲುಕೋಟೆ ವಿಧಾನಸಭಾ ಶಾಸಕ ಸಿ.ಎಸ್.ಪುಟ್ಟರಾಜು ರವರು ತಿಳಿಸಿದರು.

ಮಂಡ್ಯನಗರದ ಪಿಇಟಿ ಸಮ್ಮುಚ್ಛಯದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ, ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗಷ್ಟೆ ಸೀಮಿತವಾಗದೆ ವರ್ಷ ಪೂರ್ತಿ ಆಚರಣೆ ಮಾಡಬೇಕು. ಕ್ರೀಡೆಯಿಂದ ಕೆಲಸ ಒಂದು ಗುರಿ ಮುಟ್ಟುವ ಉತ್ಸಾಹ ಹೆಚ್ಚುತ್ತದೆ. ಈ ಉತ್ಸಾಹ ಮನೋಭಾವವನ್ನು ನೌಕರರು ತಮ್ಮ ಕೆಲಸದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ನೌಕರರಿಗಾಗಿ ಕ್ರೀಡಾಕೂಟಗಳು ನಡೆಯುತ್ತಿರಬೇಕು. ಒತ್ತಡದಲ್ಲಿ ಕೆಲಸ ಮಾಡುವವರಿಗೆ ಕ್ರೀಡೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ. ಮಾನಸಿಕ ಒತ್ತಡ ಕಡಿಮೆಗೊಳಿಸುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾದ ಹೆಚ್.ಎಸ್.ಮಂಜು ರವರು ಮಾತನಾಡಿ, ದೇಹ ಮತ್ತು ಮನಸ್ಸು ಇವೆರಡರ ಸಮನ್ವಯತೆ ಸಾಧಿಸಿದಾಗ ಬದುಕು ಸಾರ್ಥಕವಾಗುತ್ತದೆ. ದೈಹಿಕ ಕಸರತ್ತು ಮತ್ತು ಸಕಾರಾತ್ಮಕ ಚಿಂತನೆಗಳ ನಮ್ಮೆಲ್ಲರ ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎಂದು ಹೇಳಿದರು.

ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾದರೆ, ಮನಸ್ಸನ್ನು ಮುದ ಗೊಳಿಸಲು ಸಾಂಸ್ಕೃತಿಕ ಚಟುವಟಿಕೆ ಸಹಕರಿಸುತ್ತದೆ. ಅವಸರದ ಜೀವನ ಶೈಲಿ ಕಾರ್ಯಭಾರದ ಒತ್ತಡ ದೈಹಿಕ ಶಕ್ತಿಯನ್ನು ಕುಗ್ಗಿಸುತ್ತದೆ. ದೈಹಿಕ, ಮಾನಸಿಕ ಚಟುವಟಿಕೆ ಇಲ್ಲದಿದ್ದರೆ, ಕೆಲಸದಲ್ಲಿ ನಿರಾಸಕ್ತಿ, ನಿರುತ್ಸಾಹ ಮಡುಗಟ್ಟುತ್ತದೆ.  ಲವಲವಿಕೆಯ ಕ್ರಿಯಾಶೀಲತೆಗಾಗಿ ಸರ್ಕಾರಿ ನೌಕರರಿಗೆ ಕ್ರೀಡಾಕೂಟಗಳು, ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯ ಎಂದು ತಿಳಿಸಿದರು.

ಶಿಕ್ಷಕರು ಪಾಠ ಪ್ರವಚನದಲ್ಲಿ ತೊಡಗಿರುತ್ತಾರೆ, ಕಚೇರಿಯ ಕೆಲಸ ಮಾಡುವವರು ಕಡತಗಳ ಮಧ್ಯದಲ್ಲಿ ಇರುತ್ತಾರೆ . ಇಂತಹ ಒತ್ತಡದಿಂದ ಹೊರ ಬಂದು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಂಭುಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಜಿ, ಕ.ರಾ.ಸ.ನೌ.ಸಂಘದ ಖಚಾಂಚಿ ಕೆ.ಗೋಪಾಲ್, ಪ್ರಧಾನ ಕಾರ್ಯದರ್ಶಿ ಆರ್.ದೇವರಾಜು, ಗೌರವಾಧ್ಯಕ್ಷ ಸಿ.ಜೆ.ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯ ಬಿ.ಎನ್.ನಾಗೇಶ್, ಡಿ.ಹೆಚ್.ಒ.ಡಾ.ಧನಂಜಯ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!