Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುವುದು ಕೇಂದ್ರ ಸರ್ಕಾರಕ್ಕೆ ಇಷ್ಟವಿಲ್ಲವೇ?

✍️ ಎನ್.ನಾಗೇಶ್ 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಅನೇಕ ಪ್ರವಾಸಿ ತಾಣಗಳು ವಿಶ್ವದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾಗಿರುವ ಕೃಷ್ಣರಾಜ ಸಾಗರ ಜಲಾಶಯ, ಬೃಂದಾವನಕ್ಕೆ ದಿನನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ರಂಗನತಿಟ್ಟು ಪಕ್ಷಿಧಾಮಕ್ಕೆ ದೇಶ,ವಿದೇಶಗಳಿಂದ ಪಕ್ಷಿಗಳು ಸಂತಾನೋತ್ಪತ್ತಿಗೆ ಆಗಮಿಸುತ್ತವೆ.

ವಿಶ್ವದಾದ್ಯಂತ ಶ್ರೀರಂಗಪಟ್ಟಣ ಕ್ಷೇತ್ರವನ್ನು ಪರಿಚಯಿಸಿದೆ‌‌. ಟಿಪ್ಪು ಸುಲ್ತಾನ್ ಆಳ್ವಿಕೆ, ಆತನ ಪರಾಕ್ರಮ, ಯುದ್ಧ ತಂತ್ರಜ್ಞಾನದ ಬಗ್ಗೆ ಇತಿಹಾಸಕಾರರು ಬ್ರಿಟಿಷರು ಬರೆದಿರುವ ಚರಿತ್ರೆ ವಿಶ್ವದ ಪ್ರವಾಸಿಗರನ್ನು ಇಲ್ಲಿಗೆ ದೇಶ- ವಿದೇಶಗಳ ಪ್ರವಾಸಿಗರನ್ನು ಭೇಟಿ ನೀಡುವಂತೆ ಮಾಡಿದೆ ಟಿಪ್ಪು ಬೇಸಿಗೆ ಅರಮನೆ, ಗುಂಬಜ್, ಟಿಪ್ಪು ಮಡಿದ ಸ್ಥಳ ನೋಡಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.

ಶ್ರೀರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ ದೇವಿ ದೇವಾಲಯ, ಕರಿಘಟ್ಟ ವೆಂಕಟೇಶ್ವರ ಸ್ವಾಮಿ ದೇವಾಲಯ, ಮೊದಲಾದ ದೇವಸ್ಥಾನಗಳು ಇಲ್ಲಿವೆ. ಸಂಗಮ, ಬಲಮುರಿಯಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಇಲ್ಲಿ ಹರಿಯುವ ಕಾವೇರಿಯ ಪ್ರಕೃತಿಯ ಸೊಬಗು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ.

ಜನಪ್ರತಿನಿಧಿಗಳು ವಿಫಲ

ಇಂತಹ ಪ್ರವಾಸಿ ತಾಣಗಳನ್ನು ಹೊಂದಿರುವ ಶ್ರೀರಂಗಪಟ್ಟಣ ತಾಲೂಕು ಕೇಂದ್ರದಲ್ಲಿ ಸುಮಾರು 15ಕ್ಕೂ ಹೆಚ್ಚು ರೈಲುಗಳ ನಿಲುಗಡೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ.

ಒಂದು ವೇಳೆ ಈ ಎಲ್ಲಾ ರೈಲುಗಳು ಶ್ರೀರಂಗಪಟ್ಟಣ ನಿಲ್ದಾಣದಲ್ಲಿ 2-3 ಮೂರು ನಿಮಿಷ ನಿಲ್ಲಿಸಿದರೂ ಸಾಕು, ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇನ್ನಷ್ಟು ಪ್ರವಾಸೋದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯಬಹುದು. ಸರ್ಕಾರಕ್ಕೆ ಆದಾಯವು ಕೂಡ ಹರಿದು ಬರುತ್ತದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಈ ಬಗ್ಗೆ ಮಾತನಾಡಬೇಕಾದ ಸಂಸದೆ ಸುಮಲತಾ ಅಂಬರೀಶ್ ಕೇಂದ್ರದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕಬಹುದಿತ್ತು. ಅದನ್ನವರು ಮಾಡಿಲ್ಲ‌‌. ಶಾಸಕ ರವೀಂದ್ರ ಶ್ರೀಕಂಠಯ್ಯ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸುತ್ತಿಲ್ಲ. ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಹಲವು ಬಾರಿ ಶ್ರೀರಂಗಪಟ್ಟಣ ಜನತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಿಜೆಪಿಯ ಕೇಂದ್ರದ ರೈಲ್ವೆ ಸಚಿವರ ಮೂಲಕ ರೈಲುಗಳನ್ನು ನಿಲುಗಡೆ ಮಾಡಿಸುವ ಸಣ್ಣ ಪ್ರಯತ್ನವನ್ನು ಮಾಡಿಲ್ಲ. ಈ ವಿಚಾರದಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಜನರು ದೂರುತ್ತಾರೆ.

ಸುಮಾರು 15ಕ್ಕೂ ಹೆಚ್ಚು ಪ್ರಮುಖ ರೈಲುಗಳು ಶ್ರೀರಂಗಪಟ್ಟಣದಲ್ಲಿ ನಿಲ್ಲದೆ ಇರುವುದರಿಂದ ಜನರಿಗೂ ಸಂಕಷ್ಟ. ಪ್ರವಾಸೋದ್ಯಮ ನಂಬಿ ಹೋಟೆಲ್, ವಿವಿಧ ಬಗೆಯ ಸಣ್ಣಪುಟ್ಟ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಜೀವನ ಕಟ್ಟಿಕೊಂಡಿರುವವರ ಜೀವನಕ್ಕೂ ಸಂಕಷ್ಟ ಎದುರಾಗಿದೆ.

ನಿಲ್ಲದ ರೈಲುಗಳು

ಚಾಮುಂಡಿ, ಕಾವೇರಿ, ಬಸವ, ರಾಜ್ಯರಾಣಿ, ಹಂಪಿ, ಚೆನ್ನೈ ವಿಶ್ವಮಾನವ, ವಾರಣಾಸಿ, ಮಾಲ್ಗುಡಿ , ಒಡೆಯರ್, ಕೂಚುವೇಲಿ, ಕಾಚಿಗುಡ ಗೋಲ್ ಗುಂಬಜ್, ತಿರುಪತಿ, ಮೈಸೂರು- ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿದಂತೆ ಸುಮಾರು ಹದಿನೈದು ರೈಲುಗಳು ಶ್ರೀರಂಗಪಟ್ಟಣದಲ್ಲಿ ನಿಲುಗಡೆ ಮಾಡದ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

ಹೀಗಾಗಿ ಪ್ರವಾಸಿಗರು ಪ್ಯಾಸೆಂಜರ್ ರೈಲುಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ದೇಶ- ವಿದೇಶಗಳ ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಮೈಸೂರು ಬೆಂಗಳೂರು ಮಧ್ಯೆ ಇರುವ ವಿಶ್ವದ ಪ್ರವಾಸೋದ್ಯಮ ತಾಣ ಶ್ರೀರಂಗಪಟ್ಟಣದಲ್ಲಿ ನಿಲುಗಡೆಗೆ ಅವಕಾಶ ಮಾಡಿದರೆ ಪ್ರವಾಸೋದ್ಯಮ ಮತ್ತಷ್ಟು ವಿಸ್ತರಿಸುವುದಲ್ಲದೆ, ಸರ್ಕಾರಕ್ಕೂ ಆದಾಯ ಬರುತ್ತದೆ ಎನ್ನುವುದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯ.

ನಿಲ್ಲುವ ರೈಲುಗಳು

ಪ್ರತಿ ದಿನ ಮೆಮು ಎಂಬ ರೈಲು ನಾಲ್ಕು ಬಾರಿ ಓಡಾಟ ನಡೆಸುತ್ತದೆ. ಅದನ್ನು ಬಿಟ್ಟರೆ ತುಮಕೂರು- ಚಾಮರಾಜನಗರ ಪ್ಯಾಸೆಂಜರ್ ರೈಲು ಗಾಡಿ ದಿನಕ್ಕೆ ಎರಡು ಬಾರಿ ಸಂಚರಿಸುತ್ತದೆ. ಹಾಗೆಯೇ ಮೈಸೂರು ಎಕ್ಸ್ಪ್ರೆಸ್ ಸ್ಪೆಷಲ್ ಮಧ್ಯ ರಾತ್ರಿ 12:15ಕ್ಕೆ ಬೆಂಗಳೂರು ಬಿಟ್ಟು 3:30ಕ್ಕೆ ಶ್ರೀರಂಗಪಟ್ಟಣಕ್ಕೆ ಬರುತ್ತದೆ. ಈ ರೈಲುಗಳನ್ನು ಬಿಟ್ಟರೆ ಉಳಿದ ಯಾವ ರೈಲುಗಳು ಶ್ರೀರಂಗಪಟ್ಟಣಕ್ಕೆ ಬರದ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ.

ಇನ್ನಾದರೂ ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿ ಬೆಂಗಳೂರು ಮೂಲಕ ಮೈಸೂರಿಗೆ ತೆರಳುವ ಎಲ್ಲಾ ರೈಲುಗಳನ್ನು ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಒತ್ತಡ ತರಬೇಕಿದೆ. ಇಲ್ಲದಿದ್ದರೆ ಪ್ರವಾಸೋದ್ಯಮಕ್ಕೆ ಭಾರಿ ದೊಡ್ಡ ಹೊಡೆತ ಬೀಳಲಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!