ಜೂನ್ 13ರಂದು ನಡೆಯಲಿರುವ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಮೇ. 25ರಂದು ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ತಿಳಿಸಿದರು. ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಮಧು ಜಿ.ಮಾದೇಗೌಡ ಇಂದು ಅವರ ತಂದೆ ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ಸಮಾಧಿಗೆ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ನಂತರ ಮನೆದೇವರು ಶ್ರೀ ಕಾರ್ಕಳ್ಳಿ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಭಿಷೇಕ ಮತ್ತು ಪೂಜೆಯನ್ನು ನೆರೆವೇರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಕಹಳ್ಳಿ ದೇವರ ಸನ್ನಿಧಿಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಮಾತಾನಾಡಿದ ಮಧು.ಜಿ.ಮಾದೇಗೌಡ, ಮೇ 25ರಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಮಂಡ್ಯದಲ್ಲಿ ನಾಳೆ ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಲಿದ್ದಾರೆ.
ಈ ಸಭೆಗೆ ನಮ್ಮ ಪಕ್ಷದ ಜಿಲ್ಲೆಯ ಮುಖಂಡರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ವರಿಷ್ಟರ ತೀರ್ಮಾನದಂತೆ ಮೇ, 25ರಂದು ಮೈಸೂರಿನಲ್ಲಿ ಅಪಾರ ಅಭಿಮಾನಿಗಳೊಂದಿಗೆ ಪದವೀಧರರ ಜೊತೆಗೂಡಿ ನಾಮಪತ್ರ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ನಿ ಬಿಂದು,ಮಕ್ಕಳಾದ ಆಶಯ್, ಅನೂಪ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಗುರುಚರಣ್,ಎ.ಎಸ್.ರಾಜೀವ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್,ಟ್ರಸ್ಟಿಗಳಾದ ಬಿ.ಎಂ.ನಂಜೇಗೌಡ,ಗುರುದೇವರಹಳ್ಳಿ ಸಿದ್ದೇಗೌಡ,ಕಾರ್ಕಹಳ್ಳಿ ಬಸವೇಗೌಡ,ಪದವೀಧರರು. ಅಭಿಮಾನಿಗಳು. ಹಿತೈಷಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.