Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುವೆಂಪು ವೈಚಾರಿಕತೆ-ವೈಜ್ಞಾನಿಕ ದೃಷ್ಟಿಕೋನ ಎಲ್ಲರಿಗೂ ಇರಲಿ : ಸಿಪಿಕೆ

ಕುವೆಂಪು ಕನ್ನಡದ ಕುಲಪತಿಯೂ ಹೌದು, ಕುಲ ಪರ್ವತವೂ ಹೌದು. ಕನ್ನಡ ಸಾಹಿತ್ಯವನ್ನು ವಿಶ್ವ ವೇದಿಕೆಯ ಮಟ್ಟಕ್ಕೆ ಎತ್ತರಿಸಿದ ವಿಶ್ವಪ್ರಭೆಯ ಪ್ರತಿಭೆ ಕುವೆಂಪು ಅವರದ್ದು. ಆದ್ದರಿಂದ ಕನ್ನಡ ಬೇರೆ ಅಲ್ಲ, ಕುವೆಂಪು ಬೇರೆ ಅಲ್ಲ ಎಂಬ ಭಾವ ಎಲ್ಲರಲ್ಲೂ ಬೆಳೆದಿದೆ. ಅವರ ವೈಚಾರಿಕತೆಯ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಎಲ್ಲರೂ ಅನುಸರಿಸಬೇಕು ಎಂದು ಖ್ಯಾತ ಸಾಹಿತಿ  ಹಾಗೂ ವಿಮರ್ಶಕ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು.

ಮಂಡ್ಯನಗರದ ಹರ್ಡೀಕರ್ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ವಿಶ್ವಮಾನವ ಕುವೆಂಪು ಹಬ್ಬ’ ಹಾಗೂ ‘ಕುವೆಂಪು ಕನ್ನಡ ಕಾಯಕ ಪ್ರಶಸ್ತಿ’ ಮತ್ತು ಗೌರವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯುಗಧರ್ಮವನ್ನು ಗರ್ಭೀಕರಿಸಿಕೊಂಡಿದ್ದ ಕುವೆಂಪು ತಮ್ಮ ಸಾಹಿತ್ಯದಲ್ಲಿ ಶ್ರೀಸಾಮಾನ್ಯತೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಅವರು ರಚಿಸಿರುವ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸರ್ವೋದಯ ತತ್ವ ಹಾಸುಹೊಕ್ಕಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವುದರ ಮೂಲಕ ಸಮನ್ವಯ ಮತ್ತು ಪೂರ್ಣದೃಷ್ಟಿ ಹರಿಕಾರರಾಗಿದ್ದಾರೆ, ಯುಗ ಪ್ರವರ್ವತಕ ಕವಿಯೆನಿಸಿರುವ ಕುವೆಂಪು ಸಾಹಿತ್ಯ ಕೃಷಿ ಮಾಡತೊಡಗಿದ ಮೇಲೆ ಕನ್ನಡದಲ್ಲಿ ವಸಂತೋದಯವಾಯಿತು. ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭ್ಯುದಯವಾಯಿತು. ಜನಸಾಮಾನ್ಯರ, ದೀನ ದಲಿತರ ಉದ್ಧಾರಕ್ಕಾಗಿ ಸಾಹಿತ್ಯದ ಮೂಲಕ ಶ್ರಮಿಸಿದರು ಎಂದರು.

ಕನ್ನಡ ಪ್ರಾಧ್ಯಾಪಕಿ ಡಾ. ಷಹಸೀನಾ ಬೇಗಂ ಮಾತನಾಡಿ, ಸಂವೇದನಾಶೀಲ ಸಾಂಸ್ಕೃತಿಕ ನಾಯಕರಾಗಿದ್ದ ಕುವೆಂಪು ಅವರು, ಗಾಂಧೀಜಿಯವರ ಸರ್ವೋದಯ ಪ್ರಭಾವಕ್ಕೆ ಒಳಗಾಗಿದ್ದರು. ಆದ್ದರಿಂದಲೇ ವೈದಿಕತೆ, ವಸಾಹತುಶಾಹಿ, ರಾಜಪ್ರಭುತ್ವ, ಜಾತೀಯತೆ, ಮತಾಂಧತೆ, ಮೌಢ್ಯತೆಯ ವಿರುದ್ಧ ನಿರಂತರ ಹೋರಾಟ ಮಾಡಿದರು ಎಂದು ಗುಣಗಾನ ಮಾಡಿದರು.

ಇಂದಿನ ಯುವಜನರು ಒಂದು ಕಡೆ ಮೊಬೈಲಿನ ಮೋಹಕ್ಕೆ ಬಲಿಯಾಗಿದ್ದಾರೆ. ಆ ಮೂಲಕ ಓದುವ ಹವ್ಯಾಸದಿಂದ ದೂರವಾಗಿದ್ದಾರೆ. ಮತ್ತೊಂದು ಕಡೆ ರಾಜಕಾರಣಿಗಳ ಅಸ್ತ್ರವಾಗಿ, ಅವರು ಬಿತ್ತುವ ಮತಾಂಧತೆಗೆ ಬಲಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಯುವಜನರು ಕುವೆಂಪು ಸಾಹಿತ್ಯ ಓದುವ ಮೂಲಕ ವಿಶ್ವಮಾನವತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ವಿಜ್ಞಾನ ಲೇಖಕ ಸಾತನೂರು ದೇವರಾಜು ಅವರಿಗೆ ‘ಕುವೆಂಪು ಗೌರವ ಪುರಸ್ಕಾರ’, ಸಾಹಿತಿಗಳಾದ ಹಾಸನದ ಕೊಟ್ರೇಶ್ ಎಸ್. ಉಪ್ಪಾರ್, ಬೆಂಗಳೂರಿನ ವಿ.ಟಿ. ರಾಮಕೃಷ್ಣಯ್ಯ (ರಾಕಿ), ಜಿಲ್ಲೆಯ ಪ್ರತಿಭಾನ್ವಿತ ಕವಯತ್ರಿಯರಾದ ಡಾ. ಪಿ. ಸುಮಾರಾಣಿ ಶಂಭು, ಭವಾನಿ ಲೋಕೇಶ್, ಕವಿಗಳಾದ ಗಣಂಗೂರು ನಂಜೇಗೌಡ, ಡಾ. ನೀ.ಗೂ. ರಮೇಶ್, ಹೊ.ನ. ನೀಲಕಂಠೇಗೌಡ,   ಬಲ್ಲೇನಹಳ್ಳಿ ಮಂಜುನಾಥ್, ದೊ.ಚಿ. ಗೌಡ ಅವರಿಗೆ ‘ಕುವೆಂಪು ಕನ್ನಡ ಕಾಯಕ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ರವಿ, ಜಿಲ್ಲಾಧ್ಯಕ್ಷ ಎಂ.ಸಿ. ನವೀನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾ ನಾಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಶಿವಕುಮಾರ್ ಆರಾಧ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!