Thursday, September 19, 2024

ಪ್ರಾಯೋಗಿಕ ಆವೃತ್ತಿ

ಪುರಸಭೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ : ಸಚಿವ ನಾರಾಯಣಗೌಡ ವಿರುದ್ದ ಆಕ್ರೋಶ

ಕೆ.ಆರ್.ಪೇಟೆ ಪುರಸಭೆಯಲ್ಲಿ ಅಭಿವೃದ್ಧಿ ಕೆಲಸ-ಕಾರ್ಯಗಳ ಅನುಷ್ಠಾನದಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿರುವ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ನಾರಾಯಣಗೌಡ ಅವರು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡುಗಳಿಗೆ 30 ರಿಂದ 40 ಲಕ್ಷ ರೂ. ಅನುದಾನವನ್ನು ಹಂಚಿಕೆ ಮಾಡಿದ್ದು, ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿರುವ ವಾರ್ಡುಗಳಿಗೆ ಕೇವಲ 3 ಲಕ್ಷ ದಿಂದ 6 ಲಕ್ಷ ರೂ.ವರೆಗೆ ಮಾತ್ರ ಅನುದಾನ ನೀಡಿ ತಾರತಮ್ಯ ನೀತಿಯನ್ನು ಅನುಸರಿಸುವ ಜೊತೆಗೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಪುರಸಭೆಯ ವಿರೋಧ ಪಕ್ಷದ ನಾಯಕ ಕೆ.ಸಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪುರಸಭಾ ಶಹರಿ ರೋಜ್‌ಗಾರ್ ಯೋಜನಾ ಕಚೇರಿಯಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಬಿ.ಮಹೇಶ್‌ಕುಮಾರ್, ಕೆ.ಆರ್.ರವೀಂದ್ರಬಾಬು, ಹಾಗೂ ಹೆಚ್.ಎನ್.ಪ್ರವೀಣ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಚಿವರ ಪಕ್ಷಪಾತ ಧೋರಣೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ ಸಚಿವರಾದ ನಾರಾಯಣಗೌಡರ ಕೊಡುಗೆಯು ಸಂಪೂರ್ಣವಾಗಿ ಶೂನ್ಯವಾಗಿದೆ. ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡುವುದಾಗಿ ಪಟ್ಟಣ ಹಾಗೂ ತಾಲೂಕಿನ ಜನತೆಗೆ ಆಶ್ವಾಸನೆ ನೀಡಿ ಗೆದ್ದು, ಸಂಪುಟ ದರ್ಜೆ ಮಂತ್ರಿಯೂ ಆದ ನಾರಾಯಣಗೌಡರು ಸುಮಾರು ಒಂದೂವರೆ ವರ್ಷಗಳ ಕಾಲ ಪೌರಾಡಳಿತ ಖಾತೆ ತಮ್ಮ ಬಳಿಯೇ ಇದ್ದರೂ ಪುರಸಭೆಯ ಅಭಿವೃದ್ಧಿಗೆ ಒಂದೇ ಒಂದು ರೂ ವಿಶೇಷ ಅನುಧಾನ ನೀಡದೇ ಕಾಲಕಳೆದಿದ್ದಾರೆ. ಅಲ್ಲದೆ ಕಳೆದ ಉಪ ಚುನಾವಣೆಯಲ್ಲಿ ತಮಗೆ ಅತಿ ಹೆಚ್ಚು ಮತ ನೀಡಿದ ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಮತದಾರರಿಗೆ ಮೋಸ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಸಚಿವರು ಕೊಟ್ಟ ಮಾತನ್ನು ತಪ್ಪಿದ್ದಾರೆ. ಜೊತೆಗೆ ಈಗ ಸೇಡಿನ ರಾಜಕಾರಣವನ್ನು ಸಹ ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ ವಿಶೇಷವಾದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ತಮ್ಮನ್ನು ಗೆಲ್ಲಿಸಿದರೆ ಕೆ.ಆರ್.ಪೇಟೆ ಪಟ್ಟಣವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಮಾದರಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದರು. ನಾರಾಯಣಗೌಡರು ಸಚಿವರಾಗಿ ಆಯ್ಕೆಯಾಗಿ 3 ವರ್ಷಗಳು ಕಳೆದು ಇನ್ನೇನು ಚುನಾವಣೆಗಳು ಸಮೀಪಿಸುವ ಹೊಸ್ತಿಲಿನಲ್ಲಿ ನಾವಿದ್ದೇವೆ. ಕೆ.ಆರ್.ಪೇಟೆಯನ್ನು ಶಿಕಾರಿಪುರ ಮಾಡುವ ಬದಲಿಗೆ ಭಿಕಾರಿಪುರ ಮಾಡಿದ್ದಾರೆ ಎಂದು ಕಿಡಿಕಾರಿದರು.

ವಿವಿಧ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ. ಇದರಿಂದ ರೋಗ-ರುಜಿನಗಳು ಹರಡುವ ತಾಣವಾಗಿ ಬದಲಾಗುತ್ತಿವೆ. ಪಟ್ಟಣದ ಜನತೆ ಸಚಿವರಿಗೆ ಪುರಸಭೆಯ ಅಧ್ಯಕ್ಷೆ- ಉಪಾಧ್ಯಕ್ಷೆ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಾವು ಜನರಿಂದ ಬಯ್ಯಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಪುರಸಭೆ ಸದಸ್ಯರು, ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ, ಯೋಜನೆ, ಸಾಂಖ್ಯಿಕ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿ ಕೆ.ಆರ್.ಪೇಟೆ ಪಟ್ಟಣಕ್ಕೆ ನಿಮ್ಮ ಕೊಡುಗೆಯೇನು ಸಚಿವ ನಾರಾಯಣಗೌಡ ಅವರನ್ನು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಸದಸ್ಯರಾದ ಡಿ.ಪ್ರೇಮಕುಮಾರ್,  ಸೌಭಾಗ್ಯ ಉಮೇಶ್, ಹಾಫೀ ಜುಲ್ಲಾಷರೀಫ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!