Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ಕಾರ್ಯಕ್ರಮಗಳಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ : ನಾರಾಯಣಗೌಡ

ರಾಜ್ಯ ಹಾಗೂ ರಾಷ್ಟ್ರದಲ್ಲಿ ದಕ್ಷ ಆಡಳಿತ ನೀಡುತ್ತಾ,ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನರ ಮನಸ್ಸನ್ನು ಗೆದ್ದಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರೇಷ್ಮೆ ಮತ್ತು ಕ್ರೀಡಾ ಸಚಿವ  ನಾರಾಯಣ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆ ಹಾಗೂ ಅಂಬೇಡ್ಕರ್ ನಗರದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸರ್ಕಾರದ ಕಾರ್ಯಕ್ರಮಗಳ ಕುರಿತ ಕರಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನತೆಯ ಆಶೀರ್ವಾದ ಪಡೆದುಕೊಂಡು ಮತ್ತೊಮ್ಮೆ ತಾಲೂಕಿನ ಶಾಸಕನಾಗಿ ಗೆಲುವು ಸಾಧಿಸಿ ಜನರ ಸೇವಕನಂತೆ ಕೆಲಸ ಮಾಡುತ್ತೇನೆ. ತಾಲೂಕಿನ ಇತಿಹಾಸದಲ್ಲಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಬಿಡುಗಡೆ ಮಾಡಿಸಿ ತಂದಿರುವ 1800 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಬರಪೀಡಿತ ಶೀಳನೆರೆ ಹಾಗೂ ಬೂಕನಕೆರೆ ಹೋಬಳಿಯ ಕೆರೆ-ಕಟ್ಟೆಗಳನ್ನು ಕಟ್ಟಹಳ್ಳಿ ಬಳಿಯ ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸಲು 265 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿ ತಂದು ಸಮರೋಪಾದಿಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮಳೆಯಾಶ್ರಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸಲು ಗೂಡೆಹೊಸಳ್ಳಿಯ ಬಳಿ ಹೇಮಾವತಿ ನದಿಯ ನೀರನ್ನು ಬಳಸಿಕೊಂಡು ಏತನೀರಾವರಿಯ ಮೂಲಕ ಪಂಪ್ ಮಾಡಿ, ತುಂಬಿಸಲು 218 ಕೋಟಿ ವಿಶೇಷ ಅನುದಾನ ತಂದು ಕಾಮಗಾರಿ ನಡೆಸಲಾಗುತ್ತಿದೆ. ಕೃಷ್ಣರಾಜಸಾಗರ ಜಲಾಶಯದಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಜಲಜೀವನ ಮಿಷನ್ ಯೋಜನೆಯಡಿಯಲ್ಲಿ 475 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮನೆ ಮನೆಗೆ ಗಂಗೆಯನ್ನು ತಲುಪಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ತಾಲೂಕಿನ ಎಲ್ಲಾ ಹೋಬಳಿಗಳಲ್ಲಿಯೂ ಸುಸಜ್ಜಿತವಾದ ಮೊರಾರ್ಜಿದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಎಪಿಜೆ ಅಬ್ದುಲ್‌ಕಲಾಂ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿಶಾಲೆಯನ್ನು ಆರಂಬಿಸಲಾಗಿದೆ. ಕೆ.ಆರ್.ಪೇಟೆ ತಾಲೂಕು ಶಿಕ್ಷಣ ಕಾಶಿಯಾಗಿ ಸಮಗ್ರವಾಗಿ ಅಭಿವೃದ್ಧಿಯಾಗುತ್ತಿದೆ. ತಾಲೂಕಿಗೆ ವೈದ್ಯಕೀಯ ಕಾಲೇಜು, ಕಾನೂನು ಮತ್ತು ನರ್ಸಿಂಗ್ ಕಾಲೇಜನ್ನು ತರುವ ನನ್ನ ಪ್ರಯತ್ನವು ನಿರಂತರವಾಗಿ ಸಾಗಿದ್ದು, ಆ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ಅರವಿಂದ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಪುರಸಭೆ ಅಧ್ಯಕ್ಷೆ ಮಹಾದೇವಿ, ಪುರಸಭಾ ಸದಸ್ಯರಾದ ಮಹೇಶ್, ನಟರಾಜು, ಕೆ.ಆರ್.ನೀಲಕಂಠ, ಪ್ರಮೋದ್, ಕೆ.ವಿನೋದ್, ಕೆ.ಎಸ್.ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!