Friday, September 20, 2024

ಪ್ರಾಯೋಗಿಕ ಆವೃತ್ತಿ

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಜೆಎಲ್‌ಎಂ ಮಹಾಧಿವೇಶನ : ಮಹದೇವಪ್ಪ

ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಸಂವಿಧಾನಾತ್ಮಕ ಮಾನ್ಯತೆ ಸಿಗಬೇಕೆಂಬ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಮಾ.4 ಮತ್ತು 5ರಂದು ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮಹಾಧಿವೇಶನ ನಡೆಯಲಿದೆ ಎಂದು ಮಹಾಸಭಾದ  ಮೈಸೂರು ಜಿಲ್ಲಾಧ್ಯಕ್ಷ ಮಹದೇವಪ್ಪ ಹೇಳಿದರು.

ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಮಂಡ್ಯಜಿಲ್ಲಾ ಘಟಕ ಸ್ಥಾಪನೆಯ ಪರ‍್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಸಭಾದ ಪ್ರಥಮ ಮಹಾಧಿವೇಶನಕ್ಕೆ ಮಂಡ್ಯ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಆಗಮಿಸಬೇಕೆಂದು ಮನವಿ ಮಾಡಿದ ಅವರು, ಹೋರಾಟದ ಭೂಮಿ ಮಂಡ್ಯ ಜಿಲ್ಲೆಯಲ್ಲಿ ಸದೃಢವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ 14 ಮಂದಿಯನ್ನೊಳಗೊಂಡ ಸಂಚಾಲಕ ಸಮಿತಿಯನ್ನು ರಚಿಸಲಾಗಿದೆ ಎಂದರು.

ಮಹಾಸಭಾ ಬೆಂಗಳೂರು ಘಟಕದ ಉಪಾಧ್ಯಕ್ಷ ಅಶೋಕ್ ಲೋಣಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬಸವ ಕಲ್ಯಾಣದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ. 1871ರಲ್ಲಿ ಮೈಸೂರು ಜನಗಣತಿಯಲ್ಲಿ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಸಿಖ್, ಬುದ್ದ, ಪರ‍್ಸಿ, ಮುಸ್ಲಿಂ, ಜೈನಕ್ಕೂ ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಲಾಗಿದ್ದು ಲಿಂಗಾಯತರಿಗೂ ಪ್ರತ್ಯೇಕ ಧರ್ಮಕ್ಕೂ ಮಾನ್ಯತೆ ದೊರಕಬೇಕೆಂದರು.

ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಬೇವೂರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾಗಮೋಹನ್ ದಾಸ್ ವರದಿಯೂ ಸಹ ಲಿಂಗಾಯತ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಲು ಶಿಫಾರಸ್ಸು ಮಾಡಿದೆ. ಅಲ್ಪಸಂಖ್ಯಾತ ಆಯೋಗ ಪರಿಶೀಲನೆ ಮಾಡಿದ ಬಳಿಕ ಸರ್ಕಾರ ಪ್ರಸ್ತಾವನೆ ಕಳಿಸಿದ್ದು, ಈಗ ಕೇಂದ್ರಕ್ಕೆ ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇವೆ. ಅಲ್ಲಿಯೂ ನ್ಯಾಯ ಸಿಗಲಿಲ್ಲ ಎಂದರೆ ಅಂದ್ರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ವೀರಶೈವರು ಸೇರಿದಂತೆ ಲಿಂಗಾಯತ ಧರ್ಮದಲ್ಲಿ ಗುರುತಿಸಿಕೊಂಡಿರುವ ನೂರಾರು ಒಳಪಂಗಡಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆಯಿಂದ ಸಾಕಷ್ಟು ಅನುಕೂಲಗಳಾಗಲಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತರಲ್ಲಿ ಜಾಗೃತಿ ಮೂಡಿಸಲು ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಮಹಾಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಎಲ್ಲರೂ ಈ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಸಮಿತಿ ರಚನೆ 

ಜಿಲ್ಲೆಯ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಎಂ.ಶಿವಕುಮಾರ್, ಕುಮಾರಸ್ವಾಮಿ ಅವರನ್ನು ಜಿಲ್ಲಾ ಸಮಿತಿ ಸದಸ್ಯರಾಗಿ, ಎಂ.ಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್, ಡಿ.ಪಿ.ಪ್ರಫುಲ್ಲಚಂದ್ರ, ಕೆ.ಎಂ.ಶಿವಕುಮಾರ್, ಜಿ.ಮಹಾಂತಪ್ಪ, ಲಾಳನಕೆರೆ ನಂದೀಶ್, ಆನವಾಳು ವಿಶ್ವನಾಥ್, ಟಿ.ಸಿ.ಮಂಜುನಾಥ್, ಬೆಳ್ಳಪ್ಪ, ಮಿಲ್ಟ್ರಿಸುರೇಶ್, ಶಿವಾನಂದ್ ಅವರನ್ನೊಳಗೊಂಡ ಸಮಿತಿಯನ್ನು ಮಂಡ್ಯ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ತರಲು ರಚನೆ ಮಾಡಲಾಯಿತು. ಸಮಾಜದ ಮುಖಂಡರಾದ ರುದ್ರಸ್ವಾಮಿ, ಮಹೇಶ್ ಲೋಣಿ, ರಾಜಶೇಖರ್, ಶಿವಪ್ರಸಾದ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!