ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜ.26 ರಿಂದ 30 ರವರೆಗೆ ಜಿಲ್ಲಾ ತೋಟಗಾರಿಕೆ ಕಛೇರಿ ಆವರಣದಲ್ಲಿ 2022-23ರ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ರವೆರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶವಿರುತ್ತದೆ. ಪ್ರತಿ ದಿನ ಸಂಜೆ 6 ರಿಂದ ರಾತ್ರಿ 8.30 ರವರೆಗೆ ಸಾಂಸ್ಕಂತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಶೇಷ ಆಕರ್ಷಣೆಗಳು
ರೈತರಿಂದ- ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಜಿಲ್ಲೆಯ ರೈತ ಉತ್ಪಾದಕ ಕಂಪನಿಗಳ ವಿವಿಧ ಉತ್ಪನ್ನಗಳ ರಿಟೇಲ್ ಬ್ರಾಂಡ್ಗಳ ಪ್ರದರ್ಶನ ಮತ್ತು ಮಾರಾಟ, ವೈವಿಧ್ಯಮಯ ಅಲಂಕಾರಿಕ ಹೂ ಕುಂಡಗಳ ಜೋಡಣೆ, ವಿವಿಧ ಆಕರ್ಷಕ ಬಗೆಯ ಬೋನ್ಸಾಯ್ ಜೋಡಣೆ ಮತ್ತು ಪ್ರದರ್ಶನ, ವಿವಿಧ ಅಲಂಕಾರಿಕ ತರಕಾರಿ ಕೆತ್ತನೆ ಪ್ರದರ್ಶನ, ಪೌಷ್ಠಿಕ ಕೈತೋಟದ ಮಾದರಿ ಪ್ರದರ್ಶನ, ಜಿಲ್ಲೆಯ ವಿವಿಧ ಪ್ರಗತಿ ಪರ ರೈತರ ತೋಟಗಾರಿಕೆ ಬೆಳೆಗಳ ವೈವಿಧ್ಯತೆ ಮಾದರಿಗಳ ಪ್ರದರ್ಶನ, ಅಕ್ವೇರಿಯಂ ಮತ್ತು ವಿವಿಧ ಮೀನಿನ ತಳಿಗಳ ಪ್ರದರ್ಶನ ನಡೆಯಲಿದೆ.

ಜನವರಿ 26 ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಉದ್ಘಾಟಿಸುವರು. ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ರೇಷ್ಮೆ ಸಚಿವ ಡಾ.ಕೆ.ಸಿ ನಾರಾಯಣಗೌಡ, ತೋಟಗಾರಿಕೆ ಸಚಿವರಾದ ಮುನಿರತ್ನ ಭಾಗವಹಿಸುವರು. ಶಾಸಕ ಎಂ.ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಜಿಲ್ಲೆಯ ಶಾಸಕರು ಭಾಗವಹಿಸುವರು.




