Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್-ಬಿಜೆಪಿ ಪಕ್ಷಗಳಿಗೆ ಸೋಲಿನ ಭಯ ಆವರಿಸಿದೆ : ಸಿದ್ದರಾಮಯ್ಯ


  • ಕಾಂಗ್ರೆಸ್ ನ ಜನಪರ ಯೋಜನೆಗಳಿಂದ ಬಿಜೆಪಿ-ಜೆಡಿಎಸ್ ಪಕ್ಷಗಳು ಕಂಗೆಟ್ಟಿವೆ

  • ಉಚಿತ ವಿದ್ಯುತ್, ಗೃಹಿಣಿಯರಿಗೆ ₹2,000, ಪ್ರತಿ ವ್ಯಕ್ತಿ 10 ಕೆ.ಜಿ ಅಕ್ಕಿ ನೀಡುವುದು ಶತಸಿದ್ಧ

ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ತಿಂಗಳು ಮಹಿಳೆಯರಿಗೆ 2000 ರೂ ಸಹಾಯಧನ ನೀಡುವ ಹಾಗೂ ಪ್ರತಿ ವ್ಯಕ್ತಿಗೆ 10 ಅಕ್ಕಿ ನೀಡುವ ಭರವಸೆಗಳನ್ನು ನೀಡಿದ ನಂತರ ಬಿಜೆಪಿ, ಜೆಡಿಸ್ ಪಕ್ಷಗಳಿಗೆ ಸೋಲಿನ ಭಯ ಆವರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಈಡೇರಿಸುತ್ತೇನೆ

ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 5 ಪ್ರಮುಖ ಭರವಸೆಗಳನ್ನು ಅಧಿಕಾರಕ್ಕೆ ಬಂದ ದಿನವೇ ಈಡೇರಿಸಿತ್ತು, ಅನಂತರ 158 ಭರವಸೆಗಳನ್ನು ಈಡೇರಿಸಿತು, ಅದರಂತೆ ಈ ಬಾರಿ ನಾವು ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ವರ್ಷಕ್ಕೆ 24,000 ಹಣ ಹಾಗೂ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ಶತಸಿದ್ಧ, ಈ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ನಮ್ಮದು ನುಡಿದಂತೆ ನಡೆವ ಸರ್ಕಾರ 

ಕಾಂಗ್ರೆಸ್ ಪಕ್ಷ ಯಾವಾಗಲೂ ನುಡಿದಂತೆ ನಡೆಯುತ್ತದೆ. ಬಸವೇಶ್ವರ ಹೇಳಿದಂತೆ ನುಡಿದಂತೆ ನಡೆಯುವ ಕೆಲಸ ಮಾಡಿದೆ‌. ಹಿಂದೆ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದೆ. ಈಗ ಘೋಷಣೆ ಮಾಡಿರುವ ಭರವಸೆಗಳನ್ನು ಈಡೇರಿಸುತ್ತದೆ ಎಂಬುದನ್ನು ಸಹಿಸದ ಬಿಜೆಪಿ, ಜೆಡಿಎಸ್ ಪಕ್ಷಗಳು ಇದಕ್ಕೆಲ್ಲ ಹಣ ಎಲ್ಲಿಂದ ತರುತ್ತಾರೆ ಎಂದು ಟೀಕೆಸುತ್ತಿವೆ. ಆದರೆ ನಮ್ಮ ಪಕ್ಷ ಬಸವಣ್ಣ ಅವರು ಹೇಳಿದಂತೆ ಕಾಯಕವೇ ಕೈಲಾಸ ಎಂದು, ಕಾಯಕ ಮತ್ತು ದಾಸೋಹದಲ್ಲಿ ನಂಬಿಕೆ ಇಟ್ಟಿದ್ದು, ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ. ಜನತೆ ನಮ್ಮ ಪಕ್ಷದ ಮೇಲೆ ನಂಬಿಕೆ, ವಿಶ್ವಾಸವಿಟ್ಟು ವಚನಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು,
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು‌.

nudikarnataka.com

ಅಧಿಕಾರ ಶತಸಿದ್ಧ

ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಕಳೆದ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ಗೆ ನೀಡಲಿಲ್ಲ. ಆದರೆ ಈ ಬಾರಿ 7 ಸ್ಥಾನದಲ್ಲಿ ಕನಿಷ್ಠ 5 ರಿಂದ 6 ಸ್ಥಾನವನ್ನು ಗೆಲ್ಲಿಸಿ ಕೊಡುವ ಕೆಲಸ ಮಾಡಿ, ನಾವು ನಿಮ್ಮ ಜೊತೆ, ರೈತರ ಜೊತೆ ನಿಂತು ಎಷ್ಟೇ ಕಷ್ಟವಾದರೂ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.

ಜೆಡಿಎಸ್ 20-22 ಗೆದ್ದರೆ ಅದೇ ಜಾಸ್ತಿ

ಕುಮಾರಸ್ವಾಮಿ ಅವರು ನಮಗೆ 123 ಸ್ಥಾನ ಗೆಲ್ಲಿಸಿಕೊಡಿ ಎಂದು ಕೇಳುತ್ತಿದ್ದಾರೆ. ನಾವೆಲ್ಲ ಇದ್ದಾಗಲೇ 59 ಸ್ಥಾನ ಬಂದಿತ್ತು. ಈಗ 20 ರಿಂದ 22 ಗೆದ್ದರೆ ಅದೇ ಜಾಸ್ತಿ. ಇಂಥವರಿಗೆ ಅಧಿಕಾರ ಕೊಡಲು ಆಗುವುದಿಲ್ಲ, ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆದರೆ ಆ ಪುಣ್ಯಾತ್ಮನಿಗೆ ಎಂಎಲ್ಎಗಳನ್ನು ಸರಿಯಾಗಿ ನೋಡಿಕೊಳ್ಳಲು ಬರಲಿಲ್ಲ ಎಂದು ಕಾಲೆಳೆದರು.

nudikarnataka.com

ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರು ನಮ್ಮ ಸರ್ಕಾರ ಬೀಳಿಸಿದ್ದು ಎಂದು ಹೇಳುತ್ತಾರೆ. ಆಯ್ತು, ನಮ್ಮ ಎಂಎಲ್ಎಗಳು 14 ಜನ ಹೋದರು. ಅವರ ಎಂಎಲ್ಎಗಳು ಮೂರು ಜನ ಹೋದ್ರಲ್ಲ, ಅವರನ್ನು ಕಳಿಸಿದವರು ಯಾರು? ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಉಳಿದುಕೊಂಡು ಅಧಿಕಾರ ಮಾಡಲು ಆಗುತ್ತದೆಯೇ, ಎಂಎಲ್ಎ, ಅಧಿಕಾರಿಗಳ ಜೊತೆ ಸಭೆ ಮಾಡಬೇಕು. ಒಳ್ಳೆ ಆಡಳಿತ ನೀಡಬೇಕಾಗಿತ್ತು, ಆದರೆ ಕುಮಾರಸ್ವಾಮಿ ಹೋಟೆಲ್ ನಲ್ಲಿ ಉಳಿದುಕೊಂಡು ತಪ್ಪು ಮಾಡಿದ್ರು ಎಂದರು.

ನಾವು 84 ಮಂದಿ ಗೆದ್ದರೂ, ಕೂಡ 37 ಜನ ಗೆದ್ದ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಬೆಂಬಲ ನೀಡಿದೆವು, ಆದರೆ ಕುಮಾರಸ್ವಾಮಿ ಒಳ್ಳೆಯ ಆಡಳಿತ ನೀಡಲಿಲ್ಲ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಕುಟುಕಿದರು.

ಬಿಜೆಪಿ ಕಿತ್ತೊಗೆಯರಿ

ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ.ಧರ್ಮಗಳ ನಡುವೆ ಎತ್ತಿ ಕಟ್ಟುತ್ತಾ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷ ಜನರ ಮನಸ್ಸನ್ನು ಒಡೆದಿದೆ. ಇದಕ್ಕೆ ರಾಹುಲ್ ಗಾಂಧಿಯವರು ಭಾರತದ ಎಲ್ಲಾ ಮನಸ್ಸುಗಳನ್ನು ಒಂದುಗೂಡಿಸಲು ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರಿಗೆ ಮಾಡುತ್ತಿದ್ದಾರೆ. ದೇಶದಲ್ಲಿ ಶಾಂತಿ ಏರ್ಪಟ್ಟು, ಎಲ್ಲಾ ಭಾರತೀಯರು ಅಣ್ಣ-ತಮ್ಮಂದಿರಂತೆ ಬದುಕಬೇಕು. ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

nudikarnataka.com

ಬಿಜೆಪಿ ಅಂದ್ರೆ ಲಂಚ

ಬಿಜೆಪಿಯೆಂದರೆ ಬರಿ ಲಂಚ. ಹಣ ಹೊಡೆಯುವುದೇ ಇವರ ಕೆಲಸ. ಹಾಲಿಗೆ, ಮೊಸರಿಗೆ, ಮಂಡಕ್ಕಿ, ಪೆನ್ಸಿಲ್ ಎಲ್ಲದಕ್ಕೂ 5 ರಿಂದ 18% ಜಿ ಎಸ್ ಟಿ ಅನ್ನು ಹೇರಿ ಸಾಮಾನ್ಯ ಜನರು ಬದುಕಲು ಆಗದಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್‌, ಗ್ಯಾಸ್, ಸಿಮೆಂಟ್ ಎಲ್ಲಾ ಬೆಲೆಗಳನ್ನು ಜಾಸ್ತಿ ಮಾಡಿ ಜನರ ರಕ್ತವನ್ನು ಜಿಗಣೆಯಂತೆ ಹೀರುತ್ತಿವೆ. ಬಿಜೆಪಿಯಲ್ಲಿರುವುದು ಆಲಿಬಾಬಾ ಮತ್ತು ಚಾಲೀಸ್ ಚೋರ್, ಇಂತಹ ಭ್ರಷ್ಟ, ಜನ, ರೈತ, ಬಡವರ ವಿರೋಧಿ ಸರ್ಕಾರವನ್ನು ಕಿತ್ತು ಹಾಕಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಉಪಾಧ್ಯಕ್ಷರಾದ ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಮಾಜಿ ಸಂಸದ ಧ್ರುವನಾರಾಯಣ್, ಸಂಸದ ಡಿ.ಕೆ. ಸುರೇಶ್ ಮತ್ತಿತರ ನಾಯಕರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಪುಷ್ಪ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಾಜಿ ಶಾಸಕರಾದ ಕೆ. ಬಿ. ಚಂದ್ರಶೇಖರ್, ರಮೇಶ್ ಬಾಬು ಬಂಡಿ ಸಿದ್ದೇಗೌಡ, ಬಿ.ಪ್ರಕಾಶ್, ಮುಖಂಡರಾದ ವಿಜಯ್ ರಾಮೇಗೌಡ, ದಡದಪುರ ಶಿವಣ್ಣ, ಗಣಿಗ ರವಿಕುಮಾರ್ ಡಾ. ಕೃಷ್ಣ, ಅಮರಾವತಿ ಚಂದ್ರಶೇಖರ್, ಯು.ಸಿ. ಶಿವಕುಮಾರ್, ಸತೀಶ್ ಸಿದ್ದಾರೂಢ, ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!