Friday, May 3, 2024

ಪ್ರಾಯೋಗಿಕ ಆವೃತ್ತಿ

ಐಟಿ, ಇಡಿ, ಸಿಬಿಐ ಬಿಟ್ಟು ನಿಯಂತ್ರಣ ಮಾಡುತ್ತೇವೆ ಎನ್ನುವುದು ಭ್ರಮೆ : ಡಿ.ಕೆ. ಶಿವಕುಮಾರ್

ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ, ರೈತರ ಪರ ಪ್ರತಿಭಟನೆ ಮಾಡಿದಾಗ ಬಿಜೆಪಿ ಸರ್ಕಾರ ಕೇಸು ಹಾಕಿದೆ. ಕೆಪಿಸಿಸಿ ಅಧ್ಯಕ್ಷನಾದ ನಂತರ ನನ್ನ ಮೇಲೆ 25 ಕೇಸು ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಬಿಟ್ಟು ನನ್ನ ನಿಯಂತ್ರಣ ಮಾಡುವುದು ಭ್ರಮೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದ ಸರ್ಕಾರಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆದರೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕುಮಾರಣ್ಣ ಒಂದು ದಿನ ಮಾತಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ತುಂಬಿದೆ

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಿಜೆಪಿ ಪಕ್ಷದ ದುರಾಚಾರ, ಭ್ರಷ್ಟಾಚಾರ, ದುರಾಡಳಿತದ ಕೊಳೆ ತೊಳೆದು ಹಾಕಲು ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು. ಇದು ಕಾಂಗ್ರೆಸ್ ಯಾತ್ರೆಯಲ್ಲ. ನಾವು ಅಧಿಕಾರಕ್ಕೆ ಬರಲು ಈ ಯಾತ್ರೆ ಅಲ್ಲ‌.ರಾಜ್ಯಕ್ಕೆ ಉತ್ತಮ ಸರ್ಕಾರ ಕೊಡಲು,ಜನರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದೇವೆ ಎಂದರು.

nudikarnataka.com

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಲಿಲ್ಲ. ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ, ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ, ಉಪ ಕುಲಪತಿ ಮಾಡಲು ಐದು ಕೋಟಿ ಲಂಚ ನೀಡಬೇಕು ಎಂದು ಅವರ ಪಕ್ಷದ ಸಂಸದ ಪ್ರತಾಪಸಿಂಹ ಹೇಳಿದ್ದಾರೆ .ಪ್ರತಿ ಹುದ್ದೆಗೂ ಈ ಸರ್ಕಾರದಲ್ಲಿ ರೇಟ್ ಫಿಕ್ಸ್ ಆಗಿದೆ. ಹೋಟೆಲ್ ಬೋರ್ಡ್ ರೀತಿ ಲಂಚದ ಬೋರ್ಡ್ ಹಾಕಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅದಕ್ಕೆ ನೀವು ಅವಕಾಶ ಮಾಡಿಕೊಡಬೇಕು. ನಾವೆಲ್ಲರೂ ನಿಮ್ಮ ಜತೆಯಲ್ಲಿ ನಿಂತು ಬದುಕು ಕಟ್ಟಲು ಶ್ರಮಿಸುತ್ತೇವೆ. ನಿಮ್ಮ ಭಾವನೆ ಜತೆ ರಾಜಕೀಯ ಮಾಡುವುದಿಲ್ಲ. ನಮಗೆ ನಿಮ್ಮ ಹೊಟ್ಟೆಪಾಡು, ಯುವಕರಿಗೆ ಉದ್ಯೋಗ ನೀಡುವುದು ಮುಖ್ಯ. ರಾಜ್ಯಕ್ಕೆ ಬಂದಿರುವ ಭ್ರಷ್ಟಾಚಾರದ ಕಳಂಕ ತೆಗೆದುಹಾಕಬೇಕು. ಇದೇ ನಮ್ಮ ಗುರಿ ಎಂದು ತಿಳಿಸಿದರು.

ಮಂಡ್ಯದ ಅಭಿವೃದ್ಧಿ ಮುಖ್ಯ

ನನಗೂ ಮಂಡ್ಯಕ್ಕೂ 40 ವರ್ಷಗಳ ಸಂಬಂಧ, ಮಂಡ್ಯ ಬೇರೆಯಲ್ಲ, ರಾಮನಗರ, ಕನಕಪುರ ಬೇರೆಯಲ್ಲ. ಎಲ್ಲಾ ಒಂದೇ ಎಂದು ಭಾವಿಸಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಎಸ್.ಎಂ.ಕೃಷ್ಣ, ಮಾದೇಗೌಡರ ಕಾಲದಿಂದ ಈ ಜಿಲ್ಲೆಯ ಪ್ರತಿ ತಾಲೂಕಿನೊಂದಿಗೆ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಾ ಬಂದಿದ್ದೇನೆ. ಜನರು ತಮ್ಮ ಹಕ್ಕಿಗಾಗಿ ಹೋರಾಡುವ ಗಂಡು ಭೂಮಿ ಮಂಡ್ಯ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀವೆಲ್ಲರೂ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೀರಿ. ಮಂಡ್ಯದ ಜನರ ಬದುಕು ಮಾದರಿಯಾದುದು ಎಂದರು.

nudikarnataka.com

ಜೆಡಿಎಸ್ ಪಕ್ಷಕ್ಕೆ ಅನ್ಯಾಯ ಮಾಡಿಲ್ಲ

ಕೋಮುವಾದಿ ಪಕ್ಷಕ್ಕೆ ಅಧಿಕಾರ ತಪ್ಪಿಸಲು ನಾವು ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಯಾವುದೇ ಷರತ್ತಿಲ್ಲದೆ ಅವರ ಬೆಂಬಲಕ್ಕೆ ನಿಂತೆವು. ಅವರ ಮಗ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ನಿಂತಾಗ ಕೆಲಸ ಮಾಡಿದೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ.ಕಾಂಗ್ರೆಸ್ ಪಕ್ಷ ಅವರಿಗೆ ಅನ್ಯಾಯ ಮಾಡಿಲ್ಲ ಎಂದರು.

ಕಾಂಗ್ರೆಸ್ ನಿಂದ ಅಭಿವೃದ್ಧಿ

7ಕ್ಕೆ 7 ಸೀಟು ಮಂಡ್ಯದಲ್ಲಿ ಗೆದ್ದರೂ ಜೆಡಿಎಸ್ ಅಭಿವೃದ್ಧಿ ಮಾಡಲಿಲ್ಲ. ಒಂದು ವೇಳೆ ಜೆಡಿಎಸ್‌ಗೆ ಮತ ಕೊಟ್ಟರೆ ಬಿಜೆಪಿಯನ್ನು ಬೆಂಬಲಿಸಿದಂತೆ.ಹಾಗಾಗಿ ಜಿಲ್ಲೆಯ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಕಳೆದ ಚುನಾವಣೆಯಲ್ಲಿ 7ಕ್ಕೆ 7 ಸೋತ ಬಳಿಕ ಎರಡು ಎಂಎಲ್‌ಸಿ ಸ್ಥಾನ ಗೆದ್ದಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗ್ರಾ.ಪಂ ಸದಸ್ಯರು, ಪದವೀಧರರು ದಡ್ಡರಲ್ಲ. ಜೆಡಿಎಸ್, ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಕೋಲಾರ ಮನೋಹರ್, ಬೆಮೆಲ್ ಕಾಂತರಾಜು, ದತ್ತ ಇವರೆಲ್ಲ ಕಾಂಗ್ರೆಸ್ ಸೇರಿದ್ದಾರೆ. ರಾಜಕೀಯ ಪ್ರಜ್ಞೆ ಇಲ್ಲದೇ ಇವರ್‍ಯಾರು ಕಾಂಗ್ರೆಸ್‌ಗೆ ಬರ್ತಿಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಭವಿಷ್ಯವಿದೆ. ಬೆಂಗಳೂರು-ಮೈಸೂರು ಹೈವೇ ಕಾಂಗ್ರೆಸ್ ಕೊಡುಗೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ 14 ಸಾವಿರ ಕೋಟಿ ರೂ ಮಂಜೂರು ಮಾಡಲಾಗಿತ್ತು. ಬಿಜೆಪಿಯರು ಪೂಜೆ ಮಾಡುವುದಕ್ಕೆ ಹೊರಟಿದ್ದಾರೆ ಎಂದರು.

ನನಗೆ ಅಧಿಕಾರ ಕೊಡಿ

ನಾನು ಕೂಡ ಮಣ್ಣಿನ ಮಗ. ನಿಮ್ಮ ಪಾದಕ್ಕೆ ಕೈ ಮುಗಿದು ಕೇಳ್ತಾ ಇದ್ದೇನೆ. ನನಗೆ ಅಧಿಕಾರ ಕೊಡಿ. ಕಾವೇರಿ, ಹೇಮಾವತಿ, ಕಬಿನಿ, ಹಾರಂಗಿ ನದಿಗಳಿಂದ ಈ ಭಾಗದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!