Thursday, September 19, 2024

ಪ್ರಾಯೋಗಿಕ ಆವೃತ್ತಿ

ದುಡ್ಡು…

✍️ ದಿಗಂತ್ ಬಿಂಬೈಲ್


ಬೇಲಿ
ಪೇಟೆಯ ಬೀದಿಯಲಿ ದುಡ್ಡು ಎಸೆದಿದ್ದನೊಬ್ಬ!
ಅದೇನು ಹಪಹಪಿ, ಹತ್ತರ ನೋಟಿಗೆ?
ಇಲ್ಲಿ ಕೊಡಣ್ಣ! ಇಲ್ಲಿ ಕೊಡಣ್ಣ!
ದುಡ್ಡು ಎಂದೊಡನೆ
ಮಾರಿಕೊಂಡ ಮಾಧ್ಯಮಗಳೂ
ಓಡೋಡಿ ಬಂದು ನಿಂತವು!
ಕೂಗಿ ಹಬ್ಬಿಸಿಬಿಟ್ಟವು ಊರಿನ ತುಂಬ
ಎಲ್ಲಿ ಕೇಳಿದರು ದುಡ್ಡು! ದುಡ್ಡು! ದುಡ್ಡು!

ಅದೇ ದುಡ್ಡು ಕಾಡಲ್ಲಿ ಎಸಿದಿದ್ದರೆ!?
ಒಂದು ಪ್ರಾಣಿ, ಪಕ್ಷಿ, ಹುಳ, ಹುಪ್ಪಟೆ
ಅವನೆಡೆಗೆ ತಿರುಗಿಯೂ ನೋಡುತ್ತಿರಲಿಲ್ಲ..
ಎಲೆ ಚಿಗುರ ಮೇಯುತ್ತಿದ್ದ ಚಿಗರೆ
ಮೂಸಿ ನೋಡುತ್ತಿತ್ತು ಅಷ್ಟೆ!
ಮರದ ಮೇಲಿನ ಮಂಗ
ಹರಿದು ಬಿಸುಡುತ್ತಿತ್ತು ಅಷ್ಟೆ!
ಹಳ್ಳಕ್ಕೋ ಹೊಳೆಗೋ ನೋಟು ಬಿದ್ದಿದ್ದರೆ,
ತೊಳೆದು ಹೋಗುತ್ತಿತ್ತು ಅಷ್ಟೆ!
ಗಾಳಿಗೂ ಹಾರದೆ, ನೀರಿಗೂ ಬೀಳದೆ
ಅಲ್ಲೇ ಉಳಿದಿದ್ದರೆ
ವರಲೆ ಮಣ್ಣು ಮಾಡುತ್ತಿತ್ತು ಅಷ್ಟೆ!
ಸುದ್ದಿಯಾಗುವುದಲ್ಲ,
ಮಣ್ಣಮುದ್ದೆಯಾಗಿರುತ್ತಿತ್ತಷ್ಟೆ!

ಅಷ್ಟೆ ಎನ್ನುವ ಕನಿಷ್ಟವೊಂದು
ಐಶ್ವರ್ಯವಾಗಿ ತನ್ನತ್ತ ಸೆಳೆದುಕೊಂಡು,
ತನ್ನನ್ನ ಪೂಜಿಸಿಕೊಂಡು,
ತನಗಾಗಿ ಹೊಡೆದಾಡಿಕೊಂಡು,
ತನ್ನನ್ನೇ ಜೀವನದ ಮುಖ್ಯ ಗುರಿಯಾಗಿಸಿಕೊಳ್ಳುವಂತೆ,
ನಮ್ಮನ್ನೆಲ್ಲ ಗುಲಾಮರಾಗಿಸಿಕೊಂಡು
ತನ್ನ ಹಂಗಿನಾಳಾಗಿ ಮಾಡಿಕೊಂಡಿರುವ
ದುಡ್ಡು ಎನ್ನುವುದರಿಂದ ಪ್ರಕೃತಿಗೆ
ಕಿಲುಬಷ್ಟು ಪ್ರಯೋಜನವಿಲ್ಲ!

ಅದೇನಿದ್ದರು ಬುದ್ದಿವಂತ ಜೀವಿ ಎಂದೆಲ್ಲ
ಆರೋಪಿಸಿಕೊಂಡಿರುವ ಮನುಷ್ಯನ ಸರ್ವಸ್ವ,
ನೆಮ್ಮದಿ ಕಸಿಯಲು! ದ್ವೇಷ ಮಸೆಯಲು!
ವಿಷಾದವಿದೆ ನನಗೆ!
ಹಾಳು ದುಡ್ಡು,
ನಮಗಾಗಿ ಬದುಕುವ ಸಂಭ್ರಮವನ್ನೇ
ಕಸಿದು ಕೊಂಡಿತು!
ನಮಗೂ ಪ್ರಕೃತಿಗೂ ನಡುವೆ
ಬೇಲಿ ಕಟ್ಟಿತು!

ಕೇಡು ದುಡ್ಡಿಗೆ ವರಲೆ ಹಿಡಿದು
ಮಣ್ಣ ಮುದ್ದೆಯಾಗಿ ಸುದ್ದಿಯಾಗಲಿ!
ಜಗತ್ತು ನೆಮ್ಮದಿಯಲಿ ಬದುಕುತ್ತದೆ!
ಇಲ್ಲವೆಂದಲ್ಲಿ
ಮತ್ತದೇ ಓಟ,
ಯಾರೋ ಎಸೆಯುತ್ತಾರೆ
ಯಾರೋ ಹಿಡಿಯುತ್ತಾರೆ
ಯಾರೋ ಕೊಂಡುಕೊಳ್ಳುತ್ತಾರೆ
ಯಾರೋ ಮಾರಿಕೊಳ್ಳುತ್ತಾರೆ
ನಾಚಿಕೆ ಮಾನ ಮರ್ಯಾದೆ ನೆಮ್ಮದಿ
ಎಲ್ಲವೂ ಬಿಕರಿ!
ಹಲವು ಕೋನ, ಒಂದೇ ಸುದ್ದಿ
ದುಡ್ಡು. ದುಡ್ಡು. ದುಡ್ಡು!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!