Wednesday, November 18, 2026

ಪ್ರಾಯೋಗಿಕ ಆವೃತ್ತಿ

ಐತಿಹಾಸಿಕ ಸಿಡಿಹಬ್ಬ ಆಚರಣೆ: ಸಕಲ ಸಿದ್ಧತೆ

ಮಳವಳ್ಳಿಯ ಇತಿಹಾಸ ಪ್ರಸಿದ್ಧ ಸಿಡಿಹಬ್ಬಕ್ಕೆ ಪುರಸಭೆ ಹಾಗೂ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಇಂದು ಶುಕ್ರವಾರ ಸಿಡಿಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ನಿಂತು ಪಟ್ಟಲದಮ್ಮ ಹಾಗೂ ದಂಡಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಪಟ್ಟಣದ ಸುಲ್ತಾನ್ ರಸ್ತೆಯಲ್ಲಿರುವ ಪಟ್ಟಲದಮ್ಮ ದೇವಿಗೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ ಮತ್ತು ಹೋಮ-ಹವನ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮುಂಜಾನೆಯಿಂದ ಸರದಿ ಸಾಲಿನಲ್ಲಿ ನಿಂತ ಸಾವಿರಾರು ಭಕ್ತರು ಪಟ್ಟಲದಮ್ಮ ದೇವಾಲಯದ ಆವರಣದಲ್ಲಿರುವ ಚಿಕ್ಕಮ್ಮ ತಾಯಿ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.

ದೇವಿಗೆ ವಿಶೇಷ ಅಲಂಕಾರ ಪಟ್ಟಲದಮ್ಮ, ದೊಡ್ಡಮ್ಮತಾಯಿ, ಚಿಕ್ಕಮ್ಮ ತಾಯಿ ದೇವತೆಗಳಿಗೆ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಕ್ಕೆ ವಿವಿಧ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು.

ಸಿದ್ದಾರ್ಥ ನಗರದ ಯಜಮಾನರು ಸಿಡಿಗೆ ಬಳಸುವ ಹಗ್ಗಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಿಡಿ ಆಚರಣೆಗೆ ಹಗ್ಗವನ್ನು ನೀಡಿದರು. ಸಂಜೆ ವೇಳೆಗೆ ತಾಲೂಕಿನ ತಮ್ಮಡಹಳ್ಳಿ, ಅಂಚೆದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ತಮಟೆ ಹಾಗೂ ಮಂಗಳ ವಾದ್ಯಗಳೊಂದಿಗೆ ತಮ್ಮ ರಾಸುಗಳಿಗೆ ಅಲಂಕಾರ ಮಾಡಿಕೊಂಡು ಕೊಂಡಕ್ಕೆ ಸೌದೆ ತಂದರು. ಪಟ್ಟಣದ ಪೇಟೆ ಬೀದಿ, ಕೋಟೆ ಬೀದಿ ಸೇರಿದಂತೆ ಪ್ರಮುಖ ಬೀದಿಗಳ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಂದ ಮಹಿಳೆಯರು ಪೂಜೆ ಸಲ್ಲಿಸಿದರು. ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಮಧ್ಯರಾತ್ರಿ 12ಕ್ಕೆ ಚಾಲನ
ಸಿದ್ಧಾರ್ಥನಗರದವರು ಸಿಡಿ ಎಳೆಯಲು ಹಗ್ಗ ನೀಡುತ್ತಾರೆ. ಕೋಟೆಯವರು ಸಿಡಿ ಬಂಡಿಯನ್ನು ಎಳೆದು ಸಾಗುತ್ತಾರೆ.ಗಂಗಾಮತಸ್ಥ ಬೀದಿಯ ಪಟ್ಟಲದಮ್ಮ ದೇವಸ್ಥಾನದಲ್ಲಿ ಸಿಡಿರಣ್ಣನ ಗೊಂಬೆ ತಂದು ಸಿಡಿ ಮರಕ್ಕೆ ಕಟ್ಟಿ ಶುಕ್ರವಾರ ಮಧ್ಯರಾತ್ರಿ 12ರ ಸಮಯದಲ್ಲಿ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಸಿಡಿಯು ನಗರದ ವಿವಿಧ ಬೀದಿಗಳನ್ನು ಸುತ್ತಿದ ನಂತರ ಸುಲ್ತಾನ್ ರಸ್ತೆಯಲ್ಲಿರುವ ಪಟ್ಟಲದಮ್ಮ ದೇವಸ್ಥಾನಕ್ಕೆ ಬರುವ ಸಿಡಿಯು ಮೂರು ಸುತ್ತು ಸುತ್ತಿದ ನಂತರ ಅಂತಿಮಗೊಳ್ಳುತ್ತದೆ.

ಸಕಲ ಸಿದ್ಧತೆ
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಸಿಡಿಹಬ್ಬ ಈ ಬಾರಿ ವಿಜೃಂಭಣೆಯಿಂದ, ಅದ್ದೂರಿಯಾಗಿ ನಡೆಸಲು ಯಾವುದೇ ತೊಂದರೆ ಆಗದಂತೆ ಪುರಸಭೆ ಮತ್ತು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.‌‌ ಸಿಡಿ ಹಬ್ಬಕ್ಕಾಗಿ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಪಾರ್ಕಿಂಗ್ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಬಂದೋಬಸ್ತ್
ಇತಿಹಾಸ ಪ್ರಸಿದ್ದಿ ಪಡೆದಿರುವ ಸಿಡಿಹಬ್ಬಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊರ ಜಿಲ್ಲೆ ಮತ್ತು ತಾಲ್ಲೂಕಿನಿಂದ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ದೀಪಾಲಾಂಕಾರ
ಪಟ್ಟಣದ ಬಹುತೇಕ ಬೀದಿಗಳನ್ನು ಹಸಿರು ತಳಿರು ತೋರಣಗಳಿಂದ ಶೃಂಗಾರಿಸಲಾಗಿದೆ. ಅಲ್ಲದೆ ಜಗಮಗಿಸುವ ವಿದ್ಯುತ್ ದೀಪಗಳನ್ನು ಪಟ್ಟಣದ ಎಲ್ಲಾ ಕಡೆಗಳಲ್ಲೂ ಅಳವಡಿಸಿರುವುದು ಸಿಡಿ ಉತ್ಸವದ ಮೆರುಗನ್ನು ಹೆಚ್ಚಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ