Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಾರ್ಡರ್- ಗವಾಸ್ಕರ್ ಟೆಸ್ಟ್‌ ಸರಣಿ ಫೆ.9ರಿಂದ ಆರಂಭ

ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯು ಫೆಬ್ರವರಿ 9ರಿಂದ ಆರಂಭವಾಗಲಿದೆ. ಪ್ರತಿಷ್ಠಿತ ಟೂರ್ನಿಯನ್ನಾಡಲು ಆಸೀಸ್‌ ಪಡೆ ಈಗಾಗಲೇ ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದೆ.

ಇತ್ತ, ಹಾಲಿ ಚಾಂಪಿಯನ್‌ ಟೀಮ್‌ ಇಂಡಿಯಾದ ಪ್ರಮುಖ ಆಟಗಾರರು ಶುಕ್ರವಾರ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ ಹಳೆಯ ಸ್ಟೇಡಿಯಂನಲ್ಲಿ ಕಠಿಣ ತಾಲೀಮು ಆರಂಭಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ನವ ವಿವಾಹಿತ ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ಶುಭಮನ್‌ ಗಿಲ್‌ ಮುಂದಿನ ವಾರದಿಂದ ಆರಂಭವಾಗಲಿರುವ ಮಹತ್ವದ ಸರಣಿಗಾಗಿ ಅಭ್ಯಾಸ ಆರಂಭಿಸಿದ್ದಾರೆ.

ಟೀಮ್‌ ಇಂಡಿಯಾ ಸದಸ್ಯರು ಅಭ್ಯಾಸ ನಡೆಸುತ್ತಿರುವ ಚಿತ್ರಗಳನ್ನು ಬಿಸಿಸಿಐ, ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಮೊದಲ ಮತ್ತು ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯಲು ಭಾರತಕ್ಕೆ 4 ಪಂದ್ಯಗಳ ಸರಣಿ ಅತ್ಯಂತ ಮಹತ್ವಾದ್ದಾಗಿದೆ.

ಶ್ರೇಯಸ್ ಅಯ್ಯರ್ ಔಟ್‌!

‌ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಬ್ಯಾಟರ್ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ನಾಲ್ಕು ಪಂದ್ಯಗಳ ಪ್ರತಿಷ್ಠಿತ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಿಂದ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಆ ಬಳಿಕ ದೆಹಲಿ, ಧರ್ಮಶಾಲಾ ಹಾಗೂ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಮಾರ್ಚ್ 9ರಿಂದ 13ರವರೆಗೆ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಟೆಸ್ಟ್‌ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ, ಮುಂಬೈ, ವೈಜಾಗ್ ಹಾಗೂ ಚೆನ್ನೈನಲ್ಲಿ ನಡೆಯಲಿದೆ.

2020- 21ರ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 2- 1 ಅಂತರದಲ್ಲಿ ಟೀಮ್‌ ಇಂಡಿಯಾ ಚಾಂಪಿಯನ್‌ ಆಗಿತ್ತು. 2004- 05ರ ಬಳಿಕ ಆಸ್ಟ್ರೇಲಿಯ ತಂಡ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿಯಲ್ಲಿ ಗೆಲುವು ಕಂಡಿಲ್ಲ.

ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ವೇಳಾಪಟ್ಟಿ

ಮೊದಲ‌‌ ಟೆಸ್ಟ್; ಫೆಬ್ರವರಿ 9- 13, ಸ್ಥಳ; ನಾಗ್ಪುರ
ಎರಡನೇ ಟೆಸ್ಟ್; ಫೆಬ್ರವರಿ 17- 21, ಸ್ಥಳ; ದೆಹಲಿ
ಮೂರನೇ ಟೆಸ್ಟ್; ಮಾರ್ಚ್ 1- 5‌, ಸ್ಥಳ; ಧರ್ಮಶಾಲಾ
ನಾಲ್ಕನೇ ಟೆಸ್ಟ್;‌  ಮಾರ್ಚ್ 9- 13 ಮಾರ್ಚ್‌, ಸ್ಥಳ; ಅಹ್ಮದಾಬಾದ್

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ