ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ವರ್ತಕರು ವ್ಯಾಪಾರ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಸದಂತೆ ಮಳವಳ್ಳಿ ಪುರಸಭೆ ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್ ಮನವಿ ಮಾಡಿದರು.
ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಇಂದು ಪಟ್ಟಣದ ವಿವಿಧೆಡೆ ಅಂಗಡಿಗಳಲ್ಲಿ ಕಾರ್ಯಚರಣೆ ನಡೆಸಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಪ್ಲಾಸ್ಟಿಕ್ ಬ್ಯಾಗ್, ಲೋಟ ಮುಂತಾದ ವಸ್ತುಗಳ ತಯಾರಿಕೆ ಹಾಗೂ ಮಾರುಕಟ್ಟೆಗೆ ಬರುವುದನ್ನು ಮೊದಲು ತಡೆಯಿರಿ, ಮನೆಯಿಂದಲೇ ಬಟ್ಟೆ ಬ್ಯಾಗ್‌ಗಳನ್ನು ತರುವಂತೆ ಗ್ರಾಹಕರನ್ನು ಮನವೊಳಿಸಲು ವರ್ತಕರು ಮುಂದಾಗಬೇಕೆಂದು ಹೇಳಿದರು.
ಪುರಸಭೆ ವತಿಯಿಂದ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ಲಾಸ್ಟಿಕ್ ಬಳಸದಂತೆ ವರ್ತಕರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದರೂ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ವ್ಯಾಪಕವಾಗಿ ನಡೆಯುತ್ತಲೇ ಇದೆ. ಏಪ್ರಿಲ್ ಒಂದರಿಂದ ಸರ್ಕಾರ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದು ಎಲ್ಲರೂ ನಿಯಮವನ್ನು ಪಾಲಿಸಬೇಕು ಎಂದರು.
ಪಟ್ಟಣ ಪೇಟೆ ಬೀದಿ, ಮೈಸೂರು ರಸ್ತೆ, ಕೊಳ್ಳೇಗಾಲ ರಸ್ತೆ ಸೇರಿದಂತೆ ವಿವಿಧೆಡೆ ಅಂಗಡಿಗಳು ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಕವರ್, ಗ್ಲಾಸ್(ನೀರಿನ ಲೋಟ)ಸೇರಿದಂತೆ ಹಲವು ಪರಿಕರಗಳನ್ನು ವಶಕ್ಕೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.