Friday, November 20, 2026

ಪ್ರಾಯೋಗಿಕ ಆವೃತ್ತಿ

ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿಲ್ಲವೇ ? ಹಾಗಿದ್ದರೆ ಶೇ.50 ರಷ್ಟು ರಿಯಾಯಿತಿ ಪಡೆಯಿರಿ !

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಪಾವತಿ ಮಾಡದೆ, ತಿಂಗಳು ಗಟ್ಟಲೇ ಬಾಕಿ ಉಳಿಸಿಕೊಂಡಿದ್ದೀರಾ? ದಂಡದ ಮೊತ್ತ ಹೊರೆಯಾಗಿ ಕಟ್ಟುವುದು ಹೇಗೆ ? ಎಂದು ಚಿಂತೆಗೀಡಾಗಿದ್ದೀರಾ ? ಹಾಗಿದ್ದರೆ ನಿಮಗಾಗಿಯೇ ಸರ್ಕಾರ ಭರ್ಜರಿ ಆಫರ್ ನೀಡಿದ್ದು, ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ.

ಒಂದು ಬಾರಿಗೆ ಅನ್ವಯವಾಗುವಂತೆ ನೀಡಿರುವ ಶೇ.50ರ ರಿಯಾಯಿತಿ ಯೋಜನೆಯು ಫೆ.11 ರೊಳಗೆ, ಇ-ಚಲನ್ ಪ್ರಕರಣಗಳಿಗೆ ದಂಡ ಪಾವತಿಸುವವರಿಗೆ ಮಾತ್ರ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ಸಾವಿರಕ್ಕೂ ಹೆಚ್ಚು ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರು ಪಾವತಿ ಮಾಡಲೆಂದು ಈ ಕ್ರಮ ಕೈಗೊಳ್ಳಲಾಗಿದೆ.

ಯಾಕೆ ಈ ರಿಯಾಯಿತಿ?

ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ₹1,300ಗೂ ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಇರುವ ಬಗ್ಗೆ ಹಾಗೂ ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಜ.27ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ‍್ಯನಿರ್ವಾಹಕ ಅಧ್ಯಕ್ಷರಾಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.

ಅದರಂತೆ ಫೆ.11ರ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ ಹಿನ್ನೆಲೆಯಲ್ಲಿ, ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತ ಪಡೆದು ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.

ಯಾರೆಲ್ಲ ಪಾವತಿಸಲು ಯೋಗ್ಯರು?

ಪಾನಮತ್ತ ಚಾಲನೆ ಹೊರತುಪಡಿಸಿ ಉಳಿದೆಲ್ಲಾ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಈ ರಿಯಾಯಿತಿ ದೊರಕಲಿದೆ. ಈ ರಿಯಾಯಿತಿ ನೀಡಲು ಸರ್ಕಾರದ ಆದೇಶ ದೊರೆತಿದೆ. ಚಾಲಕರು ಮತ್ತು ವಾಹನ ಮಾಲೀಕರು ಈ ಅವಕಾಶ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕದ ಹೊರೆಯಿಂದ ಪಾರಾಗಬಹುದು ಎಂದು ಬೆಂಗಳೂರು ಪೊಲೀಸ್‌ ಸಂಚಾರ ವಿಭಾಗ ಮಾಹಿತಿ ನೀಡಿದೆ.

ದಂಡ ಪಾವತಿಸಿ ರಿಯಾಯಿತಿ ಪಡೆಯುವುದು ಹೇಗೆ?

ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 48 ಸಂಚಾರ ಪೊಲೀಸ್‌ ಠಾಣೆಗಳಿವೆ. ಪ್ರತ್ಯೇಕವಾಗಿ ಠಾಣೆಗೆ ತೆರಳಿ ದಂಡವನ್ನು ಪಾವತಿಸಬಹುದು. ಕೆಲಸದ ಒತ್ತಡದಲ್ಲಿ ಠಾಣೆಗೆ ತಲುಪಲಾಗಲಿಲ್ಲ ಎಂದರೆ ರಸ್ತೆಯಲ್ಲಿ ನಿಂತಿರುವ ಸಂಚಾರ ಪೊಲೀಸರ ಬಳಿಯೂ ನೇರವಾಗಿ ತಮ್ಮ ವಾಹನದ ನೋಂದಣಿ ಸಂಖ್ಯೆ ನೀಡಿ ಪರಿಶೀಲಿಸಿ ಪಾವತಿಸಬಹುದು. ಸ್ಥಳದಲ್ಲೇ ಹಣ ಪಾವತಿಸುವ ಜೊತೆಗೆ ಯುಪಿಐ, ಕಾರ್ಡ್‌ ಮೂಲಕ ದಂಡ ಹಣ ಪಾವತಿ ಮಾಡಬಹುದು.

ಜೊತೆಗೆ ಸಂಚಾರ ಪೊಲೀಸರ ಅಧಿಕೃತ ವೆಬ್‌ಸೈಟ್‌ https://bangaloretrafficpolice.gov.in. ಮೂಲಕ ನಿಮ್ಮ ಮೊಬೈಲ್‌ನಲ್ಲೇ ಪಾವತಿಸಬಹುದು.

nudikarnataka.com

ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ

ಈ ರಿಯಾಯಿತಿ ಯೋಜನೆ ಕೇವಲ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಮಾತ್ರವಲ್ಲದೆ, ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಹಾಗಾಗಿ ವಾಹನ ಸವಾರರು ತಮ್ಮ ತಮ್ಮ ವ್ಯಾಪ್ತಿಯ ಸಂಚಾರ ಪೊಲೀಸ್‌ ಠಾಣೆ, ಸಂಚಾರ ಪೊಲೀಸರು ಮತ್ತು ವಿವಿಧ ಆನ್‌ ಲೈನ್‌ ಪೇ ಮೂಲಕವೂ ದಂಡ ಪಾವತಿಗೆ ಅವಕಾಶವಿದೆ. ಕರ್ನಾಟಕ ಒನ್ ಅಥವಾ ಆಯಾ ಪೊಲೀಸ್ ಠಾಣೆಗಳಲ್ಲಿ ವಾಹನ ಸವಾರರು ದಂಡವನ್ನು ಪಾವತಿಸಬಹುದು.

ನಿಯಮ ಉಲ್ಲಂಘನೆ ತಿಳಿಯುವುದು ಹೇಗೆ?

ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ತಕ್ಷಣವೇ ನೋಟಿಸ್ ನೀಡಲಾಗುತ್ತದೆ. ವಾಹನ ನೋಂದಣಿ ವಿಳಾಸ ಬದಲಾದಲ್ಲಿ ನೋಟಿಸ್‌ ವ್ಯರ್ಥವಾಗುತ್ತದೆ. ಆದರೆ, ಈಗ ಎಲ್ಲ ಮಾಹಿತಿಯೂ ಮೊಬೈಲ್‌ನಲ್ಲೇ ಲಭ್ಯವಾಗುತ್ತದೆ ಅಥವಾ ಸಂಚಾರ ಪೊಲೀಸರ ವೆಬ್‌ಸೈಟ್‌ನಲ್ಲಿ, ತಮ್ಮ ವಾಹನದ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ, ಪಾವತಿ ಮಾಡಬಹುದು.

ಅಲ್ಲದೆ, ಆರ್‌ಟಿಒ ಬಳಿ ಮೊಬೈಲ್‌ ಸಂಖ್ಯೆ ದಾಖಲಾಗಿದ್ದರೆ ಸಂಚಾರ ನಿಯಮ ಉಲ್ಲಂಘಿಸಿರುವ ಮಾಹಿತಿ ನೇರ ಮೊಬೈಲ್‌ಗೆ ಎಸ್‌ ಎಂಎಸ್‌ ಮೂಲಕವೇ ಬರುತ್ತದೆ. ಅದರ ಆಧಾರದ ಮೇಲೆ, ಇ-ಚಲನ್ ಆನ್‌ಲೈನ್ ಪಾವತಿಗಾಗಿ ವಾಹನ ಸವಾರನ ಮೊಬೈಲ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ.

ಜೊತೆಗೆ ಸಂಚಾರ ಪೊಲೀಸ್‌ ವಿಭಾಗದ ಆ್ಯಪ್‌ https://btp.gov.in/ ಮೂಲಕವೂ ಪರಿಶೀಲಿಸಬಹುದು.

ಇ-ಚಲನ್‌ ಎಂದರೆ?

ಕಾಗದದ ಮೇಲೆ ನೀಡಲಾಗುತ್ತಿದ್ದ ಚಲನ್‌ಗಳಿಗೆ ಇ-ಚಲನ್ ಎಂದು ಆಧುನಿಕವಾಗಿ ಬದಲಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಸಂಚಾರ ನಿಯಮ ಉಲ್ಲಂಘನೆಯ ಆಧಾರದ ಮೇಲೆ ಇ- ಚಲನ್ ನೀಡಲಾಗುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ