Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಿರತೆ ನಿಯಂತ್ರಣಕ್ಕೆ ಕ್ರಮ ವಹಿಸಲು ಶಾಸಕ ದಿನೇಶ್ ಗೂಳಿಗೌಡ ಸೂಚನೆ


  • ಚಿರತೆ ಟಾಸ್ಕ್‌ಫೋರ್ಸ್‌ ಮುಖ್ಯಸ್ಥ ಡಿಸಿಎಫ್‌ ಸೌರಭ್‌ ಕುಮಾರ್‌ ಜತೆ  ಚರ್ಚೆ

  • ಚಿರತೆ ಸಹಾಯವಾಣಿ 9481996026 ಪ್ರಯೋಜನ ಪಡೆಯಲು ಶಾಸಕರ ಮನವಿ

ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ವಿಧಾನ ಪರಿಷತ್‌ ಮಂಡ್ಯ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಶಾಸಕ ದಿನೇಶ ಗೂಳಿಗೌಡ ಚಿರತೆ ಟಾಸ್ಕ್‌ಫೋರ್ಸ್‌ಗೆ ಸೂಚನೆ ನೀಡಿದ್ದಾರೆ.

ಚಿರತೆ ಕಂಡರೆ ಸಹಾಯವಾಣಿ 9481996026 ಕ್ಕೆ ಕರೆ ಮಾಡಿ 

ಮಂಡ್ಯ ಹಾಗೂ ಮೈಸೂರು ಎರಡು ಜಿಲ್ಲೆಗಳನ್ನು ಸೇರಿಸಿ ಚಿರತೆ ಟಾಸ್ಕ್‌ಫೋರ್ಸ್‌ ಹಾಗೂ 24X7 ಸಹಾಯವಾಣಿಯನ್ನು ಜ.31 ರಂದು ರಚಿಸಲಾಗಿದೆ.

ಡಿಸಿಎಫ್ ಅವರ ನೇತೃತ್ವದಲ್ಲಿ ಒಬ್ಬ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಾಲ್ವರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಂಟು ಫಾರೆಸ್ಟ್‌ ಗಾರ್ಡ್‌ ಹಾಗೂ 40 ಜನ ಸಹಾಯಕರನ್ನು ಈ ಟಾಸ್ಕ್‌ಫೋರ್ಸ್‌ ರಚನೆಯಾಗಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

ಸಹಾಯವಾಣಿ 9481996026 ಆಗಿದ್ದು, ಕರೆ ಮಾಡಿ ತಿಳಿಸಿದರೆ ಶೀಘ್ರದಲ್ಲೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಲಿದ್ದಾರೆ. ಸಹಾಯವಾಣಿಗೆ ಸ್ವತಃ ಕರೆ ಮಾಡಿ ಪರಿಶೀಲನೆ ನಡೆಸಿದ್ದೇನೆ. ಸದ್ಯ ದಿನಕ್ಕೆ ಮೂರ್ನಾಲ್ಕು ಕರೆಗಳು ಬರುತ್ತಿವೆ. ಜನರು ಆತಂಕಗೊಳ್ಳಬಾರದು, ಎಚ್ಚರದಿಂದ ಇರಬೇಕು. ಅಗತ್ಯ ಬಿದ್ದಾಗ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ಶಾಸಕ ದಿನೇಶ ಗೂಳಿಗೌಡ ತಿಳಿಸಿದ್ದಾರೆ.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಟಾಸ್ಕ್‌ಫೋರ್ಸ್‌ ಮುಖ್ಯಸ್ಥ ಐಎಫ್‌ಎಸ್‌ ಅಧಿಕಾರಿ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಸೌರಭ್‌ಕುಮಾರ್‌ ಅವರನ್ನು ಭಾನುವಾರ ಮಂಡ್ಯದಲ್ಲಿ ಭೇಟಿಯಾದ ಶಾಸಕರು, ಈ ಸಂಬಂಧ ಚರ್ಚೆ ನಡೆಸಿದರು.

ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ

ಮಂಡ್ಯದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಿದೆ. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆ.ಆರ್‌.ಪೇಟೆ, ಮದ್ದೂರು, ಮೇಲುಕೋಟೆ, ಮಳವಳ್ಳಿ, ನಾಗಮಂಗಲ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಾಕು ಪ್ರಾಣಿಗಳಾದ ದನ, ನಾಯಿ, ಕುರಿ,ಮೇಕೆಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ರೈತರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಜನರ ಭಯ ನಿವಾರಿಸಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅಗತ್ಯಬಿದ್ದರೆ ಬೋನ್‌ಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು. ಜನರ ರಕ್ಷಣೆಗೆ ಟಾಸ್ಕ್‌ಫೋರ್ಸ್‌ ಸನ್ನದ್ಧವಾಗಿರಬೇಕು ಎಂದರು. ಮತ್ತು ಚಿರತೆಗಳ ಹಾವಳಿ ಹೆಚ್ಚಲು ಕಾರಣಗಳ ಬಗ್ಗೆ ಚರ್ಚಿಸಿದರು.

ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ

ಈ ಸಂದರ್ಭದಲ್ಲಿ ಮಾತನಾಡಿದ ಟಾಸ್ಕ್‌ಫೋರ್ಸ್‌ ಮುಖ್ಯಸ್ಥ ಸೌರಭ್‌ ಕುಮಾರ್‌, ಚಿರತೆಗಳು ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಕಬ್ಬು ಕಟಾವಿಗೆ ಬರುವ ಅಥವಾ ಈ ಭಾಗದಲ್ಲಿ ಓಡಾಡುವ ರೈತರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ, ನಗರ ಪ್ರದೇಶದಲ್ಲಿ ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬೀದಿ ನಾಯಿಗಳು, ಹಂದಿಗಳ ಪ್ರಮಾಣ ಹೆಚ್ಚಿದೆ. ಇದರಿಂದ ಚಿರತೆಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುತ್ತಿವೆ ಎಂದು ಚಿರತೆಗಳು ಶಹರಕ್ಕೆ ಬರುತ್ತಿರುವ ಕಾರಣದ ಬಗ್ಗೆ ವಿವರಿಸಿದರು.

ಚಿರತೆಗಳ ವರ್ತನೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಗುಜರಾತ್‌ನ ಗಿರ್‌ ಅರಣ್ಯಾಧಿಕಾರಿಗಳು, ಮುಂಬೈನ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚಿರತೆಗಳನ್ನು ಹಿಡಿದಲ್ಲಿ ದೂರದ ಕಾಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿರತೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸೌರಭ್‌ಕುಮಾರ್‌ ವಿವರಿಸಿದ್ದಾರೆ ಎಂದು ಶಾಸಕ ದಿನೇಶ ಗೂಳಿಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!