Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಳಸೇತುವೆಗೆ ಆಗ್ರಹಿಸಿ ಹನಕೆರೆ ಬಳಿ ಹೆದ್ದಾರಿ ಬಂದ್ : ರೈತರ ಮೇಲೆ ಲಘು ಲಾಠಿ ಪ್ರಹಾರ


  • ರೈತರು, ಗ್ರಾಮಸ್ಥರ ಮೇಲೆ ಪೊಲೀಸರ ಲಘು ಲಾಠಿ ಪ್ರಹಾರ

  • ಹೋರಾಟ ಕೈ ಬಿಡುವಂತೆ ಮನವಿ ಮಾಡಿದ ಎಸ್ಪಿ ಎನ್.ಯತೀಶ್
  • ದೆಹಲಿಯಿಂದ ಬಂದ ಫ್ಯಾಕ್ಸ್ ಸಂದೇಶಕ್ಕೆ ಹೋರಾಟ ತಾತ್ಕಾಲಿಕ ಸ್ಥಗಿತ

ಬೆಂಗಳೂರು-ಮೈಸೂರು ಹೆದ್ದಾರಿ -275ರ ಯ ಹನಕರೆ ಮತ್ತು ಮಲ್ಲಯ್ಯನ ದೊಡ್ಡಿ ಬಳಿ ಸ್ಥಳೀಯ ಸಾರ್ವಜನಿಕರ ಓಡಾಟಕ್ಕಾಗಿ ಹೆದ್ದಾರಿ ಕೆಳಸೇತುವೆಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ.

ಬೆಳಿಗ್ಗೆ 7 ಗಂಟೆಯ ವೇಳೆಗೆ ಹನಕೆರೆ ಬಳಿ ಹೆದ್ದಾರಿ ಬಳಿ ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಜಮಾಯಿಸಲು ಪ್ರಾರಂಭಿಸಿ, ಬೆಳಿಗ್ಗೆ 8.30ರ ವೇಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಂದ್ ಮಾಡಿದರು. ಅಲ್ಲದೇ ಅಲ್ಲೆ ಶಾಮಿಯಾನ ಹಾಕಿಕೊಂಡು ಧರಣಿ ಕುಳಿತು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆನಂತರ ಸುತ್ತಮುತ್ತಲ ಗ್ರಾಮಸ್ಥರು ಈ ಹೋರಾಟಕ್ಕೆ ಕೈ ಜೋಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದರು.

ಹನಗೆರೆ ಗ್ರಾಮದಿಂದ 600 ಮೀಟರ್ ದೂರದಲ್ಲಿ ಕೆಳಸೇತುವೆ ನಿರ್ಮಾಣ ಮಾಡಿರುವುದರಿಂದ ಸುತ್ತಮುತ್ತಲ 30 ಗ್ರಾಮಗಳ ಜನರು ಸುತ್ತಿ ಬಳಸಿ ಓಡಾಡುವಂತಾಗಿದೆ. ಈ ಹಿಂದೆ ಕೆಳಸೇತುವೆ ಮಾಡಿಸುವಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಕೆಳಸೇತುವೆಯನ್ನು ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ ಜನಸಾಮಾನ್ಯರು ಶಾಲೆ-ಕಾಲೇಜುಗಳು, ಅಸ್ಪತ್ರೆ, ಡೈರಿ, ಪಶುಚಿಕಿತ್ಸಾಲಯಗಳಿಗೆ ಹೋಗಬೇಕಾದರೆ ಸುತ್ತು ಬಳಸಿ ಹೋಗುವಂತಾಗಿದೆ. ಇದರಿಂದಾಗಿ ಸ್ಥಳೀಯರಿಗೆ ತೀವ್ರವಾದ ತೊಂದರೆಯಾಗಿದೆ. ಅಲ್ಲದೆ ಈ ಹೆದ್ದಾರಿ ನಿರ್ಮಾಣದ ನಂತರ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಛಾಗಿವೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಗ್ರಾಮಗಳ ಬಳಿಯಲ್ಲೆ ಕೆಳಸೇತುವೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

ಅಧಿಕಾರಿಗಳು ತಂದ ಪತ್ರವನ್ನು ಹರಿದು ಹಾಕಿದ ಮಧುಚಂದನ್

ಕೆಳಸೇತುವೆಗಳ ನಿರ್ಮಾಣಕ್ಕೆ ಆಗ್ರಹಿಸಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಾರ್ವಜನಿಕರ ಹೋರಾಟಕ್ಕೆ ತೊಂದರೆಯಾಗುತ್ತಿದ್ದು, ಹೋರಾಟವನ್ನು ಕೈ ಬಿಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಸರ್ವೋದಯ ಕರ್ನಾಟಕ ಪಕ್ಷ ಮಂಡ್ಯ ವಿಧಾನಸಭೆ ಅಭ್ಯರ್ಥಿ ಮಧುಚಂದನ್, ಈ ಭಾಗದಲ್ಲಿ ಕೆಳಸೇತುವೆ ನಿರ್ಮಾಣ ಮಾಡುತ್ತೇವೆಂದು ಲಿಖಿತವಾಗಿ ಪತ್ರ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ರೈತರ ಹೋರಾಟ ತೀವ್ರಗೊಳ್ಳುತ್ತಿರುವುದನ್ನು ಅರಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಅಂಡರ್ ಪಾಸ್ ಮಾಡಲು ಈಗಾಗಲೇ ಸೂಚನೆ ಇದೆ ಎಂಬ ಆರ್ಡರ್ ಕಾಪಿ ತೋರಿಸಿದದರು. ಇದನ್ನು ಓದಿದ ಮಧುಚಂದನ್, ಇದು ಹಳೆಯ ಪತ್ರ. ಇದರಲ್ಲಿ ಯಾವುದೇ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಎದುರಿನಲ್ಲೆ ಪತ್ರವನ್ನು ಹರಿದು ಚೂರುಚೂರು ಮಾಡಿದರು. ‘ ನಿಮ್ಮ ಮೇಲಿನ ಅಧಿಕಾರಿಗಳಿಗೆ ಹೇಳಿ, ನಮಗೆ ಅಧಿಕೃತವಾದ ಲಿಖಿತ ಭರವಸೆ ನೀಡುವವರೆಗೆ ಈ ಹೋರಾಟ ನಿಲ್ಲುವುದಿಲ್ಲ ಎಂದು’ ಸ್ಪಷ್ಟಪಡಿಸಿದರು. ಆಗ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದರು.

ಲಘು ಲಾಠಿ ಪ್ರಹಾರ – ಮಧುಚಂದನ್ ಬಂಧನ 

ಒಂದು ಹಂತದಲ್ಲಿ ಎಸ್ಪಿ ಎನ್.ಯತೀಶ್ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಅಲ್ಲದೇ ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಇದಕ್ಕೆ ಹೋರಾಟಗಾರರು ಒಪ್ಪದ ಕಾರಣ, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಹೋರಾಟಗಾರರನ್ನು ಚದುರಿಸಿದರು. ಅಲ್ಲದೇ ಮಧುಚಂದನ್ ಅವರನ್ನು ಬಂಧಿಸಿ ಕರೆದೊಯ್ದರು.

2 ತಿಂಗಳಲ್ಲಿ ಅಂಡರ್ ಪಾಸ್ ಕಾಮಗಾರಿ

ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದ ಪ್ರತಿಭಟನಾಕಾರರಿಗೆ ಇನ್ನು 2 ತಿಂಗಳಲ್ಲಿ ಅಂಡರ್ ಪಾಸ್ ಕಾಮಗಾರಿ ಆರಂಭಿಸುವ ಭರವಸೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ್ದಾರೆ. 2 ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಬಗ್ಗೆ ದೆಹಲಿಯಿಂದ ಫ್ಯಾಕ್ಸ್ ಮೂಲಕ ಸಂದೇಶ ಬಂದ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.

nudikarnataka.com

ಈ ಹೋರಾಟದಲ್ಲಿ ಬಿ.ಗೌಡಗೆರೆ, ಕನ್ನಲಿ ಹಾಗೂ ಹನಕೆರೆ ಗ್ರಾಮ ಪಂಚಾಯಿತಿಯ ಬಹುತೇಕ ಎಲ್ಲಾ ಗ್ರಾಮಸ್ಥರು ಜಾನುವಾರುಗಳು ಹಾಗೂ ಎತ್ತಿನಗಾಡಿಯ ಸಮೇತ ಬಂದಿದ್ದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಸನ್ನ ಎನ್ ಗೌಡ, ನಾಗರೇವಕ್ಕ, ಕೆಂಪೂಗೌಡ, ಚಿಕ್ಕೈದೆ ಗೌಡ, ಮಹೇಶ್, ಸಿದ್ದೇಗೌಡ ಕೇಬಲ್ ನಾಗರಾಜ್, ಜಯರಾಮ್, ಹರೀಶ್ ಸೇರಿದಂತೆ ಅಕ್ಕ ಪಕ್ಕ ಗ್ರಾಮದ ನಿವಾಸಿಗಳು ಪ್ರತಿಭಟನೆಯಲ್ಲಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!