Thursday, September 19, 2024

ಪ್ರಾಯೋಗಿಕ ಆವೃತ್ತಿ

ಕುಟುಂಬ ರಾಜಕಾರಣ ಅಂತ್ಯ ಕಾಣಲಿದೆ: ಸಿ.ಟಿ‌‌.ರವಿ

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳಿ ಎಂದು ಯಾವ ಸಂವಿಧಾನದಲ್ಲೂ ಬರೆದಿಲ್ಲ.ಜಿಲ್ಲೆಯ ಮತದಾರರು ಪ್ರಜ್ಞಾವಂತರಾಗಿದ್ದು,ಈ ಬಾರಿಯ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜಿಲ್ಲೆಯ ಜನರು ಅಂತ್ಯ ಕಾಣಿಸಲಿದ್ದಾರೆ ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮಂಡ್ಯ ನಗರದ ಮೈಷುಗರ್ ಕ್ರೀಡಾಂಗಣದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ನಮ್ಮ ಸಂವಿಧಾನ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು
ನಮ್ಮ ಸಂವಿಧಾನ ಘೋಷ ವಾಕ್ಯವನ್ನು ಸಾರುತ್ತದೆ. ಆದರೆ, ನಮ್ಮ ದೊಡ್ಡ ಗೌಡರು ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಸ್ಥರಿಗೋಸ್ಕರ ಎಂಬ ಘೋಷ ವಾಕ್ಯ ಮಾಡಿಕೊಂಡಿದ್ದಾರೆ.ಮಗ, ಮೊಮ್ಮಗ, ಮರಿ ಮೊಮ್ಮಗನಿಗಾಗಿ ಕಣ್ಣೀರು ಹಾಕುತ್ತಾರೆ. ಆದರೆ ನಾವು ನಮ್ಮ ಪಕ್ಷಕ್ಕಾಗಿ ದುಡಿದು ಹತ್ಯೆಯಾದ ಕಾರ್ಯಕರ್ತರಿಗಾಗಿ ಕಣ್ಣೀರು ಹಾಕುತ್ತೇವೆ ಎಂದು ವ್ಯಂಗ್ಯವಾಡಿದರು.

ಕೆಲವರಿಗೆ ಗ್ಲಿಸರಿನ್ ಹಾಕಿಕೊಂಡು ಕಣ್ಣೀರು ಸುರಿಸುವ ಕಾಯಕ ಚೆನ್ನಾಗಿ ಅರಿತಿದೆ. ಮಂಡ್ಯ ಜಿಲ್ಲೆಯ ಜನರನ್ನು ಕರೆಯುವ ಬದಲು ತನ್ನ ಮಗನನ್ನು ಎಲ್ಲಿದ್ದೀಯಪ್ಪಾ ಎಂದು ಕರೆದು ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನವನ್ನು ಕೆಣಕಿದವರಿಗೆ ಜನತೆ ಸ್ವಾಭಿಮಾನದ ಪೆಟ್ಟು ನೀಡಿ ನಮ್ಮ ಅಂಬರೀಶಣ್ಣನ ಪತ್ನಿ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ ಎಂದು ಕುಮಾರಸ್ವಾಮಿಗೆ ಕುಟುಕಿದರು.

ನಮ್ಮ ದೊಡ್ಡ ಗೌಡರು ನಮ್ಮ ಮತ ಪಡೆದು ಅಧಿಕಾರ ನಡೆಸಿ, ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುತ್ತೇನೆ ಎನ್ನುತ್ತಾರೆ. ಮುಸಲ್ಮಾನ ಧರ್ಮದಲ್ಲಿ ಮುಂದಿನ ಜನ್ಮದ ಬಗ್ಗೆ ನಂಬಿಕೆ ಇಲ್ಲ. ಅದು ಹಿಂದೂಗಳಿಗೆ ಮಾತ್ರ. ಹಾಗಾದರೆ ದೇವೇಗೌಡರು ಈಗಲೇ ಮುಸ್ಲಿಮರಾಗಲಿ ಎಂದು ಸವಾಲು ಹಾಕಿದರು.

ಎಚ್.ಡಿ. ದೇವೇಗೌಡ ಕುಟುಂಬದ ರಾಜಕೀಯ ಮರ್ಮವನ್ನು ಜಿಲ್ಲೆಯ ಜನ ಅರಿಯಬೇಕು. ಸತ್ಯ ಹೇಳಿದರೆ ಅವರಿಗೆ ಹಿಡಿಯುವುದಿಲ್ಲ. ನಾನು ಮುಂದಿನ ಜನ್ಮದಲ್ಲೂ ಹಿಂದೂ ಮತ್ತು ಕನ್ನಡಿಗನಾಗಿ ಜನಿಸಲು ಇಷ್ಟಪಡುತ್ತೇನೆ ಎಂದರು.

ಜಯಚಾಮರಾಜೇಂದ್ರ ಒಡೆಯರ್, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ನಾವು ಸ್ಮರಿಸುತ್ತೇವೆ. ಏಕೆಂದರೆ ಅವರು ಕನ್ನಂಬಾಡಿ ಅಣೆಕಟ್ಟ ಶಿಕ್ಷಣ ಸಂಸ್ಥೆ, ಮೈಷುಗರ್ ಕಾರ್ಖಾನೆ, ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪನೆ ಮಾಡಿದ್ದಾರೆ. ಅಂತಹವರ ಸ್ಮರಣೆ ಮಾಡುವ ಬದಲು ಕಾಂಗ್ರೆಸ್ ಟಿಪ್ಪು ಸ್ಮರಣೆ ಮಾಡುತ್ತಿದೆ.ನಾಲ್ವಡಿ ಅವರ ಸ್ಮರಣೆ ಏಕಿಲ್ಲ ಎಂದು ಪ್ರಶ್ನಿಸಿದರು.

ಸಂತ ಶಿಶುನಾಳ ಶರೀಫ ಹಾಗೂ ಅಬ್ದುಲ್ ಕಲಾಂ ಅವರ ಜಪ ಮಾಡಿ ಅಂದರೆ, ಹಿಂದೂಗಳ ಕೊಂದವರ ಜಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಪೂರ್ವಿಕರು ಕನ್ನಡ ಭಾಷೆಯನ್ನೇ ಮಾತನಾಡಿ ಬೆಳೆಸಿದ್ದಾರೆ. ಆದರೆ, ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಪಾರ್ಸಿ ಭಾಷೆಯನ್ನು ಆಡಳಿತ ಭಾಷೆಯಾಗಿ ರೂಪಿಸಿದ್ದಾರೆ. ಇಂತಹವರನ್ನು ಕನ್ನಡ ಪ್ರೇಮಿ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಿಂಬಿಸುತ್ತದೆ. ಇಂತಹವರಿಗೆ ಬುದ್ಧಿ ಕಲಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್, ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶೃತ್ ನಾಗೇಂದ್ರ, ಮುಖಂಡರಾದ ಡಾ. ಸಿದ್ದರಾಮಯ್ಯ, ಅಶೋಕ್ ಜಯರಾಂ, ಜಗದೀಶ್ ಹಿರೇಮನಿ, ಫೈಟರ್ ರವಿ, ಮುನಿರಾಜು, ಡಾ. ಇಂದ್ರೇಶ್, ಎಸ್.ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ಚಂದಗಾಲು ಶಿವಣ್ಣ, ಕೆ.ಎಸ್.ನಂಜುಂಡೇಗೌಡ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!