Friday, September 20, 2024

ಪ್ರಾಯೋಗಿಕ ಆವೃತ್ತಿ

ಉರಿಗೌಡ ನಂಜೇಗೌಡ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗ : ”ಸುಳ್ಳು ಇತಿಹಾಸ ಸೃಷ್ಟಿಸಬೇಡಿ” ಎಂದ ನಿರ್ಮಲಾನಂದಶ್ರೀ

ವಿಶೇಷ ವರದಿ

‘ಉರಿಗೌಡ ನಂಜೇಗೌಡ ವಿಚಾರವನ್ನು ಮುನ್ನೆಲೆಗೆ ತಂದು ಮಂಡ್ಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕರು ಈಗ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಏಕೆಂದರೆ ಒಕ್ಕಲಿಗ ಆರಾಧ್ಯ ದೈವ್ಯ ಎಂದೇ ಕರೆಸಿಕೊಳ್ಳುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಕೆಲವು ಬಿಜೆಪಿ ನಾಯಕರ ವಿರುದ್ಧ ಸಿಡಿಮಿಡಿಕೊಂಡು ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಉರಿಗೌಡ ನಂಜೇಗೌಡ ವಿಚಾರವನ್ನು ಮುನ್ನೆಲೆಗೆ ತಂದು, ಮಂಡ್ಯದಲ್ಲಿ ರಾಜಕಾರಣ ಮಾಡುವ ಭರದಲ್ಲಿ ಬಿಜೆಪಿ ಮುಖಂಡರು ಉರಿಗೌಡ ನಂಜೇಗೌಡ ಎಂಬುವವರು ಟಿಪ್ಪುವನ್ನು ಕೊಂದರು ಎಂದು ಬಿಂಬಿಸಲು ಪ್ರಯತ್ನ ನಡೆಸಿದ್ದರು. ಆದರೆ ಇದಕ್ಕೆ ನಾಡಿನ ವಿಚಾರವಾದಿಗಳು ಹಾಗೂ ಪ್ರಗತಿಪರ ಮುಖಂಡರು ಹಾಗೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಿಷ್ಟೆ ಅಲ್ಲದೇ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಮಂಡ್ಯದಲ್ಲಿ ಬಿಜೆಪಿ ಮುಖಂಡರು ಉರಿಗೌಡ ನಂಜೇಗೌಡ ದ್ವಾರವನ್ನು ನಿರ್ಮಾಣ ಮಾಡಿದ್ದರು. ಆದರೆ ವಿಪಕ್ಷ ನಾಯಕರ ಸಿದ್ದರಾಮಯ್ಯ ಸೇರಿದಂತೆ ನಾಡಿನ ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ರಾತ್ರೋರಾತ್ರಿ ಆ ದ್ವಾರವನ್ನು ತೆರವು ಮಾಡಲಾಗಿತ್ತು.

ಇದಾದ ನಂತರ ಟಿಪ್ಪುವಿನ ಕುರಿತ ಲಾವಣೆಯಲ್ಲಿ ಉರಿಗೌಡ ನಂಜೇಗೌಡರ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎಂದು ಹೊಸ ಲಾವಣೆಯೊಂದನ್ನು ಸೃಷ್ಠಿ ಮಾಡಲಾಗಿತ್ತು. ಈ ಲಾವಣಿಯನ್ನು ಹ.ಕ.ರಾಜೇಗೌಡರು ಸಂಗ್ರಹಿಸಿದ್ದಾರೆಂದು ಕಥೆ ಕಟ್ಟಲಾಗಿತ್ತು. ಈ ಲಾವಣಿಯಯು ಇತ್ತಿಚೇಗೆ ಸೃಷ್ಠಿಸಿದ್ದು ಎಂದು ಪ್ರಗತಿಪರರು ಸಾಬೀತುಪಡಿಸಿ ಬಿಜೆಪಿ ಮುಖಂಡರ ನಡೆಯನ್ನು ಬಟಬಯಲು ಮಾಡಿದ್ದರು. ಅನಂತರ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಅವರು ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಪ್ರತಿಮೆ ಮಾಡುವುದು ಶತಸಿದ್ದ ಘೋಷಣೆ ಮಾಡಿದರು ಇದಕ್ಕೂ ಮೊದಲು ಇಂತಹದ್ದೇ ಹೇಳಿಕೆಯನ್ನು ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ಅವರೂ ನೀಡಿದ್ದರು.

ಬಿಜೆಪಿ ನಾಯಕರ ಹೇಳಿಕೆಗೆ ವ್ಯಾಪಕ ವಿರೋಧ 

ಉರಿಗೌಡ ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳು ಮುನ್ನೆಲೆಗೆ ತಂದು ಬಿಜೆಪಿ ಕೋಮು ಗಲಭೆ ಎಬ್ಬಿಸಲು ಹುನ್ನಾರ ನಡೆಸಿದೆ ಎಂದು ನಾಡಿನ ವಿಚಾರವಾದಿಗಳು, ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಅವರು, ಉರಿಗೌಡ ನಂಜೇಗೌಡನ ಇರುವಿಕೆಯನ್ನು ದಾಖಲೆಗಳ ಮೂಲಕ ಸಾಬೀತು ಪಡಿಸಿದರೆ ತಲೆ ಬೋಳಿಸಿಕೊಂಡು ಕತ್ತೆ ಮೇಲೆ ಮೆರವಣಿಗೆ ಹೊರಡುತ್ತೇನೆಂದು ಸವಾಲ್ ಹಾಕಿದ್ದರು. ಆನಂತರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಿಜೆಪಿ ಮುಖಂಡರ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದಾದ ನಂತರ ಬಿಜೆಪಿ ಸಚಿವ ಮುನಿರತ್ನ, ಉರಿಗೌಡ, ನಂಜೇಗೌಡ ಕುರಿತು ಸಿನಿಮಾ ತಯಾರು ಮಾಡುವುದಾಗಿ, ಚಲನಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿ, ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದರು.

ನಿರ್ಮಲಾನಂದನಾಥ ಸ್ವಾಮೀಜಿ ರಂಗ ಪ್ರವೇಶ

ಇಷ್ಟೆಲ್ಲಾ ನಡೆಯುವವರೆಗೆ ಸುಮ್ಮನಿದ್ದ ನಿರ್ಮಲಾನಂದಶ್ರೀ ಅವರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಹಾಗೂ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕ ವಿರುದ್ಧ ತಿರುಗಿ ಬೀಳುತ್ತಿದ್ದಂತೆ ಎಚ್ಚೆತ್ತಕೊಂಡು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಸಚಿವ ಮುನಿರತ್ನರನ್ನು ಕರೆಸಿಕೊಂಡು ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಚಿತ್ರ ನಿರ್ಮಾಣ ಮಾಡುವುದು ಬೇಡ ಎಂದು ತಾಕೀತು ಮಾಡಿ ಕಳಿಸಿದ್ದಾರೆ.

ಬಿಜೆಪಿ ನಾಯಕರಿಗೆ ನೀತಿಪಾಠ

‘ಯಾವುದೇ ಒಂದು ಸಮುದಾಯದಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಸಿ.ಟಿ. ರವಿ, ಅಶ್ವತ್ಥ್ ನಾರಾಯಣ್ ಅನಗತ್ಯವಾಗಿ ಉರಿಗೌಡ ನಂಜೇಗೌಡರ ಬಗ್ಗೆ ಹೇಳಿಕೆ ನೀಡುವುದು ಬೇಡ. ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಬೇಕು. ನಾನು ಹ.ಕ.ರಾಜೇಗೌಡರ ಕೃತಿಯನ್ನು ಓದಿದ್ದೇನೆ. ಅವರು ಎಲ್ಲಿಯೂ ಟಿಪ್ಪುವಿನೊಂದಿಗೆ ಉರಿಗೌಡ, ನಂಜೇಗೌಡ ಹೆಸರನ್ನು ಪ್ರಸ್ತಾಪ ಮಾಡಿಲ್ಲ, ಹೀಗಿರುವಾಗ ಯಾವುದೇ ಸೂಕ್ತ ಆಧಾರಗಳಿಲ್ಲದೇ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ಬೇಡ’ ಎಂದು ನಿರ್ಮಲಾನಂದಶ್ರೀ ಬಿಜೆಪಿ ಮುಖಂಡರಿಗೆ ನೀತಿ ಪಾಠ ಹೇಳಿದ್ದಾರೆ.

ಅಲ್ಲದೇ ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ಸೃಷ್ಟಿ ಮಾಡಲು ಸಾಧ್ಯ. ಪೂರಕವಾದ ಸಾಕ್ಷ್ಯಾಧಾರಗಳಿಲ್ಲದೇ ಕಥೆ ಕಟ್ಟುವುದಕ್ಕೆ ಇದೆನೂ ಕಾದಂಬರಿಯಲ್ಲ. ಆಗಿನ ಸಮಕಾಲೀನ ಇತಿಹಾಸಕಾರರು ದಾಖಲಿಸುವ ವಿಷಯಗಳನ್ನು ವಾಸ್ತವಗಳೆಂದು ಪರಿಗಣಿಸಬಹುದೆ ವಿನಃ ಇತ್ತೀಚೆಗೆ ಯಾರೋ ಬರೆದ ಬರವಣಿಗೆಯನ್ನು ಇತಿಹಾಸ ಎಂದು ನಂಬಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪನ ವಿರುದ್ದ ಕಿಡಿಕಾರಿದ್ದಾರೆ.

ಚಿತ್ರಕಥೆ ಬರೆಯುವುದಿಲ್ಲ ಎಂದ ಅಶ್ವತ್ ನಾರಾಯಣ್

ಉರಿಗೌಡ ನಂಜೇಗೌಡ ಚಿತ್ರಕ್ಕೆ ನಾನು ಚಿತ್ರಕಥೆ ಬರೆಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಅಲ್ಲದೇ ನಿರ್ಮಲಾನಂದಶ್ರೀ ಜೊತೆ ಮಾತುಕತೆ ನಡೆಸಿದ ನಂತರ ಸಚಿವ ಮುನಿರತ್ನ ಅವರು, ಉರಿಗೌಡ ನಂಜೇಗೌಡ ಚಿತ್ರ ನಿರ್ಮಾಣವನ್ನು ಕೈಬಿಟ್ಟಿದ್ದೇನೆ. ಉರಿಗೌಡ ನಂಜೇಗೌಡರ ಬಗ್ಗೆ ಕೆಲವು ಗೊಂದಲಗಳಿವೆ. ಹಾಗಾಗಿ ಚಿತ್ರ ನಿರ್ಮಾಣ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!